ಬಜೆಟ್‌ನಲ್ಲಿ ಸವಿತಾ ಸಮುದಾಯಕ್ಕೆ 100 ಕೋಟಿ: ಸಿಎಂಗೆ ಬೇಡಿಕೆ ಸಲ್ಲಿಸಲು ವಕಾಲತ್ತು- ಸಿ.ಟಿ ರವಿ ಭರವಸೆ

Update: 2020-02-01 12:42 GMT

ಬೆಂಗಳೂರು, ಫೆ.1: ಪ್ರಸಕ್ತ ಬಜೆಟ್‌ನಲ್ಲಿ ಸವಿತಾ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಮೀಸಲಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲು ವಕಾಲತ್ತು ವಹಿಸುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಭರವಸೆ ನೀಡಿದ್ದಾರೆ. 

ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಿತಾ ಸಮುದಾಯದ ಜನಾಂಗಕ್ಕೆ ವೃತ್ತಿ ತರಬೇತಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಾಸ್ಟೆಲ್ ಸೌಲಭ್ಯ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಜರುಗುವ ಸಂತ, ಮಹನೀಯರ ಜಯಂತಿಗಳ ಆಚರಣೆಗಳಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗುವುದು. ಲಿಂಗಾಯತರಿಗೆ ಬಸವೇಶ್ವರ ಜಯಂತಿ, ಸವಿತಾ ಸಮಾಜಕ್ಕೆ ಮಹರ್ಷಿ ಜಯಂತಿ, ಕನಕದಾಸರ ಜಯಂತಿ ಕುರುಬರಿಗೆ ಸೇರಿದಂತೆ ಹಲವು ಜಯಂತಿ ಆಚರಣೆ ಒಂದೊಂದು ಸಮಾಜಕ್ಕೆ ಮೀಸಲಾಗಿದೆ. ಆದರೆ, ಇದನ್ನು ಬದಲಾವಣೆ ಮಾಡಿ, ಎಲ್ಲ ಸಮಾಜಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿಭಿನ್ನವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಸಾಹಿತಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ನಮ್ಮ ಪೂರ್ವಜರಲ್ಲಿ ಜಾತಿ ವೃತ್ತಿಸೂಚಕವಾಗಿತ್ತು. ಬ್ರಹ್ಮ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವವನು ಬ್ರಾಹ್ಮಣನಾಗಿದ್ದನು. ಗುಣಸೂಚಕವಾಗಿದ್ದು ಕ್ರಮೇಣ ಜಾತಿ ಸೂಚಕವಾಗಿ ಸಮಾಜವನ್ನು ಹಾಳುಗೆಡುವುತ್ತಿದೆ. ಮನುಷ್ಯ ಚಂದ್ರನ ಮೇಲೆ ಹೋಗಿ ಬಂದರೂ ಸಹ ಮನುಷ್ಯರ ನಡುವಿನ ಜಾತಿಯ ಅಂತರ ಕಡಿಮೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಂಚುರು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸವಿತಾ ಸಮುದಾಯದವರು ಇಂದು ಊಟದಲ್ಲಿನ ಕರಿಬೇವಿನಂತೆ ಬೇಡದ ವಸ್ತುವಾಗಿದ್ದಾರೆ. ನಮ್ಮ ಸಮುದಾಯದವರು ವಿಶ್ವಕ್ಕೇ ಶಸ್ತ್ರ ಚಿಕಿತ್ಸೆಯನ್ನು ಕಲಿಸಿದವರು. ಅಂತಹ ಸಮುದಾಯದ ಅಭಿವೃದ್ಧಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನಿಗಮ ಮಂಡಳಿ ಸ್ಥಾಪಿಸಿ, 100 ಕೋಟಿ ರೂ. ಅನುದಾನ ನೀಡುವ ಮೂಲಕ ಸಮುದಾಯದ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಸವಿತಾ ಸಮಾಜದ ವ್ಯಕ್ತಿಯನ್ನು ತೆಗಳುವಾಗ ಸಮುದಾಯದ ‘ಹಜಾಮ’ ಎಂಬ ಕೆಟ್ಟ ಪದವನ್ನು ಬಳಸದಂತೆ ರಾಜ್ಯ ಸರಕಾರ ಸೂಚಿಸಬೇಕು. ಅಭಿವೃದ್ಧಿ ಮಂಡಳಿಗೆ ಸೂಕ್ತ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕ್ಷೌರಿಕರ ಇತಿಹಾಸ ಕುರಿತ ‘ಕೇಶ ಶಿಲ್ಪಿಗಳು’ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಜ್ಯೋತಿ ಹೀನನ ಮನೆಯ ಜ್ಯೋತಿ ತಾ ಹೀನವೇ. ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜಾತ ಸರ್ವಜ್ಞ. ಕಾಸಿ ಕಮ್ಮಾರನಾದ.. ಬೀಸಿ ಮಡಿವಾಳನಾದ... ಇವನಾರವ ಇವನಾರವ ಎಂದಿನಿಸದಿರಯ್ಯ. ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ.. ನಿಮ್ಮ ಮಗನಂತೆನಿಸಯ್ಯ ಕೂಡಲಸಂಗಮದೇವ. ಮೇಲಿನ ಉಕ್ತಿಗಳಂತೆ ಭಗವಂತ ಜಾತಿಗೆ ಒಲಿಯದೆ ನಿರ್ಮಲವಾದ ಭಕ್ತಿಗೆ ಒಲಿಯುತ್ತಾನೆ ಎಂದು ಸಾಬೀತಾಗುತ್ತದೆ. ಆದ್ದರಿಂದ ಮನುಷ್ಯರ ನಡುವಿನ ಜಾತಿಯು ಕಡಿಮೆಯಾದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ.

-ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News