ಸೈನಾ ನೆಹ್ವಾಲ್ ಬಿಜೆಪಿ ಸೇರ್ಪಡೆ

Update: 2020-01-29 07:52 GMT

 ಹೊಸದಿಲ್ಲಿ, ಜ.29:ವಿಶ್ವದ ಮಾಜಿ ನಂ.1 ಬ್ಯಾಡ್ಮಿಮಿಂಟನ್  ತಾರೆ ಸೈನಾ ನೆಹ್ವಾಲ್  ಬುಧವಾರ  ಮಧ್ಯಾಹ್ನ  ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು.

ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ  ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್   ಅವರಿಂದ ಸೈನಾ ನೆಹ್ವಾಲ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು.  ಸೈನಾ ನೆಹ್ವಾಲ್ ಸಹೋದರಿ ಚಂದ್ರಾಂಶು ಕೂಡಾ ಇದೇ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾದರು.

   ಬಿಜೆಪಿ ಸೇರ್ಪಡೆಯಾದ ಬಳಿಕ  ಮಾತನಾಡಿದ ಅವರು "ನಾನು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇನೆ, ನಾನು  ಶ್ರಮಜೀವಿ  ಮತ್ತು ಕಷ್ಟಪಟ್ಟು ದುಡಿಯುವ ವ್ಯಕ್ತಿಗಳನ್ನು ಪ್ರೀತಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಅವರೊಂದಿಗೆ ದೇಶಕ್ಕಾಗಿ ಏನಾದರೂ ಮಾಡಲು ನಾನು ಬಯಸುತ್ತೇನೆ" ಎಂದು ಶಟ್ಲರ್ ಸೈನಾ ನೆಹ್ವಾಲ್ ಹೇಳಿದರು.

"ನಾನು ನರೇಂದ್ರ ಸರ್ ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ"  ಎಂದು ಅಭಿಪ್ರಾಯಪಟ್ಟಿದ್ದಾರೆ.

29ರ ಹರೆಯದ ಸೈನಾ  ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದಾರೆ.

ವಿಶ್ವದ ಮಾಜಿ ನಂಬರ್  ಬ್ಯಾಡ್ಮಿಂಟನ್ ತಾರೆ ಸೈನಾ  ಅವರು ದೇಶದ ಉನ್ನತ ಕ್ರೀಡಾ ಪ್ರಶಸ್ತಿಗಳಾದ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಕೆಗೆ 2016 ರಲ್ಲಿ  ದೇಶದ  ಉನ್ನತ ನಾಗರಿಕ ಪುರಸ್ಕಾರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ಬ್ಯಾಡ್ಮಿಂಟನ್  ತಾರೆ 24 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಗೆದ್ದರು. 2009 ರಲ್ಲಿ ನಂ.2  ಸ್ಥಾನ ಮತ್ತು 2015 ರಲ್ಲಿ ನಂ.1  ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಿಂದ ಸಂಸದರಾಗಿ ಆಯ್ಕೆಯಾದ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಕುಸ್ತಿಪಟು ಬಬಿತಾ ಫೋಗತ್ ಸೇರಿದಂತೆ ಅನೇಕ ಪ್ರಸಿದ್ಧ  ಕ್ರೀಡಾಪಟುಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು, ಕುಸ್ತಿಪಟು ಸುಶೀಲ್ ಕುಮಾರ್, ಬಬಿತಾ ಫೋಗಾಟ್ ಮತ್ತು ಮಾಜಿ ಹಾಕಿ ತಂಡದ ನಾಯಕ ಸಂದೀಪ್ ಸಿಂಗ್  ಬಿಜೆಪಿ ಸೇರ್ಪಡೆಯಾಗಿದ್ದರು. ಸಂದೀಪ್ ಸಿಂಗ್ ಕಳೆದ  ಚುನಾವಣೆಯಲ್ಲಿ ಜಯಗಳಿಸಿ ಸಚಿವರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News