ಹೆಲಿಕಾಪ್ಟರ್ ಅಪಘಾತದಲ್ಲಿ ಬಾಸ್ಕೆಟ್‌ಬಾಲ್ ಮಾಂತ್ರಿಕ ಕೋಬ್ ಬ್ರಿಯಾಂಟ್, ಅವರ ಪುತ್ರಿ ಸಹಿತ 9 ಮಂದಿ ಮೃತ್ಯು

Update: 2020-01-27 03:54 GMT

ಲಾಸ್‌ ಏಂಜಲೀಸ್, ಜ.27: ಲಾಸ್‌ ಏಂಜಲೀಸ್ ಲೇಕರ್ಸ್‌ಗೆ ಐದು ಬಾರಿ ಎನ್‌ಬಿಎ ಚಾಂಪಿಯನ್‌ಶಿಪ್ ಗೆದ್ದುಕೊಟ್ಟ, ಬಾಸ್ಕೆಟ್‌ಬಾಲ್ ಮಾಂತ್ರಿಕ ಕೋಬ್ ಬ್ರಿಯಾಂಟ್ (41) ರವಿವಾರ ಸಂಭವಿಸಿದ ಹೆಲಿಕಾಪ್ಟರ್ ಅವಪಘಾತದಲ್ಲಿ ಮೃತಪಟ್ಟಿದ್ದಾರೆ. ಬ್ರಿಯಾಂಟ್ ಅವರ 13 ವರ್ಷದ ಪುತ್ರಿ ಗಿಯಾನ್ನ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಇತರ ಏಳು ಮಂದಿ ಕೂಡಾ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ರವಿವಾರ ಸಂಜೆ 6 ಗಂಟೆಯ ವೇಳೆಗೆ ಲಾಸ್ ಏಂಜಲೀಸ್‌ನಿಂದ 40 ಮೈಲು ದೂರದ ಕಲಬಸಾಸ್ ಎಂಬ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಕಾಪ್ಟರ್‌ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಬ್ರಿಯಾಂಟ್ ಪುತ್ರಿಯ ಬಾಸ್ಕೆಟ್‌ಬಾಲ್ ತಂಡದ ಸಹ ಆಟಗಾರ್ತಿ, ಸಹ ಆಟಗಾರ್ತಿಯ ತಂದೆ ಮತ್ತು ಪೈಲಟ್ ಸೇರಿದಂತೆ ಒಟ್ಟು ಮಂದಿ ಸಾವನ್ನಪ್ಪಿದ್ದಾರೆ.

"ಈ ಘಟನೆಯಿಂದ ಆಗಿರುವ ಆಘಾತವನ್ನು ವಿವರಿಸಲು ಶಬ್ದಗಳೇ ಸಿಗುತ್ತಿಲ್ಲ. ಈ ಶೋಕದ ಸಂದರ್ಭದಲ್ಲಿ ಅವರ ಕುಟುಂಬದ ಜತೆ ನಮ್ಮ ಪಾರ್ಥನೆ ಇರುತ್ತದೆ" ಎಂದು ಲಾಸ್‌ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಪ್ರಕಟನೆಯಲ್ಲಿ ಹೇಳಿದ್ದಾರೆ. ಬ್ರಿಯಾಂಟ್ ಸಾವು ಎನ್‌ಬಿಎ ಆಟಗಾರರಲ್ಲಿ ಆಘಾತಕ್ಕೆ ಕಾರಣವಾಗಿದೆ. ಸ್ಯಾನ್ ಆಂಟೋನಿಯೊ, ಟೊರೊಂಟೊ ರ್ಯಾಪ್ಟರ್ಸ್‌, ಸ್ಯಾನ್ ಆಂಟೋನಿಯೊ ಸ್ಪರ್ಸ್‌ ಮತ್ತಿತರ ಕ್ಲಬ್‌ಗಳು ಸರ್ವಶ್ರೇಷ್ಠ ಆಟಗಾರನಿಗೆ ಗೌರವ ಸಮರ್ಪಿಸಿವೆ.

"ಬಹುತೇಕ ಮಂದಿ ಕೋಬ್ ಅವರನ್ನು ಈ ಪೀಳಿಗೆಯ ಬಾಸ್ಕೆಟ್‌ಬಾಲ್ ಆಟಗಾರರಿಗೆ ಸ್ಫೂರ್ತಿಯ ಚಿಲುಮೆ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ನಾನು ಅವರನ್ನು ಒಬ್ಬ ಅಥ್ಲೀಟ್‌ಗಿಂತ ಹೆಚ್ಚಿನ ಶಕ್ತಿ ಎಂದು ಪರಿಗಣಿಸುತ್ತೇನೆ" ಎಂದು ಗರಿಷ್ಠ ಬಾಸ್ಕೆಟ್‌ಬಾಲ್ ಸ್ಕೋರ್ ದಾಖಲೆ ಹೊಂದಿರುವ ಕರೀಮ್ ಅಬ್ದುಲ್ ಜಬ್ಬಾರ್ ಟ್ವೀಟ್ ಮಾಡಿದ್ದಾರೆ.

ಸಾವಿರಾರು ಬಾಸ್ಕೆಟ್‌ಬಾಲ್ ಪ್ರೇಮಿಗಳು ಕಣ್ಣೀರು ಮಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಹಲವರು ಪುಷ್ಪಗುಚ್ಚ ಮತ್ತು ಬಾಸ್ಕೆಟ್‌ಬಾಲ್ ಬೂಟುಗಳನ್ನಿರಿಸಿ ಗೌರವ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News