ಧರಣಿಗೆ ಅನುಮತಿ ನಿರಾಕರಿಸಲು ಭೂಮಿ ಇವರ ಅಪ್ಪನ ಆಸ್ತಿಯೇ?: ಕುಮಾರಸ್ವಾಮಿ ಕೆಂಡ
Update: 2020-02-03 20:42 IST
ಬೆಂಗಳೂರು, ಫೆ.3: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿಗೆ ಅನುಮತಿ ನಿರಾಕರಿಸಲು ಭೂಮಿ ಇವರ ಅಪ್ಪನ ಆಸ್ತಿಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಿಸಿಯೂಟ ಕಾರ್ಯಕರ್ತೆಯರು ಮುಂದಾದರೂ, ಪೊಲೀಸರು ಅನುಮತಿ ನೀಡಿಲ್ಲ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ನಡುವಳಿಕೆ ಸರಿಯಲ್ಲ. ಪ್ರತಿಭಟನೆಯ ಭೂಮಿ ಇವರ ಅಪ್ಪನ ಆಸ್ತಿಯಂತೆ ಕೆಲ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದರು.
ಪ್ರತಿಭಟನೆಗೆ 10 ಲಕ್ಷ ರೂ.ಬಾಂಡ್ ಸೇರಿದಂತೆ ಹೊಸ ಹೊಸ ವ್ಯವಸ್ಥೆ ಜಾರಿಗೊಳಿಸಲು ಕೆಲವರು ಮುಂದಾಗಿದ್ದಾರೆ. ಇದರಿಂದ ಸರಕಾರಕ್ಕೆ ಪೆಟ್ಟು ಬೀಳಲಿದ್ದು, ಗೃಹ ಸಚಿವರು ಕೆಲ ಅಧಿಕಾರಿಗಳ ವರ್ತನೆಗಳನ್ನು ಸರಿಪಡಿಸಬೇಕು ಎಂದು ಕುಮಾರಸ್ವಾಮಿ ನುಡಿದರು.