ಬಾಯಿಮಾತಿನಲ್ಲಿ ಹೇಳಿದ್ದನ್ನು ಕೇಳದವರು ಬಂದೂಕಿನ ಭಾಷೆ ಅರ್ಥ ಮಾಡಿಕೊಳ್ಳುತ್ತಾರೆ: ಆದಿತ್ಯನಾಥ್

Update: 2020-02-02 10:08 GMT

ಹೊಸದಿಲ್ಲಿ: ಭಿನ್ನಮತೀಯರನ್ನು ಸರಿದಾರಿಗೆ ತರಲು ಬಂದೂಕು ಬಳಸಬೇಕು ಎಂಬ ಅರ್ಥದ ಮಾತುಗಳನ್ನಾಡಿದ ಬಿಜೆಪಿ ಮುಖಂಡರ ಸಾಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸೇರ್ಪಡೆಗೊಂಡಿದ್ದಾರೆ.

ಶಿವಭಕ್ತರ ವಾರ್ಷಿಕ ಕನ್ವರ್ ಯಾತ್ರೆಗೆ ಬೆದರಿಕೆ ಹಾಕಲಾಗಿದೆ ಎನ್ನುವ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, "ಬಾಯಿಮಾತಿನಲ್ಲಿ ಹೇಳಿದ್ದನ್ನು ಕೇಳದವರು ಖಂಡಿತವಾಗಿಯೂ ಬಂದೂಕಿನ ಭಾಷೆ ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಹೇಳಿದರು.

ರೋಹಿಣಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಆದಿತ್ಯನಾಥ್, ಹಿಂದಿನ ಉತ್ತರ ಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿತ್ತು. 2017ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಈ ನಿರ್ಬಂಧ ಕಿತ್ತುಹಾಕಲಾಯಿತು. ಶಿವಭಕ್ತರಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವಂತೆಯೂ ತಮ್ಮ ಸರ್ಕಾರ ಆದೇಶ ನೀಡಿದ್ದಾಗಿ ತಿಳಿಸಿದರು.

"ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿ ತಮ್ಮ ಹಬ್ಬಗಳನ್ನು ಆಚರಿಸಬಹುದು. ಆದರೆ ಕಾರಣವನ್ನು ಆಲಿಸದೇ ಶಿವಭಕ್ತರತ್ತ ಯಾರಾದರೂ ಗುಂಡು ಹಾರಿಸಿದರೆ ಅಥವಾ ಗಲಭೆಗೆ ಕುಮ್ಮಕ್ಕು ನೀಡಿದರೆ ಅವರು ಖಂಡಿತವಾಗಿಯೂ ಗುಂಡಿನ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ" ಎಂದು ಎಚ್ಚರಿಸಿದರು.

ಗಾಝಿಯಾಬಾದ್‍ನಿಂದ ಹರಿದ್ವಾರವರೆಗಿನ ಕನ್ವರಿಯಾ ಯಾತ್ರೆಯನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ ಎಂದು ಆದಿತ್ಯನಾಥ್ ಹೇಳಿದರು. ಶನಿವಾರ ಕಾರವಲ್ ನಗರ, ಆದರ್ಶ ನಗರ, ನರೇಲಾ ಮತ್ತು ರೋಹಿಣಿ ಹೀಗೆ ನಾಲ್ಕು ಕಡೆ ರ್ಯಾಲಿ ನಡೆಸಿದ ಅವರು, ಭಾಷಣದಲ್ಲಿ ಬಿರಿಯಾನಿ, ಗುಂಡು ಹಾಗೂ ಪಾಕಿಸ್ತಾನ ವಿಷಯಗಳನ್ನು ಉಲ್ಲೇಖಿಸಿದರು ಎಂದು ಎನ್‍ಡಿಟಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News