ಮೋದಿ,ಅಮಿತ್ ಶಾ ದೇಶವನ್ನು ಒಡೆಯಲು ಧರ್ಮವನ್ನು ಬಳಸುತ್ತಿದ್ದಾರೆ: ಕನ್ಹಯ್ಯ ಕುಮಾರ್

Update: 2020-01-29 16:36 GMT

ಔರಂಗಾಬಾದ್(ಮಹಾರಾಷ್ಟ್ರ),ಜ.29: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುವ ಮೂಲಕ ದೇಶದ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಮಧ್ಯೆ ಒಡಕನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರು ಬುಧವಾರ ಪರ್ಭನಿ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಆರೋಪಿಸಿದರು.

ಗುಜರಾತ್ ಚುನಾವಣೆಗಳ ಸಂದರ್ಭ ಹಿಂದುಗಳು ಮತ್ತು ಮುಸ್ಲಿಮರ ನಡುವೆ ಸಂಘರ್ಷವನ್ನು ಹುಟ್ಟುಹಾಕಲು ಮೋದಿ ಮತ್ತು ಶಾ ಪ್ರಯತ್ನಿಸಿದ್ದರು. ಈಗ ಅವರು ಇದೇ ತಂತ್ರವನ್ನು ದೇಶಾದ್ಯಂತ ಬಳಸುತ್ತಿದ್ದಾರೆ ಎಂದರು.

ಧಾರ್ಮಿಕ ಸಂಘರ್ಷಗಳನ್ನು ಬದಿಗಿಡುವಂತೆ ಮತ್ತು ಅದರ ಬದಲು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಆರ್ಥಿಕತೆಯ ದುಃಸ್ಥಿತಿಯಂತಹ ವಿಷಯಗಳ ಕುರಿತು ಕೇಂದ್ರದೊಂದಿಗೆ ಸಂಘರ್ಷ ನಡೆಸುವಂತೆ ನಾಗರಿಕರನ್ನು ಕೋರಿದ ಕುಮಾರ್,ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಜನರು ಸರಕಾರವನ್ನು ಪ್ರಶ್ನಿಸಿದರೆ ಅದು ಅವರ ಪೌರತ್ವವನ್ನು ಮರುಪ್ರಶ್ನಿಸುತ್ತಿದೆ. ಸಿಎಎ ಮೂಲಕ ಕೇಂದ್ರವು ದೇಶದಲ್ಲಿ ಈಗಾಗಲೇ ಎದ್ದಿರುವ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News