ದುಬೈ: ಉದ್ಯೋಗ ಕೇಳಿದ ಕೇರಳದ ಯುವಕನಿಗೆ 'ಶಾಹೀನ್ ಬಾಗ್ ಗೆ ಹೋಗು' ಎಂದ ಸಂಸ್ಥೆಯ ಮಾಲಕ!

Update: 2020-01-27 10:03 GMT

ದುಬೈ: ದುಬೈಯಲ್ಲಿ ಉದ್ಯೋಗ ಅರಸುತ್ತಿದ್ದ ಕೇರಳದ ವ್ಯಕ್ತಿಯೊಬ್ಬರನ್ನು ಸಂಸ್ಥೆಯ ಮಾಲಕನೊಬ್ಬ ಅಪಹಾಸ್ಯಗೈದು ಉದ್ಯೋಗ ಅರಸುವ ಬದಲು ದಿಲ್ಲಿಯ ಶಾಹೀನ್ ಬಾಗ್ ನಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಜತೆಗೂಡಿ ಜೀವನ ನಡೆಸಬೇಕೆಂದು ಹೇಳಿದ ಘಟನೆ ವರದಿಯಾಗಿದೆ.

ದುಬೈಯಲ್ಲಿನ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗೆ ಅಬ್ದುಲ್ಲಾ ಎಸ್ ಎಸ್ (23) ಎಂಬವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಅಲ್ಲಿನ ಭಾರತೀಯ ಮೂಲದ ಉದ್ಯಮಿ ಜಯಂತ್ ಗೋಖಲೆ ಅವರು ಕಳುಹಿಸಿದ ಇಮೇಲ್ ಆಘಾತಕಾರಿಯಾಗಿತ್ತು.

"ಸುಮ್ಮನೆ ಒಂದು ಯೋಚನೆ. ನಿಮಗೇಕೆ ಉದ್ಯೋಗ ಬೇಕು?, ದಿಲ್ಲಿಗೆ ಹೋಗಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆಯಲ್ಲಿ ಕೂತು ಬಿಡಿ. ಪ್ರತಿ ದಿನ ನಿಮಗೆ 1,000 ರೂ. ದೊರೆಯುತ್ತದೆ. ಉಚಿತ ಆಹಾರ, ಅಂದರೆ ಬಿರಿಯಾನಿ, ಬೇಕಾದಷ್ಟು ಚಹಾ ಮತ್ತು ಹಾಲು ಹಾಗೂ ಕೆಲವೊಮ್ಮೆ ಸಿಹಿ ತಿಂಡಿ ಕೂಡ'' ಎಂದು ಗೋಖಲೆ ಪ್ರತಿಕ್ರಿಯೆ ನೀಡಿದ್ದಾರೆ.

ದುಬೈಯಲ್ಲಿ ಕನ್ಸಲ್ಟೆನ್ಸಿ ಸಂಸ್ಥೆ ನಡೆಸುವ ಗೋಖಲೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಲವರು ಆ ಇಮೇಲ್ ಶೇರ್ ಮಾಡಿದ್ದಾರೆ. "ನನಗೆ ವಿವಾದಗಳು ಬೇಡ ನನಗೆ ಬಂದ ಇಮೇಲ್ ಅನ್ನು ಕೆಲವರ ಜತೆ ಶೇರ್ ಮಾಡಿದ್ದೆ ಅವರು ಅದನ್ನು ವೈರಲ್ ಮಾಡಿದ್ದಾರೆ'' ಎಂದು ಅಬ್ದುಲ್ಲಾ ಹೇಳಿದ್ದಾರೆ.

ಇನ್ನೊಂದೆಡೆ ಗೋಖಲೆ ಈ ಕುರಿತಂತೆ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿ ತಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಹಾಗೆ ಬರೆದಿಲ್ಲ, ಅದರಲ್ಲಿನ ವಿಚಾರಗಳನ್ನು ಉತ್ಪ್ರೇಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ತನಗೆ ಅನಾರೋಗ್ಯವಿದೆ ಹಾಗೂ ಡಯಾಲಿಸಿಸ್ ಚಿಕಿತ್ಸೆಗೊಳಗಾಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News