ಸಂವಿಧಾನ ವಿರೋಧಿ ಕೃತ್ಯಗಳನ್ನು ನೋಡಿಯೂ ನ್ಯಾಯಾಲಯ ಮೌನವಾಗಿದೆ: ಪ್ರಶಾಂತ್ ಭೂಷಣ್ ಆತಂಕ
ಬೆಂಗಳೂರು, ಫೆ.1: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದು, ಮಾರಕಾಸ್ತ್ರಗಳಿಂದ ಹಲ್ಲೆಗಳು ನಡೆಯುತ್ತಿವೆ. ಹೀಗೆ ದೇಶದಲ್ಲಿ ಸಾಲು, ಸಾಲು ಸಂವಿಧಾನ ವಿರೋಧಿ ಕೃತ್ಯಗಳನ್ನು ನೋಡಿಕೊಂಡೂ ನ್ಯಾಯಾಲಯ ಮೌನ ವಹಿಸಿದೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಆತಂಕ ವ್ಯಕ್ತಪಡಿಸಿದರು.
ಶನಿವಾರ ಬೆಂಗಳೂರು ಅಡ್ವಕೇಟ್ ಫೋರಂ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಿಎಎ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ನಾಗರಿಕ ಸಂಸ್ಥೆಗಳಾದ ಚುನಾವಣಾ ಆಯೋಗ, ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ ಕಚೇರಿ, ನ್ಯಾಯಾಂಗ ವ್ಯವಸ್ಥೆ, ವಿಶ್ವವಿದ್ಯಾಲಯಗಳನ್ನು ಕೇಂದ್ರ ಸರಕಾರ ಆಕ್ರಮಿಸಿಕೊಂಡಿದೆ. ಹೀಗಾಗಿ, ಅವುಗಳು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲವೆಂದು ವಿಷಾದಿಸಿದರು.
ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಮಾತನ್ನು ಕೇಳಿ ಚುನಾವಣೆ ದಿನಾಂಕ ನಿಗದಿ ಮಾಡುತ್ತದೆ. ಬಿಜೆಪಿ ನಾಯಕರು ಚುನಾವಣಾ ಭಾಷಣದ ವೇಳೆ ಎಷ್ಟೇ ಆಕ್ರಮಣಕಾರಿ ಭಾಷಣ ಮಾಡಿದರೂ ಕೂಡ ಸಂಬಂಧ ಇಲ್ಲದಂತಿರುತ್ತದೆ. ಇದು ಪಕ್ಷಪಾತ ಧೋರಣೆಯಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.
ವಿಚಾರಗಳ ಕುರಿತು ಸಂಶೋಧನೆ, ಚರ್ಚೆಗಳಾಗಬೇಕಾದ ವಿಶ್ವವಿದ್ಯಾಲಯಗಳಲ್ಲಿ ದಾಳಿಗಳಾಗುತ್ತಿದೆ. ಕೆಲ ಸರಕಾರದ ಪ್ರತಿನಿಧಿಗಳೇ ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯವನ್ನು ಮುಚ್ಚಲು ಹೇಳುತ್ತಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಯಾರು ಮಾಡಿದ್ದಾರೆ ಎಂದು ತಿಳಿದೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ದಾಳಿಗೆ ಪೊಲೀಸರೇ ವಿದ್ಯುತ್ ತೆಗೆದು ಬೆಂಬಲ ಕೊಟ್ಟಿದ್ದರು ಎಂದರೆ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಭಾರತವನ್ನು ಹಿಂದು ರಾಷ್ಟ್ರ ಮಾಡಬೇಕೆಂಬುದು ಆರೆಸ್ಸೆಸ್‌ನ ಕನಸಾಗಿದೆ. ಹೀಗಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಹಿನ್ನೆಲೆ ಆ ಕನಸನ್ನು ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಜಾರಿಗೆ ತರುವ ಮೂಲಕ ನನಸು ಮಾಡಿಕೊಳ್ಳಲು ಮುಂದಾಗಿದೆ. ಎನ್‌ಆರ್‌ಸಿ ಕುರಿತು ಕೇಂದ್ರ ಸರಕಾರದ ಸಚಿವರು ಒಂದು ಹೇಳಿಕೆ ನೀಡಿದರೆ, ಪ್ರಧಾನಿಗಳು ಇನ್ನೊಂದು ರೀತಿ ಹೇಳಿಕೆ ನೀಡುತ್ತಾರೆ ಎಂದು ಅವರು ಹೇಳಿದರು.
ಸದ್ಯ ಕಾಯ್ದೆಯಡಿ ಪೌರತ್ವ ಸಾಬೀತು ಆಗದಿದ್ದಲ್ಲಿ ಆ ವ್ಯಕ್ತಿಯನ್ನು ವಿದೇಶಿ ಎಂದು ಬಂಧನ ಕೇಂದ್ರದಲ್ಲಿ ಇರಿಸಲಾಗುತ್ತದೆ. ಇಲ್ಲಿ ಆ ವ್ಯಕ್ತಿಯ ಖರ್ಚುವೆಚ್ಚ ಎಲ್ಲವನ್ನು ಸರಕಾರವೇ ಭರಿಸಬೇಕಾಗುತ್ತದೆ. ಇದಕ್ಕಾಗಿ ಕೋಟ್ಯಂತರ ರೂ.ಖರ್ಚಾಗುತ್ತದೆ. ಎನ್‌ಆರ್‌ಸಿ ಜಾರಿಯಿಂದ ದೇಶದಲ್ಲಿ ಕೋಟ್ಯಂತರ ಮಂದಿಯನ್ನು ಬಂಧಿಸಬೇಕಾಗುತ್ತದೆ ಇದರಿಂದ 50 ಸಾವಿರ ಕೋಟಿ ರೂ. ವೆಚ್ಚಬರುತ್ತದೆ. ಇದರ ಬದಲು ಅಕ್ರಮ ವಲಸಿಗರ ಕುರಿತು ಸದ್ಯ ಇರುವ ಕಾನೂನನ್ನು ದೇಶದೆಲ್ಲೆಡೆ ಸೂಕ್ತವಾಗಿ ಜಾರಿಗೊಳಿಸಿದರೆ ಸಾಕೆಂದು ಅವರು ತಿಳಿಸಿದರು.
ಬಿಜೆಪಿಯ ಐಟಿ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಸೃಷ್ಟಿಸುವುದಕ್ಕಾಗಿಯೆ ತಾಂತ್ರಿಕ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಂಡಿದೆ. ಸಂಬಳ ಪಡೆಯುವ ಸಾವಿರಾರು ಮಂದಿ ಇದರಲ್ಲಿ ನಿರತರಾಗಿದ್ದಾರೆ. ಈ ಐಟಿ ಸೆಲ್‌ಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶಕರಾಗಿರುವುದು ದುರಂತವಾಗಿದೆ.
-ಪ್ರಶಾಂತ್ ಭೂಷಣ್, ಹಿರಿಯ ನ್ಯಾಯವಾದಿ, ಸುಪ್ರೀಂ ಕೋರ್ಟ್