ರಾಷ್ಟ್ರೀಯ ಆಯ್ಕೆಸಮಿತಿ ಮುಖ್ಯಸ್ಥರಾಗಿ ಶಿವರಾಮಕೃಷ್ಣನ್ ನೇಮಕ ಸಾಧ್ಯತೆ

Update: 2020-01-28 17:46 GMT

ಚೆನ್ನೈ, ಜ.28: ಎಂಎಸ್‌ಕೆ ಪ್ರಸಾದ್‌ರಿಂದ ತೆರವಾಗಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಹಿರಿಯ ಮಾಜಿ ಕ್ರಿಕೆಟಿಗ ಎಲ್.ಶಿವರಾಮಕೃಷ್ಣನ್ ಆಯ್ಕೆಯಾಗುವ ಸಾಧ್ಯತೆಯಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಸಂವಿಧಾನದ ಪ್ರಕಾರ, ಆಯ್ಕೆ ಸಮಿತಿಯಲ್ಲಿರುವ ಹಿರಿಯ ಟೆಸ್ಟ್ ಕ್ರಿಕೆಟಿಗ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಬಹುದು.

ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ಎಲ್.ಶಿವರಾಮಕೃಷ್ಣನ್, ವೆಂಕಟೇಶ್ ಪ್ರಸಾದ್ ಹಾಗೂ ಅಜಿತ್ ಅಗರ್ಕರ್ ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಹಾಗೂ ಗಗನ್ ಖೋಡಾ ಅವರ ಅಧಿಕಾರದ ಅವಧಿಯು ಮುಗಿದಿದೆ. ಬಿಸಿಸಿಐ ನಿಯಮದ ಪ್ರಕಾರ ಭಾರತ ಹಾಗೂ ತಮಿಳುನಾಡಿನ ಮಾಜಿ ಲೆಗ್-ಸ್ಪಿನ್ನರ್ ಶಿವರಾಮಕೃಷ್ಣನ್ ಅಧ್ಯಕ್ಷ ಪದವಿಗೆ ಅರ್ಹರಿದ್ದಾರೆ.

 ಶಿವರಾಮಕೃಷ್ಣನ್ 1983ರಲ್ಲಿ ಆ್ಯಂಟಿಗುವಾದಲ್ಲಿ ಕ್ಲೈವ್ ಲಾಯ್ಡ ನೇತೃತ್ವದ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಶಿವರಾಮಕೃಷ್ಣನ್ ಭಾರತ ತಂಡವನ್ನು 9 ಟೆಸ್ಟ್, 16 ಏಕದಿನ ಹಾಗೂ 76 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಅಗರ್ಕರ್ 1998ರಲ್ಲಿ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. 110 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ಅಗರ್ಕರ್ 26 ಟೆಸ್ಟ್ ಹಾಗೂ 191 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಿಕೆಟ್ ಮಂಡಳಿಯ ನಿಯಮಗಳು ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಶಿವರಾಮಕೃಷ್ಣನ್‌ರನ್ನು ಫೇವರಿಟ್ ಆಗಿಸಿದೆ. ಕ್ರಿಕೆಟ್ ಮಂಡಳಿಯ ನಿಯಮದ ಪ್ರಕಾರ ಶಿವ ಅತ್ಯಂತ ಹಿರಿಯರು. ಅಗರ್ಕರ್ 90ರ ದಶಕದ ಅಂತ್ಯಕ್ಕೆ ಟೆಸ್ಟ್ ಕ್ಯಾಪ್ ಧರಿಸಿದ್ದರು. ವೆಂಕಟೇಶ್ ಪ್ರಸಾದ್ 90ರ ಮಧ್ಯ ಭಾಗದಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ಪ್ರಸಾದ್ ಬಿಸಿಸಿಐನ ಕಿರಿಯರ ಆಯ್ಕೆ ಸಮಿತಿಯಲ್ಲಿ ಒಂದೂವರೆ ವರ್ಷ ಪೂರ್ಣಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News