ನ್ಯೂಝಿಲ್ಯಾಂಡ್ ವಿರುದ್ಧ ಸೋತ ಭಾರತ ‘ಎ’

Update: 2020-01-27 04:22 GMT

ಕ್ರೈಸ್ಟ್‌ಚರ್ಚ್, ಜ.26: ಇಶಾನ್ ಕಿಶನ್ ಏಕಾಂಗಿ ಹೋರಾಟದ(ಔಟಾಗದೆ 71)ಹೊರತಾಗಿಯೂ 9 ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ‘ಎ’ ತಂಡ ನ್ಯೂಝಿಲ್ಯಾಂಡ್ ‘ಎ’ ವಿರುದ್ಧ ರವಿವಾರ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯವನ್ನು ಕೇವಲ 5 ರನ್‌ನಿಂದ ಸೋತಿದೆ.

ಭಾರತಕ್ಕೆ ಸರಣಿ ಗೆಲ್ಲಲು 271 ರನ್ ಗಳಿಸಬೇಕಾಗಿತ್ತು. ಭಾರತಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು 7 ರನ್ ಅಗತ್ಯವಿತ್ತು. ಕೈಯಲ್ಲಿ 2 ವಿಕೆಟ್ ಇತ್ತು. ಆದರೆ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕಿಶನ್ 2ನೇ ಎಸೆತದಲ್ಲಿ ಒಂದು ರನ್ ಗಳಿಸಿ ಬಾಲಂಗೋಚಿಗಳಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಆದರೆ ಕಿಶನ್ ಈ ನಿರ್ಧಾರ ದುಬಾರಿಯಾಗಿ ಪರಿಣಮಿಸಿದ್ದು, ವೇಗದ ಬೌಲರ್ ಕೈಲ್ ಜಮೀಸನ್(4-49)ಸತತ ಎಸೆತಗಳಲ್ಲಿ ಸಂದೀಪ್ ವಾರಿಯರ್ ಹಾಗೂ ಇಶಾನ್ ಪೊರೆಲ್ ವಿಕೆಟ್‌ಗಳನ್ನು ಉರುಳಿಸಿದರು. ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಕಿವೀಸ್‌ಗೆ ಗೆಲುವು ತಂದರು.

ಭಾರತ ‘ಎ’ ತಂಡ 49ನೇ ಓವರ್‌ನಲ್ಲಿ ಅಕ್ಷರ್ ಪಟೇಲ್(32) ಹಾಗೂ ರಾಹುಲ್ ಚಹಾರ್(0)ವಿಕೆಟನ್ನು ಕಳೆದುಕೊಂಡಿತು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಕಿವೀಸ್ ಗೆಲುವಿನ ನಗೆ ಬೀರಿತು.

ಮೊದಲ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ(55) ಹಾಗೂ ಋತುರಾಜ್ ಗಾಯಕ್ವಾಡ್(44)ಭಾರತ ‘ಎ’ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ನಾಯಕ ಮಾಯಾಂಕ್ ಅಗರ್ವಾಲ್(22)ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು. ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳ ಪೈಕಿ ಕಿಶನ್ ಹಾಗೂ ಅಕ್ಷರ್ ಮಾತ್ರ ಒಂದಷ್ಟು ಪ್ರತಿರೋಧ ತೋರಿದರು. ಸೂರ್ಯಕುಮಾರ ಯಾದವ್(5) ಹಾಗೂ ವಿಜಯ ಶಂಕರ್(19)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನ್ಯೂಝಿಲ್ಯಾಂಡ್ ‘ಎ’ ತಂಡದ ಎಡಗೈ ಸ್ಪಿನ್ ಬೌಲರ್‌ಗಳಾದ ಅಜಾಝ್ ಪಟೇಲ್(3-44) ಹಾಗೂ ರಚಿತ್ ರವೀಂದ್ರ(2-43)ಭಾರತದ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಸಾಕಷ್ಟು ಹಾನಿ ಮಾಡಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ‘ಎ’ ತಂಡ ಒಂದು ಹಂತದಲ್ಲಿ 105 ರನ್‌ಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಟಾಡ್ ಅಸ್ಲ್ಟೆ(56)ಅವರೊಂದಿಗೆ ಏಳನೇ ವಿಕೆಟ್‌ಗೆ 136 ರನ್ ಜೊತೆಯಾಟ ನಡೆಸಿದ ಮಾರ್ಕ್ ಚಾಪ್‌ಮನ್(110 ರನ್)ತಂಡವನ್ನು ಆಧರಿಸಿದರು. ಭಾರತ ‘ಎ’ ತಂಡ ಮೊದಲ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ನ್ಯೂಝಿಲ್ಯಾಂಡ್ ಉಳಿದೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಇದೀಗ ಉಭಯ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಡಲಿವೆ. ಜನವರಿ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News