ಅಜ್ಮಾನ್: ಫೆ.7ರಂದು ಬಿಸಿಎಫ್ ಸ್ಪೋರ್ಟ್ಸ್ ಮೀಟ್, ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2020-01-28 07:19 GMT

ಅಜ್ಮಾನ್: ಬ್ಯಾರೀಸ್ ಕಲ್ಚರಲ್ ಫೋರಮ್ (ಬಿಸಿಎಫ್) 'ವಾರ್ಷಿಕ ಕ್ರೀಡಾ ಕೂಟ ಮತ್ತು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ 2020'ವು  ಫೆ.7ರಂದು ಯುಎಇಯ ಅಜ್ಮಾನ್ ನಲ್ಲಿರುವ ತುಂಬೆ ಮೆಡ್ ಸಿಟಿಯಲ್ಲಿ ನಡೆಯಲಿದೆ.

ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಬೃಹತ್ ಕ್ರೀಡಾ ಮೇಳವು ದೇಶ ವಿದೇಶಗಳಿಂದ  ಕ್ರೀಡಾಪಟುಗಳನ್ನು, ಕ್ರೀಡಾ ಪ್ರೇಮಿಗಳನ್ನು, ಗಣ್ಯ ವ್ಯಕ್ತಿಗಳನ್ನು ಆಕರ್ಷಿಸುವ, ಅನಿವಾಸಿ ಕನ್ನಡಿಗರಲ್ಲಿ ಕ್ರೀಡೆ ಮತ್ತು ಮೇಲಾಟಗಳ ಅಮೋಘ ಸಂಚಯನದ ಕೇಂದ್ರವಾಗಿ ಜನಾಕರ್ಷಣೀಯವಾದ ಕ್ರೀಡಾ ಮೇಳವಾಗಿ ಪ್ರಸಿದ್ಧಿ ಪಡೆದಿದೆ.

ವೈವಿಧ್ಯಮಯವಾದ ಅಂತರ್ ರಾಷ್ಟ್ರೀಯ ಕ್ರೀಡೆಗಳು, ಕರ್ನಾಟಕದ, ಕರಾವಳಿ ಕರ್ನಾಟಕದ ಕ್ರೀಡೆಗಳು, ಮಹಿಳೆಯರಿಗೆ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ದುಬೈ ಇಸ್ಲಾಮಿಕ್ ಅಫೇರ್ಸ್ ಆ್ಯಂಡ್ ಕಲ್ಚರಲ್ ಆಕ್ಟಿವಿಟೀಸ್ ಡಿಪಾರ್ಟ್ಮೆಂಟ್ ನ ಸಹಯೋಗದೊಂದಿಗೆ ಫುಟ್ ಬಾಲ್ ಪಂದ್ಯಾಟ ಕೈಗೊಳ್ಳಲಾಗಿದೆ. ಅದರೊಂದಿಗೆ ಕ್ರೀಡಾ ಕೂಟದ ದಿನ ಬೆಳಗ್ಗೆ ತುಂಬೆ ಮೆಡಿಸಿಟಿಯ ಈಜು ಕೊಳದಲ್ಲಿ ಪುರುಷರಿಗೆ ಮತ್ತು ಮಕ್ಕಳಿಗೆ ಈಜು ಸ್ಪರ್ಧೆಯನ್ನೂ ಏರ್ಪಡಿಸಲಾಗುವುದು.

ಈ ಸಂದರ್ಭ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ನಡೆಯಲಿದ್ದು, ದುಬಾರಿ ತಪಾಸಣೆಗಳಾದ ದಂತ ತಪಾಸಣೆ, ಬಹುತೇಕ ಎಲ್ಲಾ ವಿಧದ ಪ್ರಾಥಮಿಕ ರಕ್ತ ಪರಿಶೀಲನೆ ಮತ್ತು ತಪಾಸಣೆ, ಕಾರ್ಡಿಯೋಲಾಜಿಸ್ಟ್ (ಹೃದಯ ತಜ್ಞ) ರಿಂದ ವೈದ್ಯಕೀಯ ತಪಾಸಣೆ ಮತ್ತು ಸಲಹೆ,  ಯಕೃತ್ತು (ಲಿವರ್) ಗೆ ಸಂಬಂಧ ಪಟ್ಟ ತಪಾಸಣೆಗಳು, ಕಿಡ್ನಿಗೆ ಸಂಬಂಧ ಪಟ್ಟ ತಪಾಸಣೆಗಳು, ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಟೆಸ್ಟ್ ಗಳು, ಮಧುಮೇಹಕ್ಕೆ (ಡೈಯಾಬಿಟೀಸ್) ಸಂಬಂಧ ಪಟ್ಟ ಟೆಸ್ಟ್ ಗಳು ಹೀಗೆ ಹಲವು ವೈದ್ಯಕೀಯ ಸೇವಾ ಸೌಲಭ್ಯಗಳು ಮತ್ತು ತುಂಬೆ ಮೆಡಿಸಿಟಿಯ ಝೋ ಮೊ ಒಪ್ಟಿಕಲ್ ವತಿಯಿಂದ ತಜ್ಞ ಓಪ್ಟೋಮೆಟ್ರಿಸ್ಟ್ ಗಳು ಉಚಿತ ಕಣ್ಣಿನ ತಪಾಸನೆಯನ್ನು ಜನರಲ್ ಫಿಸಿಶಿಯನ್ ಪರಿಶೀಲಿಸಿ ಅವರ ಸಲಹೆಯ ಮೇರೆಗೆ ಇತರ ತಪಾಸಣೆಗೆ ಕಳುಹಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ತುಂಬೆ ಮೆಡಿಸಿಟಿ ವತಿಯಿಂದ ಅಂದಿನ ವಿಶೇಷ ಕೊಡುಗೆಯಾಗಿ ತುಂಬೆ ಮೆಡಿಸಿಟಿಯಲ್ಲಿ ನೋಂದಾವಣಿಯಾಗ ಬಯಸುವವ ರಿಂದ  ರಿಜಿಸ್ಟ್ರೇಷನ್) ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ತುಂಬೆ ಮೆಡ್ ಸಿಟಿಯಲ್ಲಿ ನೋಂದಾವಣಿ ಮಾಡಿ ಕೊಡಲಾಗುವುದು. ಅದರೊಂದಿಗೆ ಇತರ ಹಲವಾರು ವೈದ್ಯಕೀಯ ಸೇವಾ ಕ್ಷೇತ್ರಗಳಲ್ಲಿಯೂ ವಿಶೇಷ ರಿಯಾಯಿತಿ ನೀಡಲಾಗುವುದು. ಅಗತ್ಯವಿರುವವರಿಗೆ ವೈದ್ಯರ ಸಲಹೆಯಂತೆ ಅಗತ್ಯವಾದ  ಮದ್ದು (ಮೆಡಿಸಿನ್ಸ್) ಗಳನ್ನೂ ಉಚಿತವಾಗಿ  ನೀಡಲಾಗುವುದು.

ಬಿಸಿಎಫ್ ಅಧ್ಯಕ್ಷ  ಡಾ. ಬಿಕೆ ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ತುಂಬೆ ಮೆಡಿ ಸಿಟಿಯ ಚಯರ್ಮನ್ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಫೌಂಡರ್ ಪ್ಯಾಟ್ರಾನ್ ಡಾ. ತುಂಬೆ ಮೊಯಿದೀನ್ , ಡಾ. ಬಿಎ ಅಹ್ಮದ್ ಹಾಜಿ, ದುಬೈ ಇಸ್ಲಾಮಿಕ್ ಅಫೇರ್ಸ್ ಆ್ಯಂಡ್ ಕಲ್ಚರಲ್ ಆಕ್ಟಿವಿಟೀಸ್ ಡಿಪಾರ್ಟ್ಮೆಂಟ್ ನ ಅಲ್ ಹಾಜ್ ಫಾಯೆಝ್ ಅಬ್ದುಲ್ಲಾ ಅಲ್ ಮಝ್ ರೂಕಿ ಮತ್ತು ಅಲ್ ಹಾಜ್ ಜಾವೇದ್ ಖತೀಬ್ ಉಮ್ ರೀ ಭಾಗವಹಿಸಲಿದ್ದಾರೆ.

ಯುಎಇಯಲ್ಲಿ ಕಾರ್ಯಾಚರಿಸುತ್ತಿರುವ ಕನ್ನಡ ಪರ ಸೇವಾ ಸಂಘಟನೆಗಳು ಮತ್ತು ಸಂಸ್ಥೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪದಾಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News