ಶಬರಿಮಲೆ ವಿವಾದ ವಿಚಾರಣೆಗೆ 10 ದಿನ ನಿಗದಿ: ಸುಪ್ರೀಂ ಕೋರ್ಟ್

Update: 2020-01-29 04:03 GMT

ಹೊಸದಿಲ್ಲಿ, ಜ.29: ನಂಬಿಕೆ ಮತ್ತು ಮೂಲಭೂತ ಹಕ್ಕುಗಳ ನಡುವಿನ ಮೇಲಾಟದ ವಿವಾದ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರು ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಸೃಷ್ಟಿಯಾಗಿರುವ ವಿವಾದದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಸಂವಿಧಾನಪೀಠ 10 ದಿನಗಳಲ್ಲಿ ಪೂರ್ಣಗೊಳಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಪ್ರಕಟಿಸಿದ್ದಾರೆ.

ಶಬರಿಮಲೆ, ಮಸೀದಿಗಳು ಮತ್ತು ಪಾರ್ಸಿ ಅಗಿಯಾರಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಂವಿಧಾನಪೀಠ, ಈ ಕುರಿತ ವಾದ- ಪ್ರತಿವಾದಕ್ಕೆ 10 ದಿನಗಳಿಗಿಂತ ಹೆಚ್ಚು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವರು ಹೆಚ್ಚಿನ ಸಮಯಾವಕಾಶ ಕೇಳಿದರೂ ಅದಕ್ಕೆ ಅವಕಾಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿದರು. ಹಲವು ಕಕ್ಷಿದಾರರ ವಕೀಲರು ನ್ಯಾಯಾಲಯದ ಆದೇಶದಂತೆ ಸಭೆ ಸೇರಿದ್ದರೂ, ಸಮಾನ ಪ್ರಶ್ನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ ಎಂದು ಮೆಹ್ತಾ ತಿಳಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ಸ್ಪಷ್ಟನೆ ನೀಡಿದರು.

ಎಲ್ಲ ವಕೀಲರು ಸಿದ್ಧಪಡಿಸಿದ ಸಮಾನ ಪ್ರಶ್ನೆಗಳನ್ನು ಹಸ್ತಾಂತರಿಸುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ, "ನಾವು ಕಾನೂನಿನ ಸಮಾನ ಪ್ರಶ್ನೆಗಳನ್ನು ರೂಪಿಸುತ್ತೇವೆ" ಎಂದರು. ಇದಕ್ಕಾಗಿ ಮೂವರು ನ್ಯಾಯಮೂರ್ತಿಗಳ ಪೀಠ ವಕೀಲರ ವಾದ ಆಲಿಸಲಿದೆ ಹಾಗೂ ಯಾವ ಪ್ರಶ್ನೆಯನ್ನು ಉಳಿಸಿಕೊಳ್ಳಬೇಕು ಹಾಗೂ ಯಾವುದನ್ನು ಕಿತ್ತುಹಾಕಬೇಕು ಎನ್ನುವುದನ್ನು ನಿರ್ಧರಿಸಲಿದೆ ಎಂದು ವಿವರಿಸಿದರು.

ಮುಖ್ಯ ನ್ಯಾಯಮೂರ್ತಿ ಬೋಬ್ಡೆ, ನ್ಯಾಯಮೂರ್ತಿಗಳಾದ ಆರ್.ಬಾನುಮತಿ, ಅಶೋಕ್‌ ಭೂಷಣ್, ಎಲ್.ನಾಗೇಶ್ವರ ರಾವ್, ಎಂ.ಎಂ.ಶಾಂತನಗೌಡರ್, ಎಸ್.ಅಬ್ದುಲ್ ನಝೀರ್, ಆರ್.ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನಪೀಠ ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News