ಅಗ್ರಸ್ಥಾನಕಾಯ್ದುಕೊಂಡ ಕೊಹ್ಲಿ

Update: 2020-02-01 18:34 GMT

ದುಬೈ, ಫೆ.1: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶನಿವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಉಪ ನಾಯಕ ಅಜಿಂಕ್ಯ ರಹಾನೆ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಕೊಹ್ಲಿ 928 ಅಂಕ ಗಳಿಸಿದ್ದು, ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯದ ‘ರನ್ ಮೆಷಿನ್’ಖ್ಯಾತಿಯ ಸ್ಟೀವ್ ಸ್ಮಿತ್‌ಗಿಂತ 17 ಅಂಕದಿಂದ ಮುಂದಿದ್ದಾರೆ. 791 ಅಂಕ ಗಳಿಸಿರುವ ಚೇತೇಶ್ವರ ಪೂಜಾರ ಆರನೇ ಸ್ಥಾನದಲ್ಲಿದ್ದಾರೆ. ರಹಾನೆ 759 ಅಂಕ ಗಳಿಸಿದ್ದಾರೆ.

ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 794 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8ನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ಮುಹಮ್ಮದ್ ಶಮಿ(9ನೇ ಸ್ಥಾನ)ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಭಾರತದ ಮೂರನೇ ಬೌಲರ್ ಆಗಿದ್ದಾರೆ.

ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ರವೀಂದ್ರ ಜಡೇಜ 406 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 308 ಅಂಕ ಗಳಿಸಿ ನಾಲ್ಕನೇ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ.

 ಇಂಗ್ಲೆಂಡ್‌ನ ಮಾರ್ಕ್ ವುಡ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಜೋಹಾನ್ಸ್‌ಬರ್ಗ್ ನಲ್ಲಿ ನಡೆದಿದ್ದ ಕೊನೆಯ ಟೆಸ್ಟ್ ಪಂದ್ಯದ ಬಳಿಕ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. 4ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವುಡ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ 19 ಸ್ಥಾನ ಮೇಲಕ್ಕೇರಿ 38ನೇ ಸ್ಥಾನ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಡಿಕಾಕ್ ಬ್ಯಾಟ್ ್ಸಮನ್‌ಗಳ ರ್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದರು. ಡಿಕಾಕ್ ಸಹ ಆಟಗಾರ ಅನ್ರಿಚ್ ನೊರ್ಟ್ಜೆ 20 ಸ್ಥಾನ ಮೇಲಕ್ಕೇರಿ 53ನೇ ಸ್ಥಾನ ತಲುಪಿದ್ದಾರೆ.

ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲ್ಯಾಂಡರ್ ಆಲ್‌ರೌಂಡರ್ ಪಟ್ಟಿಯಲ್ಲಿ ಐದನೇ ಹಾಗೂ ಬೌಲರ್‌ಗಳ ಪೈಕಿ 11ನೇ ರ್ಯಾಂಕ್ ಪಡೆಯುವುದರೊಂದಿಗೆ ವೃತ್ತಿಜೀವನದಿಂದ ನಿವೃತ್ತಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News