ಸಿಎಎ ನಮ್ಮ ಆಂತರಿಕ ವಿಷಯ: ಐರೋಪ್ಯ ಒಕ್ಕೂಟದ ಗೊತ್ತುವಳಿಗೆ ಭಾರತದ ಪ್ರತಿಕ್ರಿಯೆ

Update: 2020-01-27 13:45 GMT

ಹೊಸದಿಲ್ಲಿ,ಜ.27: 28 ರಾಷ್ಟ್ರಗಳ ಪ್ರಬಲ ಕೂಟವಾಗಿರುವ ಐರೋಪ್ಯ ಒಕ್ಕೂಟ (ಇಯು)ದ ಸಂಸದರು ಭಾರತದ ನೂತನ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಮಂಡಿಸಿರುವ ಗೊತ್ತುವಳಿಗಳಿಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸರಕಾರದ ಮೂಲಗಳು,ಸಿಎಎ ಸಂಪೂರ್ಣವಾಗಿ ದೇಶದ ಆಂತರಿಕ ವಿಷಯವಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಗಳ ಹಕ್ಕುಗಳು ಮತ್ತು ಅಧಿಕಾರಗಳಲ್ಲಿ ಇಯು ಮೂಗು ತೂರಿಸಬೇಕಿಲ್ಲ ಎಂದು ಕಟುವಾದ ಶಬ್ದಗಳಲ್ಲಿ ಹೇಳಿವೆ. ಇಯು ಸಂಸತ್ ಸದ್ಯವೇ ಈ ಗೊತ್ತುವಳಿಗಳನ್ನು ಚರ್ಚೆಗೆತ್ತಿಕೊಳ್ಳಲಿದೆ.

ಗೊತ್ತುವಳಿಗಳ ‘ಪ್ರಾಯೋಜಕರು ಮತ್ತು ಬೆಂಬಲಿಗರು ’ ಮುಂದುವರಿಯುವ ಮುನ್ನ ಸರಕಾರದೊಡನೆ ಮಾತುಕತೆ ನಡೆಸಿ ವಾಸ್ತವಾಂಶಗಳ ಬಗ್ಗೆ ಸಂಪೂರ್ಣ ಮತ್ತು ನಿಖರವಾದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಎಂದು ಭಾರತವು ಆಶಿಸಿದೆ ಎಂದು ಮೂಲಗಳು ತಿಳಿಸಿವೆ.

ಸಿಎಎ ಭಾರತದ ಪೌರತ್ವ ನೀತಿಯಲ್ಲಿ ಅಪಾಯಕಾರಿ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ಇಯು ಸಂಸದರು ಮಂಡಿಸಿರುವ ಗೊತ್ತುವಳಿಗಳಲ್ಲಿ ಹೇಳಲಾಗಿದೆ.

ಸರಕಾರದ ಘೋಷಿತ ನಿಲುವನ್ನು ಪುನರುಚ್ಚರಿಸಿದ ಮೂಲಗಳು,ಸಿಎಎ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗಳ ನಂತರ ಪ್ರಜಾಸತ್ತಾತ್ಮಕ ರೀತಿಯಲ್ಲಿ ಶಾಸನವನ್ನು ಅಂಗೀಕರಿಸಲಾಗಿದೆ ಎಂದವು.

ಪ್ರತಿಯೊಂದು ದೇಶವೂ ಪೌರತ್ವ ನೀತಿಯನ್ನು ರೂಪಿಸುವಾಗ ಸಂದರ್ಭ ಮತ್ತು ಮಾನದಂಡ,ಇವರೆಡರ ಬಗ್ಗೆಯೂ ಚಿಂತನೆ ನಡೆಸುತ್ತದೆ. ವಾಸ್ತವದಲ್ಲಿ ಐರೋಪ್ಯ ರಾಷ್ಟ್ರಗಳೂ ಇದೇ ಮಾರ್ಗವನ್ನು ಅನುಸರಿಸಿವೆ ಎಂದು ಮೂಲಗಳು ಹೇಳಿದವು.

ಇಯು ಸಂಸದರ ವಿವಿಧ ಗುಂಪುಗಳು ಸಿಎಎ ವಿರುದ್ಧ ಆರು ಗೊತ್ತುವಳಿಗಳನ್ನು ಮಂಡಿಸಿವೆ. ಈ ಎಲ್ಲ ಗೊತ್ತುವಳಿಗಳು ಒಂದೇ ಧಾಟಿಯಲ್ಲಿದ್ದು,ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯ ರದ್ದತಿಯನ್ನೂ ಪ್ರಸ್ತಾಪಿಸಿವೆ. ಬ್ರಸೆಲ್ಸ್‌ನಲ್ಲಿರುವ ಐರೋಪ್ಯ ಒಕ್ಕೂಟದ ಸಂಸತ್ತಿನಲ್ಲಿ ಬುಧವಾರ ಈ ಗೊತ್ತುವಳಿಗಳು ಚರ್ಚೆಯಾಗಲಿದ್ದು,ಗುರುವಾರ ಮತದಾನ ನಡೆಯಲಿದೆ.

ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವವರ ಜೊತೆ ರಚನಾತ್ಮಕ ಮಾತುಕತೆಗಳನ್ನು ನಡೆಸುವಂತೆ ಮತ್ತು ತಾರತಮ್ಯದಿಂದ ಕೂಡಿರುವ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು ಎಂಬ ಅವರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಈ ಗೊತ್ತುವಳಿಗಳಲ್ಲಿ ಭಾರತ ಸರಕಾರವನ್ನು ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News