ಯಡಿಯೂರಪ್ಪ ಶ್ರೀರಾಮಚಂದ್ರನಂತೆ, ಮಾತಿಗೆ ತಪ್ಪುವವರಲ್ಲ: ವೀರಭದ್ರ ಚನ್ನಮಲ್ಲ ಸ್ವಾಮೀಜಿ

Update: 2020-01-28 14:19 GMT

ಬೆಂಗಳೂರು, ಜ.28: ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿ ನಡೆಯುವವರು ಅಲ್ಲ. ಶ್ರೀರಾಮಚಂದ್ರನಂತೆ ಮಾತಿಗೆ ತಪ್ಪುವವರಲ್ಲ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಿಎಂರನ್ನು ಹಾಡಿ ಹೊಗಳಿದ್ದಾರೆ.

ಮಂಗಳವಾರ ಬಸವನಗುಡಿ ಬಳಿಯ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಈಗಾಗಲೇ ಒಬ್ಬರು ಮಾತಿಗೆ ತಪ್ಪಿ ನಡೆದ ಮುಖ್ಯಮಂತ್ರಿ ಎಂಬ ಪಟ್ಟವನ್ನು ಕಟ್ಟಿಕೊಂಡಿದ್ದಾರೆ. ಅವರ ಸಾಲಿಗೆ ಈಗಿನ ಸಿಎಂ ಯಡಿಯೂಪ್ಪ ಹೋಗುವುದಿಲ್ಲ ಎಂಬ ನಂಬಿಕೆಯಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅವಧಿ ಪೂರ್ತಿ ಮಾಡಲು ಕೇಂದ್ರ ಹಾಗೂ ರಾಜ್ಯದ ನಾಯಕರು ಸಹಕರಿಸಬೇಕು ಎಂದರು.

ಮುಖ್ಯಮಂತ್ರಿಯಾದ ಬಳಿಕ ಹಲವು ಸವಾಲು ಹಾಗೂ ಸಂಕಷ್ಟಗಳನ್ನು ಎದುರಿಸಬೇಕಿದೆ. ಇದೇ ಹಾದಿಯಲ್ಲಿಯೇ ಇಂದಿನ ಸಿಎಂ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದ ಅವರು, ಅಧಿಕಾರ ಹಂಚಿಕೆ ಎಂಬುದು ಕಷ್ಟದ ಕೆಲಸ ಎಂದು ನಿಡುಮಾಮಿಡಿ ಸ್ವಾಮೀಜಿ ನುಡಿದರು.

ಶಾಸಕರಾಗಿ ಗೆದ್ದ ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆಯಿರುತ್ತದೆ. ಆದರೆ, ಸಚಿವ ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟದ ಕೆಲಸ ಎಂದ ಅವರು, ಮೂರು ವರ್ಷಗಳ ಅವಧಿಯಲ್ಲಿ ಸಚಿವ ಸ್ಥಾನಗಳನ್ನು ಎರಡು ಹಂತದಲ್ಲಿ ಹಂಚಿಕೆ ಮಾಡಲು ಅವಕಾಶ ಇದೆ. ಶಾಸಕರೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ರಾಜಕಾರಣದಲ್ಲಿ ವೀರಶೈವ ಲಿಂಗಾಯತರ ಹಲವಾರು ನಾಯಕರು, ಮುಖ್ಯಮಂತ್ರಿ, ಮಂತ್ರಿಗಳು ಆಗಿದ್ದಾರೆ. ಆದರೆ, ಯಾರೊಬ್ಬರನ್ನೂ ನಮ್ಮ ಸಮುದಾಯದ ನಾಯಕ ಎಂದು ಜನರು ಒಪ್ಪಿಕೊಂಡಿಲ್ಲ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಒಪ್ಪಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಯಡಿಯೂರಪ್ಪ ಎಲ್ಲ ಸಮುದಾಯದ ಜನರ ಏಳಿಗೆಗಾಗಿ ದುಡಿಯುತ್ತಾರೆ. ಅವರ ರೀತಿಯಲ್ಲಿ ದುಡಿಯುವ ನಾಯಕ ಬೇರೆ ಯಾರೂ ಇಲ್ಲ ಎಂದ ಅವರು, ಕಂದಾಯ ಸಚಿವ ಆರ್.ಅಶೋಕ್ ಕಡೆ ನೋಡಿ ಮುಂದೊಂದು ದಿನ ನಿಮಗೂ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದರು.

ಯಡಿಯೂರಪ್ಪ ರೀತಿಯಲ್ಲಿ ಪಕ್ಷನಿಷ್ಠೆ, ಕರ್ತವ್ಯನಿಷ್ಠೆಯನ್ನು ಬೆಳೆಸಿಕೊಳ್ಳಬೇಕು. ವಸತಿ ಸಚಿವ ವಿ. ಸೋಮಣ್ಣರಿಗೂ ಈ ರೀತಿಯ ಸ್ಥಾನಗಳು ಸಿಗಲಿ ಎಂದು ಹಾರೈಸುತ್ತೇನೆ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News