ಭಾರತದ ವೈಮಾನಿಕ ಸಾಮರ್ಥ್ಯ ಪ್ರದರ್ಶನದಲ್ಲಿ ಮೊದಲ ಬಾರಿ ಪಾಲ್ಗೊಂಡು ಮನಸೂರೆಗೈದ ಚಿನೂಕ್, ಅಪಾಚೆ ಕಾಪ್ಟರ್‌ಗಳು

Update: 2020-01-26 15:08 GMT

ಹೊಸದಿಲ್ಲಿ,ಜ.26: ಹಲವು ಪ್ರಥಮಗಳನ್ನೊಳಗೊಂಡ ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಸಂದರ್ಭ ಭಾರತೀಯ ವಾಯುಪಡೆ (ಐಎಎಫ್)ಯ ಫ್ಲೈಪಾಸ್ಟ್ ಅಥವಾ ವೈಮಾನಿಕ ಪಥಸಂಚಲನದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿದ್ದ ಭಾರೀ ಸಾಮರ್ಥ್ಯದ ಚಿನೂಕ್ ಸಾರಿಗೆ ಮತ್ತು ಅಪಾಚೆ ದಾಳಿ ಹೆಲಿಕಾಪ್ಟರ್ ಗಳು ವೀಕ್ಷಕರ ಮನಸೆಳೆದವು. ಇವೆರಡೂ ಹೆಲಿಕಾಪ್ಟರ್ ‌ಗಳು ಇತ್ತೀಚಿಗಷ್ಟೇ ಐಎಎಫ್‌ನಲ್ಲಿ ಸೇರ್ಪಡೆಗೊಂಡಿವೆ.

ಚಿನೂಕ್ ದುರ್ಗಮ ಪ್ರದೇಶಗಳಿಗೆ ಭಾರೀ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅವಳಿ ರೋಟರ್‌ಗಳನ್ನು ಹೊಂದಿರುವ ಈ ಹೆಲಿಕಾಪ್ಟರ್ ಐಎಎಫ್‌ನ ಮಿಲಿಟರಿ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.

ಬಹುಮುಖ ಸಾಮರ್ಥ್ಯ ಹೊಂದಿರುವ ಅಪಾಚೆ ಯುದ್ಧ ಹೆಲಿಕಾಪ್ಟರ್ ಆಗಿದ್ದು, ಆಗಸಕ್ಕೆ ಮತ್ತು ಆಗಸದಿಂದ ಭೂಮಿಗೆ ಕ್ಷಿಪಣಿಗಳು,ರಾಕೆಟ್‌ಗಳನ್ನು ಉಡಾಯಿಸಲು ಸಮರ್ಥವಾಗಿದೆ. ಅಪಾಚೆಗೆ ಅಳವಡಿಸಲಾಗಿರುವ ಫೈರ್ ಕಂಟ್ರೋಲ್ ರಾಡಾರ್ ನೆರವಿನ ಫ್ರಂಟ್ ಗನ್ ವೈರಿಯ ಮೇಲೆ ಮಾರಣಾಂತಿಕ ದಾಳಿಯನ್ನು ನಡೆಸುವ ತಾಕತ್ತನ್ನು ಹೊಂದಿದೆ.

ಎಎಲ್‌ಎಚ್ ಧ್ರುವ,ಎಂಐ-17ಹೆಲಿಕಾಪ್ಟರ್,ಡಾರ್ನಿಯರ್ ವಿವಿಧೋದ್ದೇಶ ವಿಮಾನ,ಸಿ-130ಜೆ ಸುಪರ್ ಹರ್ಕ್ಯುಲಸ್ ವಿಮಾನ,ಡಿಆರ್‌ಡಿಒ ಅಭಿವೃದ್ಧಿಗೊಳಿಸಿರುವ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ,ಸಿ-17 ಗ್ಲೋಬ್‌ಮಾಸ್ಟರ್ ಬೃಹತ್ ಸಾರಿಗೆ ವಿಮಾನ,ಜಾಗ್ವಾರ್ ಯುದ್ಧವಿಮಾನ,ನವೀಕೃತ ಮಿಗ್-29 ಸುಪೀರಿಯರ್ ಫೈಟರ್ ಜೆಟ್ ಮತ್ತು ಸುಖೋಯಿ ಎಸ್‌ಯು-30 ಎಂಕೆಐ ಯುದ್ಧ ವಿಮಾನಗಳೂ ಫ್ಲೈಪಾಸ್ಟ್‌ನಲ್ಲಿ ಐಎಎಫ್‌ನ ಶಕ್ತಿಯನ್ನು ಪ್ರದರ್ಶಿಸಿದವು.

 ಐಎಎಫ್ ತನ್ನ ಪ್ರಾಬಲ್ಯ ಮತ್ತು ವೈಭವವನ್ನು ಸ್ತಬ್ಧಚಿತ್ರಗಳ ಮೂಲಕವೂ ಪ್ರದರ್ಶಿಸಿತು. ಇತ್ತೀಚಿಗೆ ವಾಯುಪಡೆಗೆ ಸೇರ್ಪಡೆಗೊಂಡಿರುವ ರಫೇಲ್ ಯುದ್ಧ ವಿಮಾನ ಮತ್ತು ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್,ಲಘು ಯುದ್ಧ ಹೆಲಿಕಾಪ್ಟರ್,ಭೂಮಿಯಿಂದ ಆಗಸಕ್ಕೆ ನಿರ್ದೇಶಿತ ಅಸ್ತ್ರಗಳಾದ ಆಕಾಶ ಮತ್ತು ಅಸ್ತ್ರ ಕ್ಷಿಪಣಿಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ರಾಜಗಾಂಭೀರ್ಯದಿಂದ ಸಾಗಿದವು.

ಪಥಸಂಚಲನದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಶ್ರೀಕಾಂತ ಶರ್ಮಾ ಅವರು ಸತತ ಎರಡನೇ ಬಾರಿಗೆ 114 ಯೋಧರನ್ನೊಳಗೊಂಡ ವಾಯುಪಡೆ ತುಕಡಿಯನ್ನು ಮುನ್ನಡೆಸಿದರೆ ವಾರಂಟ್ ಆಫೀಸರ್ ಅಶೋಕ ಕುಮಾರ ಅವರು ಐಎಎಫ್ ವಾದ್ಯವೃಂದದ ನೇತೃತ್ವ ವಹಿಸಿದ್ದರು. ಲೆ.ಗಗನದೀಪ ಗಿಲ್ ಮತ್ತು ಫ್ಲೈ.ಲೆ.ರೀಮಾ ರಾಯ್ ಅವರು ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದರು.

16 ಯುದ್ಧವಿಮಾನಗಳು,10 ಸಾರಿಗೆ ವಿಮಾನಗಳು ಮತ್ತು 19 ಹೆಲಿಕಾಪ್ಟರ್‌ಗಳಿಂದ ಆಗಸದಲ್ಲಿ ವಿವಿಧ ಆಕೃತಿಗಳ ರಚನೆ ಮತ್ತು ವೈಮಾನಿಕ ಕಸರತ್ತುಗಳೊಂದಿಗೆ ಫ್ಲೈಪಾಸ್ಟ್ ಅನ್ನು ಎರಡು ಹಂತಗಳಲ್ಲಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News