ಮಾಂಸ ಖರೀದಿಸಲು ಭಯವಾಗುತ್ತಿದೆ: ಕವಯಿತ್ರಿ ಡಾ.ಸುಕನ್ಯಾ ಮಾರುತಿ

Update: 2020-01-28 13:28 GMT

ಬೆಂಗಳೂರು, ಜ.28: ದೇಶದೆಲ್ಲೆಡೆ ಅಘೋಷಿತ ವಾತಾವರಣ ನಿರ್ಮಾಣವಾಗಿದ್ದು, ಹೊರಗಡೆ ಮಾಂಸ ಖರೀದಿಸಲು ಭಯವಾಗುತ್ತಿದೆ ಎಂದು ಕವಯಿತ್ರಿ ಡಾ.ಸುಕನ್ಯಾ ಮಾರುತಿ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಆಯೋಜಿಸಿದ್ದ, ಮಹಾತ್ಮ ಗಾಂಧಿ ಹುತಾತ್ಮ ದಿನ ಜ.30ಕ್ಕೆ ರಾಜ್ಯದಾದ್ಯಂತ ಸೌಹಾರ್ದ ಸಂಕಲ್ಪ ಮಾಹಿತಿ ಕುರಿತ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಆಹಾರದ ಮೇಲಿನ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲದೆ, ಇತ್ತೀಚಿಗೆ ಮಾಂಸದ ಅಂಗಡಿಗೆ ಹೋಗಲು ಹೆದರಿಕೆ ಆಗುತ್ತಿದ್ದು, ಯಾರು ಅನುಮಾನ ವ್ಯಕ್ತಪಡಿಸಿ, ದಾಳಿ, ಹಲ್ಲೆ ನಡೆಸುತ್ತಾರೋ ಎನ್ನುವ ಭಯ ಸಾಮಾನ್ಯ ಜನರಲ್ಲೂ ಮನೆ ಮಾಡಿದೆ ಎಂದು ಅವರು ತಿಳಿಸಿದರು.

ನಾವು ಮೂಲ ನಿವಾಸಿಗಳು, ನಮ್ಮ ದೇಶದಲ್ಲಿ ಅದರಲ್ಲೂ ಪೌರತ್ವ ಸಾಬೀತುಪಡಿಸುವ ಸ್ಥಿತಿ ನಿರ್ಮಾಣ ಆಗಿರುವುದು ಬಹುದೊಡ್ಡ ದುರಂತ ಎಂದ ಅವರು, ನಮ್ಮ ದೇಶ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತಿದ್ದು, ಮತ್ತೊಮ್ಮೆ ನಮ್ಮ ಸ್ವಾತಂತ್ರ, ಆಸ್ತಿ, ಹಕ್ಕುಗಳನ್ನು, ವಿದೇಶಿಯರಿಗೆ ಮಾರಾಟ ಮಾಡಿಕೊಳ್ಳುವ ಸಮಯ ದೂರು ಇಲ್ಲ ಎಂದು ಸುಕನ್ಯಾ ಮಾರುತಿ ನುಡಿದರು.

ಖಾಸಗಿ ಸೇನೆ: ದೇಶದಲ್ಲಿ ಖಾಸಗಿ ಸೇನೆ ಮೂಲಕ ಹಿಂಸೆ ತಾಂಡವವಾಡುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಹಿಂಸಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೇಂದ್ರ ಸರಕಾರದ ಕುಮ್ಮಕ್ಕು ಇದೆ ಎಂದು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪಹೇಳಿದರು. ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ಸತ್ಯನಿಷ್ಠರಾಗಿದ್ದ ಗಾಂಧೀಜಿ ಅವರನ್ನು ಪ್ರತ್ಯೇಕವಾದಿಗಳು ಕೊಂದರು. ಈ ಪ್ರತ್ಯೇಕವಾದಿಗಳ ಹಿಂಸಾಚಾರವನ್ನು ಅಹಿಂಸೆಯ ಮೂಲಕ ಎದುರಿಸಬೇಕು. ಈಗಾಗಲೇ ಜಾತಿ, ಧರ್ಮ, ಮತ-ಪಂಥಗಳನ್ನು ಮೀರಿ ದೇಶದ ಜನರು ಒಂದಾಗುತ್ತಿದ್ದಾರೆ. ದೇಶದ ಉಳಿವಿಗಾಗಿ ಈ ಅಹಿಂಸಾ ಹೋರಾಟ ಅನಿವಾರ್ಯ ಎಂದರು.

ಸಾಹಿತಿ ಡಾ.ಕೆ.ಶರೀಫಾ ಮಾತನಾಡಿ, ಸಂಘಪರಿವಾರದ ಹಿನ್ನೆಲೆಯ ನಾಥೂರಾಮ್ ಗೋಡ್ಸೆ , ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ. ವೀರ ಸಾವರ್ಕರ್ ಕೂಡ ಈ ಪ್ರಕರಣದ 8ನೆ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ಇಂದು ಸಹ ಆ ಸಂಘಪರಿವಾರದ ಕೈಯಲ್ಲೇ ದೇಶವಿದೆ. ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿವೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ, ಸೌಹಾರ್ದ ಕರ್ನಾಟಕ ಸಮನ್ವಯಕಾರ ಎಸ್.ವೈ.ಗುರುಶಾಂತ್ ಸೇರಿದಂತೆ ಪ್ರಮುಖರಿದ್ದರು.

ಹಿಂಸೆಯ ಹಿಂದೆ ವ್ಯವಸ್ಥೆ ಇದೆ

ಮಿಲಿಟರಿ, ಪೊಲೀಸ್ ಹೊರತಾಗಿ ಖಾಸಗಿ ಸೇನೆಯೊಂದು ದೇಶಾದ್ಯಂತ ಹಿಂಸಾಚಾರದಲ್ಲಿ ತೊಡಗಿದೆ. ಇತ್ತೀಚೆಗೆ ಜೆಎನ್‌ಯು, ಜಾಮಿಯಾ ವಿವಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಮುಸುಕುಧಾರಿಗಳ ದೌರ್ಜನ್ಯವೇ ಇದಕ್ಕೆ ನಿದರ್ಶನ. ವ್ಯವಸ್ಥೆಯ ವಿರುದ್ಧ ಮಾತನಾಡಿದರೆ ಬೆದರಿಕೆ ಪತ್ರಗಳು ಬರುವ ಮಟ್ಟಕ್ಕೆ ವಾತಾವರಣ ಕೆಟ್ಟಿದೆ. ಈ ಹಿಂಸೆಯ ಹಿಂದೆ ವ್ಯವಸ್ಥೆ ಇರುವ ಬಗ್ಗೆ ದಟ್ಟ ಅನುಮಾನವಿದೆ.

-ಡಾ.ಕೆ.ಮರುಳಸಿದ್ದಪ್ಪ, ಚಿಂತಕರು

ಜ.30ಕ್ಕೆ ಮಹಾ ಸಂಕಲ್ಪ ದಿನ

ಸೌಹಾರ್ದತೆಗಾಗಿ ಕರ್ನಾಟಕ ಸಂಘಟನೆಯು ‘ದೇಶದಲ್ಲಿ ದ್ವೇಷ ತೊಲಗಲಿ ಸಹಬಾಳ್ವೆ ಬಲಗೊಳ್ಳಲಿ’ ಎಂಬ ಆಶಯದೊಂದಿಗೆ ಮಹಾತ್ಮ ಗಾಂಧಿ ಹುತಾತ್ಮರಾದ ದಿನ ಜ.30ರಂದು ಮಹಾ ಸಂಕಲ್ಪ ದಿನದ ಹೆಸರಿನಲ್ಲಿ ರಾಜ್ಯಾದ್ಯಂತ ‘ಸೌಹಾರ್ದ ಸಂಕಲ್ಪ ಮಾನವ ಸರಪಳಿ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಗೂ ನಗರಗಳ ಬಡಾವಣೆಗಳಲ್ಲಿ ಬೆಳಗ್ಗೆ 11 ಗಂಟೆಗೆ ಮಹಾತ್ಮ ಗಾಂಧೀಜಿಗೆ ಶ್ರದ್ಧಾಂಜಲಿ ಅರ್ಪಿಸಿ ಬೃಹತ್ ಮಾನವ ಸರಪಳಿ ರಚಿಸಲಾಗುವುದು. ವಿಶೇಷವಾಗಿ ಬೆಂಗಳೂರಿನಲ್ಲಿ ಅಂದು ಸಂಜೆ 4.30ಕ್ಕೆ ಪುರಭವನದ ಎದುರು ಶ್ರದ್ಧಾಂಜಲಿ ಸಲ್ಲಿಸಿ, ಪ್ರತಿಜ್ಞೆ ಸ್ವೀಕರಿಸಲಾಗುವುದು. ಬಳಿಕ ಕೆ.ಆರ್.ಮಾರುಕಟ್ಟೆಯಿಂದ ಪುರಭವನ, ಕಾರ್ಪೊರೇಷನ್, ಕಸ್ತೂರಬಾ ರಸ್ತೆ ಮೂಲಕ ಮಹಾತ್ಮ ಗಾಂಧಿ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆವರೆಗೆ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಜಂಟಿ ಕ್ರಿಯಾ ಸಮಿತಿ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸೂಫಿ ಸಂತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಅಂತೆಯೆ ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು, ಪ್ರಗತಿಪರ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು ಐದು ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News