ಬಜೆಟ್ ವಿರುದ್ಧ ಆಕ್ರೋಶ: ‘ಜವಾಬ್ ದೋ ಮಂತ್ರಿ ಜೀ’ ಅಭಿಯಾನ ಆರಂಭಿಸಿದ ಕಾಂಗ್ರೆಸ್

Update: 2020-02-03 14:14 GMT

ಬೆಂಗಳೂರು, ಫೆ.3: ಕೇಂದ್ರ ಸರಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2020-21ನೇ ಸಾಲಿನ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಟ್ವಿಟರ್‌ನಲ್ಲಿ ‘ಜವಾಬ್ ದೋ ಮಂತ್ರಿ ಜೀ’(ಉತ್ತರ ಕೊಡಿ ಮಂತ್ರಿಗಳೆ) ಅಭಿಯಾನವನ್ನು ಆರಂಭಿಸಿದೆ.

ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ವರ್ಷ 1 ಕೋಟಿ ಉದ್ಯೋಗಗಳು ನಷ್ಟವಾಗಿ, ಯುವಜನತೆ ಬೀದಿಗೆ ಬಿದ್ದಿದ್ದಾರೆ. ಮೋದಿಯವರು ಹೋದ ಕಡೆಯೆಲ್ಲಾ ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡುತ್ತಿದ್ದಾರೆ, ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುತ್ತಿಲ್ಲ ಏಕೆ? ಉತ್ತರ ಕೊಡಿ ಮಂತ್ರಿಗಳೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯ ಬಗ್ಗೆ ನರೇಂದ್ರ ಮೋದಿ ಸರಕಾರಕ್ಕೆ ಸ್ಪಷ್ಟನೆ ಇಲ್ಲ. ಹೊಸ ತೆರಿಗೆ ದರದಿಂದ ಆಗುವ ಪ್ರಯೋಜನಗಳ ಬಗ್ಗೆ ಸಚಿವಾಲಯಕ್ಕೂ ಇನ್ನು ಲೆಕ್ಕ ಸಿಕ್ಕಿಲ್ಲ. ಹಾಗಿದ್ದರೂ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೊಂದಲದಲ್ಲೇ ಬಜೆಟ್ ಮಂಡಿಸಿದ್ದು ಏಕೆ? ಜನರಿಗೆ ಗೊಂದಲ ಮೂಡಿಸುತ್ತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಆಡಳಿತಾತ್ಮಕ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಕುಸಿದಿರುವ ಆರ್ಥಿಕತೆಯ ಸುಧಾರಣೆಗೆ, ಉದ್ಯೋಗ ಸೃಷ್ಟಿಗೆ, ನಿರುದ್ಯೋಗ ನಿಯಂತ್ರಣಕ್ಕೆ ಯಾವುದೇ ಕಾರ್ಯಕ್ರಮಗಳಿಲ್ಲ ಏಕೆ? ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಆಶಯದಲ್ಲಿದ್ದ ಬಡ-ಮಧ್ಯಮ ವರ್ಗಕ್ಕೆ ನೀವು ಕೊಟ್ಟ ಕೊಡುಗೆ ಏನು? ಎಂದು ಕಾಂಗ್ರೆಸ್ ಕೇಳಿದೆ.

ಗ್ರಾಮೀಣ ಆರ್ಥಿಕತೆ ಗಣನೀಯವಾಗಿ ಕುಸಿಯುತ್ತಿದ್ದರೂ ಉದ್ಯೋಗ ಖಾತರಿ ಯೋಜನೆಯ ಬಜೆಟ್ ಅನ್ನು 13% ಕಡಿತಗೊಳಿಸಲಾಗಿದೆ. 2019-20ರಲ್ಲಿ 71,002 ಕೋಟಿ ರೂ.ಇದ್ದ ಉದ್ಯೋಗ ಖಾತರಿ ಯೋಜನೆ ಬಜೆಟ್, 2020-21ನೇ ಸಾಲಿನಲ್ಲಿ 61,500 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News