ಹಿಂಭಡ್ತಿಗೆ ವಿರೋಧ: ಬೆಂಗಳೂರಿನಲ್ಲಿ ತರಗತಿ ಬಹಿಷ್ಕರಿಸಿ ಬೀದಿಗಿಳಿದ ಸಾವಿರಾರು ಶಿಕ್ಷಕರು

Update: 2020-01-28 12:57 GMT

ಬೆಂಗಳೂರು, ಜ.28: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಹಿಂಭಡ್ತಿ ನೀಡುತ್ತಿರುವ ಸರಕಾರದ ಧೋರಣೆ ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾವಿರಾರು ಶಿಕ್ಷಕರು ಪಠ್ಯ ಬೋಧನೆ ಬಹಿಷ್ಕರಿಸಿ, ಧರಣಿ ನಡೆಸಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ನೇತೃತ್ವದಲ್ಲಿ ಜಮಾಯಿಸಿದ ಶಿಕ್ಷಕರು, ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ 14 ವರ್ಷಗಳಿಂದಲೂ 6 ರಿಂದ 8 ನೇ ತರಗತಿಗೆ ಬೋಧಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಭಡ್ತಿ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1 ರಿಂದ 7 ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2005 ರಿಂದ 8 ನೇ ತರಗತಿಗೂ ಬೋಧಿಸಲು ನಿಯೋಜಿಸಲಾಯಿತು. ರಾಜ್ಯದಲ್ಲಿ ಬಿಎ, ಬಿಎಸ್ಸಿ, ಎಂಎ, ಎಂಸ್ಸಿ, ಬಿಇಡಿ, ಎಂಇಡಿ, ಪಿಎಚ್‌ಡಿ ಮಾಡಿದ ಶಿಕ್ಷಕರಿದ್ದಾರೆ. ಆದರೆ, ಇವರನ್ನು ಪದವೀಧರ ಶಿಕ್ಷಕರನ್ನಾಗಿ ಪರಿಗಣಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಕಿವಿಗೊಡದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರತಿಭಟನೆ ನಡೆಸಿದಾಗ ನಿಯಮ ತಿದ್ದುಪಡಿ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಈಡೇರಿಸಿಲ್ಲ ಎಂದು ಧರಣಿ ನಿರತ ಶಿಕ್ಷಕರು ಆರೋಪಿಸಿದರು.

ಇತ್ತೀಚೆಗೆ ದಾವಣಗೆರೆಯಲ್ಲಿ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯ ತೀರ್ಮಾನದಂತೆ ಇಂದು ಹೋರಾಟ ನಡೆಸುತ್ತಿದು, ರಾಜ್ಯಾದ್ಯಂತ 6 ರಿಂದ 8 ನೇ ತರಗತಿ ಬೋಧನೆಯನ್ನು ಅನಿರ್ದಿಷ್ಟಾವಧಿಯವರೆಗೂ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖ ಬೇಡಿಕೆಗಳು

* 2008ರ ನಂತರ ನೇಮಕವಾಗಿರುವ ಶಿಕ್ಷಕರಿಗೆ ವಾರ್ಷಿಕ ಒಂದು ವಿಶೇಷ ವೇತನ ಭಡ್ತಿ ನೀಡಬೇಕು

* 2014ಕ್ಕಿಂತ ಮೊದಲು ನೇಮಕವಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಭಡ್ತಿ ನೀಡಬೇಕು

* ವರ್ಗಾವಣೆ ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News