ನನ್ನ ಪೌರತ್ವ ನಿರ್ಧರಿಸಲು ಮೋದಿ ಯಾರು ?: ರಾಹುಲ್ ಗಾಂಧಿ

Update: 2020-01-30 16:36 GMT

ವಯನಾಡ್, ಜ. 30: ದೇಶದ 130 ಕೋಟಿ ಭಾರತೀಯರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕು ಎಂದು ಹೇಳುವ ಹಕ್ಕು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

‘‘ನನ್ನ ಪೌರತ್ವವನ್ನು ನಿರ್ಧರಿಸಲು ಅವರು ಯಾರು ? ಯಾರು ಭಾರತೀಯರು ಹಾಗೂ ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಅನುಮತಿ ನೀಡಿದವರು ಯಾರು?’’ ಎಂದು ಕೇರಳದ ತನ್ನ ಲೋಕ ಸಭಾ ಕ್ಷೇತ್ರ ವಯನಾಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಅವರು ಹೇಳಿದರು. ನನಗೆ ಗೊತ್ತು ನಾನು ಭಾರತೀಯ ಎಂದು. ನಾನು ಇದನ್ನು ಯಾರಿಗೂ ಸಾಬೀತುಪಡಿಸಬೇಕಾದ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವುದಕ್ಕಿಂತ ಮುನ್ನ ಅವರು ವಯನಾಡ್‌ನ ಕಲ್ಪೆಟ್ಟಾದ ಎಸ್‌ಕೆಎಂಜೆ ಪ್ರೌಢ ಶಾಲೆಯಿಂದ ಹೊಸ ಬಸ್ ಸ್ಟಾಂಡ್ ವರೆಗೆ ನಡೆದ 2 ಕಿ. ಮೀ. ‘ಸಂವಿಧಾನ ರಕ್ಷಿಸಿ ರ್ಯಾಲಿ’ಯ ನೇತೃತ್ವ ವಹಿಸಿದ್ದರು.

ಮಹಾತ್ಮಾ ಗಾಂಧಿ ಅವರ 72ನೇ ಹುತಾತ್ಮ ದಿನ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಈ ರ್ಯಾಲಿ ಆಯೋಜಿಸಲಾಗಿತ್ತು. ಅಜ್ಞಾನಿ ಹಾಗೂ ಅಜ್ಞಾತ ವ್ಯಕ್ತಿಯಾಗಿರುವ ನರೇಂದ್ರ ಮೋದಿ ಭಾರತದ ಕುರಿತ ಗಾಂಧಿ ಚಿಂತನೆಗಳನ್ನು ಪ್ರಶ್ನಿಸಲು ಯತ್ನಿಸುತ್ತಿದ್ದಾರೆ. ಅವರಿಗೆ ಈ ದೇಶದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಕಾರಣಕ್ಕೆ ಅವರು ದ್ವೇಷ ಹಾಗೂ ಆಕ್ರೋಷದಿಂದ ತುಂಬಿಕೊಂಡಿದ್ದಾರೆ. ಗೋಡ್ಸೆ ಮತ್ತು ಮೋದಿ ಒಂದೇ ಚಿಂತನೆಯಲ್ಲಿ ನಂಬಿಕೆ ಇರಿಸಿದವರು. ಆದರೆ, ಮೋದಿ ತಾನು ಗೋಡ್ಸೆ ಬೆಂಬಲಿಗ ಎಂದು ಹೇಳುವ ಧೈರ್ಯ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ‘‘ಕಲುಬುರ್ಗಿ ಹಾಗೂ ಗೌರಿ ಲಂಕೇಶ್‌ರಂತಹ ಜನರ ಹತ್ಯೆ ನಡೆಯುತ್ತಿದೆ. ಪ್ರತಿ ದಿನ ಮಹಿಳೆಯರ ಅತ್ಯಾಚಾರ ನಡೆಯುತ್ತಿದೆ. ನಿರುದ್ಯೋಗ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಈ ನಡುವೆ ನಾವು ಭಾರತೀಯರು ಎಂದು ಸಾಬೀತುಪಡಿಸುವಂತೆ ಭಾರತೀಯರಾಗಿ ಸೂಚಿಸಲಾಗಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News