×
Ad

ಸಿಎಎ ವಿರೋಧಿಗಳೇ ನಮ್ಮ ಮುಂದಿನ ಟಾರ್ಗೆಟ್: ಸಂಸದ ಅನಂತಕುಮಾರ ಹೆಗಡೆ

Update: 2020-02-01 18:46 IST

ಬೆಂಗಳೂರು, ಫೆ.1: ಪೌರತ್ವ(ತಿದ್ದುಪಡಿ) ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ವಿರೋಧಿಸುತ್ತಿರುವವರನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ. ಇವರೇ ನಮ್ಮ(ಬಿಜೆಪಿ) ಮುಂದಿನ ಟಾರ್ಗೆಟ್ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾವರ್ಕರ್ ಸಾಹಿತ್ಯ ಸಂಘದ ವತಿಯಿಂದ ಆಯೋಜಿಸಿದ್ದ 'ಮತ್ತೆ ಮತ್ತೆ ಸಾವರ್ಕರ್' ವಿಚಾರ ಸಂಕಿರಣ ಹಾಗೂ ಹಿಂದುತ್ವ ಕೃತಿಯ 10ನೇ ಮುದ್ರಣ ಲೋರ್ಕಾಪಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಿದ ಬಳಿಕ ಯಾವ ಯಾವ ಹುತ್ತದಲ್ಲಿ ಹಾವುಗಳಿವೆ ಎಂಬುದು ತಿಳಿಯುತ್ತಿದೆ. ಯಾವ ಶಿಕ್ಷಣ ಸಂಸ್ಥೆಗಳಲ್ಲಿ ಸೋಗಲಾಡಿ ಬುದ್ಧಿಜೀವಿಗಳಿದ್ದಾರೆ, ನಮ್ಮ ನಡುವೆಯೇ ಇರುವ ಬುದ್ಧಿಗೇಡಿಗಳು ಯಾರೆಂದು ತಿಳಿಯುತ್ತಿದೆ. ದೇಶ ಭಕ್ತರು ಮತ್ತು ದೇಶದ್ರೋಹಿಗಳು ಯಾರು, ಯಾರಿಗೆ ರಾಷ್ಟ್ರೀಯತೆಯ ಅರಿವಿದೆ ಎಂಬುದು ತಿಳಿಯುತ್ತಿದೆ ಎಂದರು.

ಶಿಕ್ಷಿತ ವಲಯದಲ್ಲಿ ಮುಖವಾಡ ತೊಟ್ಟಿರುವ ಸೋಕಾಲ್ಡ್ ಶಿಕ್ಷಿತರು ಯಾರು, ಹೊರಗಡೆಯಿರುವ ತಿಳಿಗೇಡಿಗಳು ಯಾರು ಎಂಬುದು ಅರ್ಥವಾಗುತ್ತಿದೆ. ರಾಷ್ಟ್ರ ವಿರೋಧಿ ನೀತಿ, ಆಂದೋಲನಗಳನ್ನು ಹೊಸಕಿ ಹಾಕುವ ತಾಕತ್ತು ಸರಕಾರಕ್ಕಿದೆ. ಆದರೆ, ಇನ್ನಷ್ಟು ಈ ಮುಖವಾಡಗಳು ಹೊರಬರಲಿ ಎಂದು ಅವಕಾಶ ನೀಡಲಾಗಿದೆ. ಎಲ್ಲವೂ ಹೊರಗಡೆ ಬರಲಿ, ನಮಗೂ ಟಾರ್ಗೇಟ್ ಇಡಲು ಅನುಕೂಲವಾಗುತ್ತದೆ ಎಂದು ನುಡಿದರು.

ಹಿಂದುತ್ವ ಕೇವಲ ಒಂದು ಧಾರ್ಮಿಕ ಸಿದ್ಧಾಂತವಲ್ಲ. ಅದು ನಮ್ಮ ದೇಶದ ರಾಷ್ಟ್ರೀಯತೆಯ ಪ್ರತೀಕವಾಗಿದೆ. ಈ ಜಗತ್ತಿನಲ್ಲಿ ವೇದಗಳಷ್ಟು ಪ್ರಾಚೀನವಾದ ಸಾಹಿತ್ಯಗಳಿಲ್ಲ ಎಂದು ಇತಿಹಾಸಕಾರರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆದರೆ ನಮ್ಮಲ್ಲಿರುವ ಕೆಲವರು ಇದಕ್ಕೆ ಒಂದು ಚೌಕಟ್ಟನ್ನು ಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಜತೆಗೆ ಆರ್ಯರು ಮಧ್ಯೆ ಏಷಿಯಾದಿಂದ ಬಂದರು ಎಂದು ಸುಳ್ಳನ್ನು ಹರಿಬಿಟ್ಟಿದ್ದಾರೆ. ಆರ್ಯರು ಮಧ್ಯೆ ಏಷಿಯಾದಿಂದ ಬಂದಿಲ್ಲ ಎಂಬುವುದನ್ನು ಜಗತ್ತೇ ಈಗ ಒಪ್ಪಿಕೊಂಡಿದೆ. ಆದರೂ ಕೆಲವರು ಈ ಬಗ್ಗೆ ಸುಳ್ಳುಗಳನ್ನು ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು.

ಇಸ್ಲಾಂ ವಿಚಾರಧಾರೆಗಳ ಆಳ್ವಿಕೆ: ಜಗತ್ತನ್ನು ವ್ಯಕ್ತಿಗಳು ಆಳ್ವಿಕೆ ಮಾಡುತ್ತಾರೆ ಎಂದು ನಾವು ನಂಬಿದ್ದೇವೆ. ಆದರೆ, ಜಗತ್ತಿನ ಎಲ್ಲೆಡೆ ನೋಡಿದರೂ, ಎಲ್ಲಿಯೂ ವ್ಯಕ್ತಿಯ ಆಳ್ವಿಕೆಯಿಲ್ಲ, ಬದಲಿಗೆ ವಿಚಾರಗಳ ಆಳ್ವಿಕೆ ನಡೆದಿದೆ. ಒಂದು ಹಂತದವರೆಗೆ ಆಧ್ಯಾತ್ಮಿಕ ವಿಚಾರ ಈ ಜಗತ್ತನ್ನು ಆಳಿದೆ. ಆ ನಂತರ ವ್ಯಾಪಾರ, ಬಂಡವಾಳ ಶಾಹಿ ವಿಚಾರಧಾರೆಗಳು, ಕೆಲವು ಕಡೆ ಕಮ್ಯೂನಿಸ್ಟ್ ವಿಚಾರಧಾರೆಗಳು ಜಗತ್ತನ್ನು ಆಳಿವೆ. ಇದೀಗ ಇಸ್ಲಾಂ ವಿಚಾರಧಾರೆ ಜಗತ್ತನ್ನು ಆಳಲು ಹೊರಟಿದೆ ಎಂದು ದೂರಿದರು.

ರಾಷ್ಟ್ರೀಯ ವಿಚಾರವನ್ನು ಕುತರ್ಕಕ್ಕೆ ಒಳಗೊಳಿಸಿ ಚರ್ಚೆಗೆ ಅವಕಾಶ ನೀಡಿರುವುದು ನಮ್ಮ ದೇಶದ ದಿವಾಳಿತನದ ಪ್ರತೀಕವಾಗಿದೆ. ಚರ್ಚೆ ಸಮಾಜಕ್ಕೆ, ದೇಶಕ್ಕೆ ಹಿತವಾಗಿರಬೇಕು ಹಾಗೂ ಪೂರಕವಾಗಿರಬೇಕು. ಒಳ್ಳೆಯದು ಹೊರಗಡೆಯಿಂದ ಬರಲಿ, ಹೇಳಿದ್ದು ಒಪ್ಪದೇ ಬದಲಾವಣೆಯಿಂದ ಕೂಡಿದ ವಿವರಣೆಯನ್ನು ಒಪ್ಪಬಹುದು. ಆದರೆ, ನಮ್ಮ ಅಸ್ತಿತ್ವದ ಬುಡಕ್ಕೆ ಬೆಂಕಿಯಿಡಲು ಹೊರಟಿದ್ದಾರೆ ಎಂದರು.

ಈ ದೇಶದ ಸ್ವಾತಂತ್ರಕ್ಕಾಗಿ ಕೆಲವೇ ಜನರು ಹೋರಾಟ ನಡೆಸಿದ್ದಾರೆ ಎಂಬ ರೀತಿಯಲ್ಲಿ ಪ್ರತಿಬಿಂಬಿಸಲಾಗುತ್ತಿದೆ. ಬ್ರಿಟಿಷರ ವಿರುದ್ಧ ಉಗ್ರ ರೀತಿಯ ಹೋರಾಟ ನಡೆಸಿ ಲಾಠಿ ಏಟು ತಿಂದು ಸೆರೆ ಮನೆಯ ಕತ್ತಲೆ ಕೋಣೆಯಲ್ಲಿ ಹಲವರು ಜೀವನ ಕಳೆದರು. ಅವರ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಆದರೆ ಬ್ರಿಟಿಷರ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದ ವ್ಯಕ್ತಿಗಳು ಈಗ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷ ಹಾಗೂ ಸಾಹಿತಿ ಡಾ.ಜಿ.ಬಿ.ಹರೀಶ, ಲೇಖಕ ಬಾಬು ಕೃಷ್ಣಮೂರ್ತಿ, ಸಮೃದ್ಧ ಸಾಹಿತ್ಯ ಪ್ರಕಾಶಕ ಹರ್ಷ ಕೆ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾವರ್ಕರ್ ಅಪರಾಧಿ ಅಲ್ಲ

ಗಾಂಧಿ ಹತ್ಯೆಯಾದ ಬಳಿಕ ಸಾವರ್ಕರ್‌ರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅವರ ಬಂಧನವನ್ನು ಅಂಬೇಡ್ಕರ್ ವಿರೋಧಿಸಿದ್ದರು. ಅಂದು ಅವರ ಮಾತನ್ನು ಯಾರೂ ಕೇಳಲಿಲ್ಲ. ಅನಂತರ ಸುಪ್ರೀಂಕೋರ್ಟ್ ಸಾವರ್ಕರ್ ಪರವಾಗಿ ತೀರ್ಪು ನೀಡಿ, ಅಪರಾಧಿ ಅಲ್ಲ ಎಂದಿದೆ. ಆದರೂ, ಹಲವರಿಂದು ಆರೆಸ್ಸೆಸ್ ಗಾಂಧಿ ಹತ್ಯೆ ಮಾಡಿಸಿತು ಎಂದು ಆರೋಪಿಸುವುದು ಸರಿಯಲ್ಲ.

-ಅನಂತಕುಮಾರ ಹೆಗಡೆ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News