ರಾಜ್ಯ ರಾಜಧಾನಿಯಲ್ಲಿ ಬಿಸಿಲಿನ ಝಳಕ್ಕೆ ಜನತೆ ತತ್ತರ

Update: 2020-02-03 14:48 GMT
ಫೈಲ್ ಚಿತ್ರ

ಬೆಂಗಳೂರು, ಫೆ.3: ರಾಜಧಾನಿಯಲ್ಲಿ ಚಳಿಗಾಲದಲ್ಲಿಯೇ ಅತ್ಯದಿಕ ಬಿಸಿಲು ದಾಖಲಾಗುತ್ತಿದ್ದು, ಬೇಸಿಗೆ ಕಾಲದಂತೆಯೇ ಭಾಸವಾಗುತ್ತಿದೆ. ಬಿಸಿಲಿನ ಝಳಕ್ಕೆ ನಾಗರೀಕರು ಪರಿತಪಿಸುವಂತಾಗಿದೆ.

ಎಲ್ಲರೂ ಮೆಚ್ಚುತ್ತಿದ್ದ ಬೆಂಗಳೂರಿನ ಹವಾಮಾನ ಈಗ ಚಳಿಗಾಲದಲ್ಲಿ ಬೇಸಿಗೆಯ ಅನುಭವ ಕೊಡುವಂತಹ ಸುಡು ಬಿಸಿಲು ಇದೆ. ಉಷ್ಣಾಂಶ ದಾಖಲೆಯನ್ನು ಬರೆದಿದೆ. ಬೆಂಗಳೂರಿನಲ್ಲಿ ಚಳಿ ಮಾಯವಾಗಿದೆ. 11 ಗಂಟೆ ಬಳಿಕ ಬಿಸಿಲಿನ ಝಳ ಜೋರಾಗಿದೆ. ಜನರು ಕಬ್ಬಿನ ಹಾಲು, ಎಳನೀರು, ಕಲ್ಲಂಗಡಿ ಅಂಗಡಿಗಳನ್ನು ಹುಡುಕುತ್ತಿದ್ದಾರೆ. ನಗರದಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದೆ. 

ಹವಾಮಾನ ವೈಪರೀತ್ಯ

ಭಾರತೀಯ ಹವಾಮಾನ ಇಲಾಖೆಯೇ ನೀಡುವ ಮಾಹಿತಿಯಂತೆ ಜನವರಿ ತಿಂಗಳಿನಲ್ಲಿ 33.4 ಡಿಗ್ರಿ ತಾಪಮಾನ ದಾಖಲಾಗಿದ್ದು ಇದೇ ಮೊದಲು. 2000 ರಲ್ಲಿ ಜನವರಿ 24 ರಂದು 32.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಚಳಿಗಾಲದ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಮತ್ತು ಮುಂಜಾನೆ ಭಾರಿ ಚಳಿ ಇರುತ್ತಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ರಾತ್ರಿ ಫ್ಯಾನ್ ಇಲ್ಲದೇ ನಿದ್ದೆ ಬರುತ್ತಿಲ್ಲ. ಮುಂಜಾನೆ ವಾಕಿಂಗ್ ಹೋಗಲು ಹೊರಟರೆ ಮಂಕಿ ಕ್ಯಾಪ್ ಮತ್ತು ಜರ್ಕಿನ್ ಅಗತ್ಯವೇ ಇಲ್ಲದಂತಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರು ನಗರದ ಉಷ್ಣಾಂಶ 35 ಡಿಗ್ರಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಫೆಬ್ರವರಿಯಲ್ಲಿಯೂ ಉದ್ಯಾನ ನಗರಿಯ ಜನರು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News