ಇಸ್ರೇಲಿ ನಾಗರಿಕರು ಸೌದಿಗೆ ಭೇಟಿ ನೀಡಲು ಅನುಮತಿ ಇಲ್ಲ: ಸೌದಿ ವಿದೇಶಾಂಗ ಸಚಿವ

Update: 2020-01-27 18:43 GMT
ಫೋಟೊ ಕೃಪೆ: twitter.com/FaisalbinFarhan

ರಿಯಾದ್,ಜ.27: ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಇಸ್ರೇಲಿ ನಾಗರಿಕರಿಗೆ ಸೌದಿ ಆರೇಬಿಯ ಭೇಟಿಗೆ ಅವಕಾಶ ನೀಡುವುದಾಗಿ ಇಸ್ರೇಲ್ ಘೋಷಿಸಿದ ಬೆನ್ನಲ್ಲೇ ಸೌದಿ ಆರೇಬಿಯದ ವಿದೇಶಾಂಗ ಸಚಿವರು ಹೇಳಿಕೆಯೊಂದರಲ್ಲಿ ಇಸ್ರೇಲಿ ಪೌರರಿಗೆ ಸೌದಿಯಲ್ಲಿ ಸ್ವಾಗತವಿಲ್ಲವೆಂದು ತಿಳಿಸಿದ್ದಾರೆ. ‘‘ ನಮ್ಮ ನೀತಿಯು ಸ್ಥಿರವಾಗಿದೆ. ಇಸ್ರೇಲ್ ಜೊತೆಗೆ ನಮಗೆ ಯಾವುದೇ ಬಾಂಧವ್ಯಗಳಿಲ್ಲ ಹಾಗೂ ಪ್ರಸಕ್ತ ಸಮಯದಲ್ಲಿ ಇಸ್ರೇಲ್‌ನ ಪಾಸ್‌ಪೋರ್ಟ್ ಹೊಂದಿರುವವರು ಸೌದಿ ಅರೇಬಿಯಕ್ಕೆ ಭೇಟಿ ನೀಡಲಾಗದು’’ ಎಂದು ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಹೇಳಿರುವುದಾಗಿ ಅಮೆರಿಕ ಸುದ್ದಿವಾಹಿನಿಯೊಂದು ವರದಿ ಮಾಡಿದೆ.ಸೌದಿ ಆರೇಬಿಯಕ್ಕೆ ಭೇಟಿ ನೀಡಲು ಇಸ್ರೇಲಿ ನಾಗರಿಕರಿಗೆ ಅನುಮತಿ ನೀಡುವುದಾಗಿ ಇಸ್ರೇಲ್‌ನ ಗೃಹ ಸಚಿವಾಲಯವು ರವಿವಾರ ಘೋಷಿಸಿತ್ತು. ಇಸ್ರೇಲ್ ಸರಕಾರದ ನೂತನ ನೀತಿಯು ಸೌದಿ ಆರೇಬಿಯಕ್ಕೆ ಹಜ್ ಹಾಗೂ ಉಮ್ರಾ ಯಾತ್ರೆ ಕೈಗೊಳ್ಳಲು ಇಸ್ರೇಲಿ ಮುಸ್ಲಿಮರಿಗೆ ಅನುಮತಿ ನೀಡುತ್ತದೆ. ಉದ್ಯಮ, ವ್ಯವಹಾರಗಳ ಕಾರಣಗಳಿಗಾಗಿಯೂ 90 ದಿನಗಳವರೆಗೆ ಸೌದಿ ಆರೇಬಿಯ ಪ್ರವಾಸ ಕೈಗೊಳ್ಳಲು ಅವಕಾಶ ನೀಡುತ್ತದೆ. ಅದರೆ ಇದಕ್ಕೆ ಸೌದಿ ಆರೇಬಿಯ ಸರಕಾರದ ಅಧಿಕೃತ ಆಹ್ವಾನದ ಅಗತ್ಯವಿರುತ್ತದೆ.

ಪ್ರಸಕ್ತ ಇಸ್ರೇಲಿನ ಮುಸ್ಲಿಮರಿಗೆ ಸೌದಿ ಆರೇಬಿಯಕ್ಕೆ ಧಾರ್ಮಿಕ ಪ್ರವಾಸ ಕೈಗೊಳ್ಳಲು ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಇಲ್ಲವೇ ವಿದೇಶಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News