ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ: 1,44,500 ಉದ್ಯೋಗ ನಷ್ಟ

Update: 2020-01-29 15:30 GMT
ಫೈಲ್ ಚಿತ್ರ

ಶ್ರೀನಗರ,ಜ.29: ಕೇಂದ್ರವು ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡು ಸಂವಹನ ನಿರ್ಬಂಧಗಳನ್ನು ಹೇರಿದ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ. ಹೊಟ್ಟೆಪಾಡಿಗಾಗಿ ಪ್ರವಾಸೋದ್ಯಮ ಮತ್ತು ಪ್ರವಾಸಿಗಳಿಗೆ ಕರಕುಶಲ ವಸ್ತುಗಳ ಮಾರಾಟವನ್ನೇ ನಂಬಿಕೊಂಡಿದ್ದ 1,44,500 ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದು,ಮುಂಬರುವ ವಸಂತ ಋತುವಿನಲ್ಲಿಯೂ ಪ್ರವಾಸಿಗಳು ಕಾಶ್ಮೀರದತ್ತ ಮುಖ ಹಾಕದಿದ್ದರೆ ಇನ್ನಷ್ಟು ಜನರು ತಮ್ಮ ಜೀವನೋಪಾಯಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಭಾರೀ ಭದ್ರತಾ ಸಿಬ್ಬಂದಿಯ ನಿಯೋಜನೆಯ ನಡುವೆಯೇ ಭದ್ರತಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಯಾದರೂ,ಆರು ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡಿಲ್ಲ.

ಜ.10ರ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಕಾಶ್ಮೀರದ ಎಲ್ಲ ಜಿಲ್ಲೆಗಳಲ್ಲಿ ಪೋಸ್ಟ್ ಪೇಡ್ ಮೊಬೈಲ್ ಫೋನ್‌ಗಳಿಗೆ 2ಜಿ ಮೊಬೈಲ್ ಡಾಟಾ ಸೇವೆಯನ್ನು ಪುನರಾರಂಭಿಸುವುದಾಗಿ ಸರಕಾರವು ಪ್ರಕಟಿಸಿತ್ತಾದರೂ,ವೈಟ್‌ಲಿಸ್ಟ್‌ನಲ್ಲಿರುವ ವೆಬ್‌ಸೈಟ್‌ಗಳಿಗೆ ಮಾತ್ರ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅಂತರ್ಜಾಲ ನಿರ್ಬಂಧಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ.

2018ರಲ್ಲಿ ಆಗಸ್ಟ್ ಮತ್ತು ಡಿಸೆಂಬರ್ ನಡುವೆ 316,434 ಪ್ರವಾಸಿಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರೆ,2019ರ ಇದೇ ಅವಧಿಯಲ್ಲಿ ಈ ಸಂಖ್ಯೆ ಶೇ.86ರಷ್ಟು ಅಂದರೆ 43,059ಕ್ಕೆ ಕುಸಿದಿದೆ.

 ಜುಲೈ 2019ರಲ್ಲಿ 152,525 ಪ್ರವಾಸಿಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಆಗಸ್ಟ್ ‌ನಲ್ಲಿ ಈ ಸಂಖ್ಯೆ 10,130ಕ್ಕೆ ಇಳಿದಿತ್ತು. ಅದೂ ಹೆಚ್ಚಿನ ಪ್ರವಾಸಿಗಳು ತಿಂಗಳ ಮೊದಲ ಕೆಲವು ದಿನಗಳಲ್ಲೇ ಭೇಟಿ ನೀಡಿದ್ದರು. ಸೆಪ್ಟೆಂಬರ್ 2019ರಲ್ಲಿ ಇನ್ನಷ್ಟು ಕುಸಿದು 4,562ಕ್ಕೆ ತಲುಪಿದ್ದ ಪ್ರವಾಸಿಗಳ ಸಂಖ್ಯೆ ನವಂಬರ್‌ನಲ್ಲಿ ಗುಲ್ಮಾರ್ಗ್‌ನಲ್ಲಿ ಚಳಿಗಾಲದ ಕ್ರೀಡೆಗಳ ಸಂದರ್ಭ ಕೊಂಚ ಚೇತರಿಸಿಕೊಂಡು 12,086ಕ್ಕೆ ತಲುಪಿತ್ತು. ಡಿಸೆಂಬರ್‌ನಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರವಾಸಿಗಳ ಮತ್ತೆ ಕುಸಿದು ಕೇವಲ 6,594ರಷ್ಟಿತ್ತು.

ಪರಿಸ್ಥಿತಿ ಹೀಗಿದ್ದರೂ 2019,ನ.19ರಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ ಸಿಂಗ್ ಪಟೇಲ್ ಅವರು ವಿಶೇಷ ಸ್ಥಾನಮಾನ ರದ್ದತಿ ಮತ್ತು ನಿರ್ಬಂಧಗಳು ರಾಜ್ಯದ ಪ್ರವಾಸೋದ್ಯಮದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರ ಈ ಎರಡೂ ಸ್ಥಳಗಳ ಪ್ರವಾಸಿಗಳ ಸಂಖ್ಯೆಯನ್ನು ಒಂದಾಗಿ ಪರಿಗಣಿಸಿ ಅಂಕಿಅಂಶಗಳನ್ನು ಒದಗಿಸಿದ್ದರು. ವೈಷ್ಣೋದೇವಿ ಯಾತ್ರೆಗಾಗಿ ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ಜಮ್ಮುವಿಗೆ ಭೇಟಿ ನೀಡುತ್ತಾರೆ.

ಸಂವಹನ ನಿರ್ಬಂಧವು ವಿವಿಧ ಸಂಕಷ್ಟಗಳನ್ನು ತಂದೊಡ್ಡಿದೆ. ಉದ್ಯಮಗಳ ಮೇಲೆ ದುಷ್ಪರಿಣಾಮವಾಗಿದ್ದು, ಜನರು ಗಂಭೀರ ಅನಾರೋಗ್ಯವಿದ್ದರೂ ಚಿಕಿತ್ಸೆಗೆ ತೆರಳುವುದನ್ನು ದುರ್ಭರವಾಗಿಸಿದೆ. ರಾಜ್ಯದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ.7ರಷ್ಟಿದ್ದು,ನಿರ್ಬಂಧಗಳು ಕಾಶ್ಮೀರದ ಪ್ರವಾಸೋದ್ಯಮದ ಬೆನ್ನೆಲುಬನ್ನೇ ಮುರಿದಿವೆ.

2019,ಆ.5ರ ನಂತರ ರಾಜ್ಯಕ್ಕುಂಟಾಗಿರುವ ಒಟ್ಟು ವಾಣಿಜ್ಯಿಕ ನಷ್ಟದ ಪ್ರಮಾಣ 15,000 ಕೋ.ರೂ.ಗಳೆಂದು ಅಂದಾಜಿಸಲಾಗಿದ್ದು,ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟು 496,000 ಉದ್ಯೋಗ ನಷ್ಟವಾಗಿದೆ.

2019,ಆ.5ರ ನಂತರ ರಾಜ್ಯದಲ್ಲಿ ಉದ್ಭವಿಸಿದ ಸ್ಥಿತಿಯು ಕಾಶ್ಮೀರದ ಪ್ರವಾಸೋದ್ಯದ ಬೆನ್ನೆಲುಬನ್ನೇ ಮುರಿದಿದೆ. ಪ್ರವಾಸೋದ್ಯಮ ಕ್ಷೇತ್ರವು ಮುರಿದುಬಿದ್ದ ಮನೆಯಂತಾಗಿದ್ದು,ಕುಶಲಕರ್ಮಿಗಳು ಮತ್ತು ನೇಕಾರರಿಗೆ ಕೆಲಸವಿಲ್ಲದಂತಾಗಿದೆ. ಪೂರಕ ವಾತಾವರಣ ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದೆ ವ್ಯಾಪಾರವನ್ನು ಇಂದಿನ ಯುಗದಲ್ಲಿ ಊಹಿಸಲೂ ಸಾಧ್ಯವಿಲ್ಲ. ಒಂದೇ ಹೊಡೆತಕ್ಕೆ ರಾಜ್ಯದ ಆರ್ಥಿಕತೆಗೆ ಸರಿಪಡಿಸಲಾಗದಷ್ಟು ಹಾನಿಯುಂಟಾಗಿದೆ. ಅದು ಯಾವುದೇ ಕ್ಷೇತ್ರವನ್ನು ಬಿಟ್ಟಿಲ್ಲ ಎಂದು ಕಾಶ್ಮೀರ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಉಪಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News