ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಿರ್ಗಮನ ಪರೀಕ್ಷೆ: ಕರಡು ಮಸೂದೆಯಲ್ಲಿ ಪ್ರಸ್ತಾವ

Update: 2020-01-30 15:56 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ,ಜ.30: ದಂತವೈದ್ಯರ ಕಾಯ್ದೆ,1948ರ ಬದಲು ತರಲು ಉದ್ದೇಶಿಸಿರುವ ರಾಷ್ಟ್ರೀಯ ದಂತ ವೈದ್ಯಕೀಯ ಆಯೋಗ ಮಸೂದೆ 2020 ಅಂಗೀಕರಿಸಲ್ಪಟ್ಟರೆ ದಂತ ವೈದ್ಯಕೀಯ ಪದವಿ (ಬಿಡಿಎಸ್) ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗ (ಎಂಡಿಎಸ್)ಕ್ಕೆ ಮುನ್ನ ಮತ್ತು ದಂತವೈದ್ಯರಾಗಿ ಪ್ರಾಕ್ಟೀಸ್ ನಡೆಸಲು ಪರವಾನಿಗೆಗಾಗಿ ನಿರ್ಗಮನ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಇದನ್ನು ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್)-ದಂತ ವೈದ್ಯಕೀಯ ಎಂದು ಹೆಸರಿಸಲಾಗಿದ್ದು,ಎಂಬಿಬಿಎಸ್ ನಿರ್ಗಮನ ಪರೀಕ್ಷೆಯ ಮಾದರಿಯಲ್ಲಿರಲಿದೆ.

ರಾಷ್ಟ್ರೀಯ ದಂತ ವೈದ್ಯಕೀಯ ಆಯೋಗ ಮಸೂದೆ 2020ರ ಕರಡನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬಿಡುಗಡೆಗೊಳಿಸಿದ್ದು,ರಾಷ್ಟ್ರೀಯ ದಂತ ವೈದ್ಯಕೀಯ ಆಯೋಗದ ಸ್ಥಾಪನೆಗಾಗಿ ಅದನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಫೆ.20ರವರೆಗೆ ಸಮಯಾವಕಾಶ ನೀಡಲಾಗಿದೆ.

ವಿದೇಶಗಳಲ್ಲಿ ದಂತ ವೈದ್ಯಕೀಯ ವ್ಯಾಸಂಗವನ್ನು ಪಡೆದಿರುವವರೂ ಪ್ರಾಕ್ಟೀಸ್ ನಡೆಸಲು ಪರವಾನಿಗೆಗಾಗಿ ಮತ್ತು ನೋಂದಣಿಗಾಗಿ ನೆಕ್ಸ್ಟ್‌ಗೆ ಹಾಜರಾಗಬೇಕಾಗುತ್ತದೆ ಎಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ.

ನಾಲ್ಕು ಸ್ವಾಯತ್ತ ಮಂಡಳಿಗಳ ರಚನೆಯನ್ನು ಮಸೂದೆಯಲ್ಲಿ ಪ್ರಸ್ತಾಪಿಲಾಗಿದ್ದು,ಪ್ರತಿ ಮಂಡಳಿಯೂ ಅಧ್ಯಕ್ಷ,ಇಬ್ಬರು ಪೂರ್ಣಕಾಲಿಕ ಸದಸ್ಯರು ಮತ್ತು ಇಬ್ಬರು ಅರೆಕಾಲಿಕ ಸದಸ್ಯರನ್ನು ಹೊಂದಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News