ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ: ನೇಪಾಳ ಸ್ಪಷ್ಟನೆ

Update: 2020-01-26 16:35 GMT

  ಕಠ್ಮಂಡು,ಜ.25: ವಿವಾದಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಭಾರತ ಸರಕಾರ ಹಾಗೂ ಆ ದೇಶದ ಜನತೆಯ ಆಂತರಿಕ ವಿಷಯವಾಗಿದೆಯೆಂದು ನೇಪಾಳ ತನ್ನ ನಿಲುವನ್ನು ರವಿವಾರ ಸ್ಪಷ್ಟಪಡಿಸಿದೆ.

  ಇತ್ತೀಚೆಗೆ ಪೌರತ್ವ ನೋಂದಣಿ ಪ್ರಕ್ರಿಯೆಯು ಅಸ್ಸಾಂನಲ್ಲಿ ಪೂರ್ಣಗೊಂಡ ಬಳಿಕ ಸುಮಾರು 1 ಲಕ್ಷ ಮಂದಿ ನೇಪಾಳಿ ಮೂಲದ ಗೂರ್ಖಾಗಳನ್ನು ಪೌರತ್ವ ನೋಂದಣಿ ಪಟ್ಟಿಯಿಂದ ಹೊರಗಿಡಲಾಗಿದೆಯೆಂದು ವರದಿಯಾಗಿತ್ತು.ಈ ವಿಷಯವಾಗಿ ಗೂರ್ಖಾ ಸಮುದಾಯದ ಸದಸ್ಯರು ನೇಪಾಳ ಸರಕಾರದಿಂದ ಸಹಾಯ ಕೋರಿದ್ದಾರೆಂಬ ವರದಿಗಳ ಬಗ್ಗೆ ಕಠ್ಮಂಡು ಪ್ರವಾಸದಲ್ಲಿರುವ ಭಾರತೀಯ ಪತ್ರಕರ್ತರ ನಿಯೋಗವೊಂದರ ಪ್ರಶ್ನೆಗೆ ಉತ್ತರಿಸಿದ ನೇಪಾಳದ ಹಿರಿಯ ಅಧಿಕಾರಿಯೊಬ್ಬರು, ಎನ್‌ಆರ್‌ಸಿಯಿಂದಾಗಿ ನೇಪಾಳಿ ಭಾಷಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆಂದು ಹೇಳಿದರು.

 ಆದಾಗ್ಯೂ ಎನ್‌ಆರ್‌ಸಿ ಕುರಿತಾಗಿ ಭಾರತ ಸರಕಾರದ ಜೊತೆ ಮಾತನಾಡಿಲ್ಲವೆಂದು ಅವರು ಹೇಳಿದರು. ಎನ್‌ಆರ್‌ಸಿ ವಿವಾದವು ಭಾರತದ ಆಂತರಿಕ ವಿಷಯವಾಗಿದ್ದು, ಅದನ್ನು ಭಾರತೀಯ ಜನತೆ ಬಗೆಹರಿಸಬೇಕಾಗಿದೆ ಎಂದು ನೇಪಾಳ ಸರಕಾರದ ಮೂಲಗಳು ತಿಳಿಸಿವೆ.

ಭಾರತದಲ್ಲಿರುವ ನೇಪಾಳಿ ಭಾಷಿಕರು ಭಾರತೀಯರೇ ಆಗಿದ್ದು ಮೂಲತಃ ಅವರು ಬಹಳ ಸಮಯದ ಹಿಂದೆ ಭಾರತದಿಂದ ಬೇರ್ಪಟ್ಟ ಪ್ರಾಂತವೊಂದಕ್ಕೆ ಸೇರಿದವರೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News