ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಮತ್ತೊಬ್ಬ ಆರೋಪಿ

Update: 2020-01-29 15:44 GMT

ಹೊಸದಿಲ್ಲಿ, ಜ.29: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳಲ್ಲಿ ಒಬ್ಬನಾಗಿರುವ ಅಕ್ಷಯ ಠಾಕುರ್ ಸುಪ್ರೀಂಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ ದಾಖಲಿಸಿದ್ದಾನೆ ಎಂದು ವರದಿಯಾಗಿದೆ.

ಆದರೆ ಫೆಬ್ರವರಿ 1ರಂದು ನಿಗದಿಯಾಗಿರುವ ಗಲ್ಲುಶಿಕ್ಷೆ ಪ್ರಕ್ರಿಯೆಗೆ ಈ ಅರ್ಜಿಯಿಂದ ಯಾವುದೇ ಪರಿಣಾಮವಾಗದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಠಾಕುರ್ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರತೀ ಬಾರಿ ಗಲ್ಲುಶಿಕ್ಷೆ ಪ್ರಕ್ರಿಯೆ ಮುಂದೂಡಿದಾಗಲೂ ಜೈಲು ಅಧಿಕಾರಿಗಳು ಸುಮಾರು 50,000 ರೂ. ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತದೆ. ಒಬ್ಬ ಆರೋಪಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರೂ ಎಲ್ಲಾ ಆರೋಪಿಗಳ ಶಿಕ್ಷೆ ಜಾರಿ ತಡವಾಗುತ್ತದೆ. ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಶುಕ್ರವಾರ ಸಂಜೆಯವರೆಗೆ ಅವಕಾಶವಿದೆ. ತಮ್ಮ ಕುಟುಂಬದವರನ್ನು ಅಂತಿಮ ಬಾರಿ ಭೇಟಿಯಾಗಲು ಅವಕಾಶವಿದ್ದು ದಿನಾಂಕವನ್ನು ತಿಳಿಸುವಂತೆ ಮಂಗಳವಾರ ನಾಲ್ವರು ಆರೋಪಿಗಳಿಗೂ ತಿಹಾರ್ ಜೈಲಿನ ಅಧಿಕಾರಿಗಳು ಸೂಚಿಸಿದ್ದಾರೆ.

ಶುಕ್ರವಾರದ ಒಳಗೆ ತಿಹಾರ್ ಜೈಲಿಗೆ ಬರುವಂತೆ ಗಲ್ಲಿಗೇರಿಸುವ ವ್ಯಕ್ತಿಗೆ ಈಗಾಗಲೇ ಸೂಚಿಸಲಾಗಿದೆ. ಈ ಮಧ್ಯೆ, ಜೈಲಿನಲ್ಲಿ ಬಂಧಿಯಾಗಿದ್ದ ಸಂದರ್ಭ ಆರೋಪಿ ಅಕ್ಷಯ್ ಠಾಕುರ್‌ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ತನ್ನನ್ನು ಬಲವಂತಮಾಡಲಾಗಿತ್ತು ಎಂಬ ಮುಕೇಶ್ ಆರೋಪದ ಹಿನ್ನೆಲೆಯಲ್ಲಿ, ಜೈಲಿನಲ್ಲಿದ್ದಾಗ ನಡೆಸಲಾಗಿದ್ದ ಸಮಾಲೋಚನಾ ಸಭೆಗಳ ವಿವರವನ್ನು ಪಡೆಯಲಾಗಿದೆ. ಆದರೆ ಮುಕೇಶ್ ಅಥವಾ ಅಕ್ಷಯ್ ಯಾವುದೇ ದೂರು ನೀಡಿರಲಿಲ್ಲ ಎಂದು ಸಮಾಲೋಚನಾ ಸಭೆ ನಡೆಸಿದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News