ಅನುತ್ತೀರ್ಣರಾದವರಿಗೆ ಮತ್ತೊಂದು ಅವಕಾಶ ನೀಡಲು ಬೆಂಗಳೂರು ವಿವಿ ತೀರ್ಮಾನ

Update: 2020-02-03 12:51 GMT

ಬೆಂಗಳೂರು, ಫೆ.3: 2004 ರಿಂದ 2019 ರೊಳಗೆ ಪದವಿಯಲ್ಲಿ ಬಾಕಿ ಉಳಿದುಕೊಂಡು, ಪರೀಕ್ಷೆ ಬರೆಯಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಮುಂದಾಗಿದೆ.

2004 ರಿಂದ 2019 ರವರೆಗೆ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಪದವಿ ಕೋರ್ಸ್‌ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇನ್ನೊಂದು ಅವಕಾಶ ನೀಡಲು ವಿವಿ ಮುಂದಾಗಿದೆ. ಈ ಸಂಬಂಧ ಶೀಘ್ರದಲ್ಲಿಯೇ ಬೆಂಗಳೂರು ವಿವಿ ಪ್ರಕಟನೆ ಹೊರಡಿಸಲಿದೆ.

ಬೆಂಗಳೂರು ವಿವಿ ಮೂರು ವಿವಿಗಳಾಗಿ ವಿಭಜನೆಯಾಗುವ ಮೊದಲು ತನ್ನ ವ್ಯಾಪ್ತಿಯಲ್ಲಿದ್ದ 700 ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೂಲಕ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಅನ್ವಯಿಸುವುದಿಲ್ಲ.

ಯುವಿಸಿಇ ಸಿಟಿ ಮತ್ತು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಅಷ್ಟೇ ಅನ್ವಯಿಸಲಿದೆ. ಕಳೆದ 15 ವರ್ಷಗಳಲ್ಲಿ ವಿವಿ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದರಲ್ಲಿ ಬಹುತೇಕರು ಉತ್ತೀರ್ಣಗೊಂಡಿದ್ದರೆ, ಕೆಲವರು ಸಿಗುವ ಐದು ಅವಕಾಶಗಳನ್ನು ಪಡೆದರೂ ಉತ್ತೀರ್ಣರಾಗಿರಲಿಲ್ಲ.

ಪರೀಕ್ಷೆಗಳಲ್ಲಿ ಉತ್ತೀರ್ಣರಾಗದೇ ಜೀವನದಲ್ಲಿ ಜಿಗುಪ್ಸೆಗೊಳಗಾಗಿ ಮುಂದಿನ ಉನ್ನತ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೂ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಲ್ಲಿ ಕೆಲವರು ಮತ್ತೊಂದು ಬಾರಿ ಪರೀಕ್ಷೆ ಪಡೆಯಲು ಅವಕಾಶ ನೀಡುವಂತೆ ವಿವಿಗೆ ಮನವಿ ಮಾಡಿ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇತ್ತೀಚಿಗೆ ನಡೆದ ಬೆಂಗಳೂರು ವಿವಿಯ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಪರೀಕ್ಷೆ ಬರೆಯಲು ಅವಕಾಶ ನೀಡಲು ಪರಿಷತ್ತಿನ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಅನುತ್ತೀರ್ಣರಾದ ವಿದ್ಯಾರ್ಥಿಗಳ ಬದುಕಿಗೆ ಆಶಾಕಿರಣವಾಗಿ ಅವಕಾಶ ನೀಡಲು ಮುಂದಾಗಿದ್ದಾರೆ.

ವಿವಿಯು ಈ ಕುರಿತು ಶೀಘ್ರವೇ ಅಧಿಸೂಚನೆ ಹೊರಡಿಸಿದ ಬಳಿಕ, ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಭೇಟಿ ನೀಡಿ ನಿಗದಿತ ಪ್ರವೇಶ ಶುಲ್ಕ ಪಾವತಿಸಬೇಕು. ಅನಂತರ ವಿವಿ ಪರೀಕ್ಷೆ ನಡೆಸಲಿದೆ.

ಪರೀಕ್ಷೆಗೆ ಅವಕಾಶ ಹೊಸದೇನಲ್ಲ: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮತ್ತೊಂದು ಬಾರಿ ಅವಕಾಶ ನೀಡುತ್ತಿರುವುದು ಇದೇನು ಹೊಸದಲ್ಲ. 2014 ರಲ್ಲಿ ವಿವಿಗೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ 1964(ವಿವಿ ಆರಂಭವಾದ ವರ್ಷ)ರಿಂದ 2014 ಅವಧಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾ ನೀಡಲಾಗಿತ್ತು. ಅಲ್ಲದೆ, 2017 ರಲ್ಲಿ ಬಿಇಡಿ ಕೋರ್ಸ್‌ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂದು ವಿವಿಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News