ಸಿದ್ದಗಂಗಾ ಮಠದ ವಿದ್ಯಾರ್ಥಿಗಳ ಅನ್ನ ಕಿತ್ತುಕೊಂಡ ಸರಕಾರ: ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

Update: 2020-02-04 13:51 GMT

ಬೆಂಗಳೂರು, ಫೆ.4: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿದ್ಧಗಂಗಾ ಮಠ ಸೇರಿದಂತೆ ನೂರಾರು ಸಂಘ-ಸಂಸ್ಥೆಗಳಿಗೆ ಸರಕಾರದಿಂದ ನೀಡಲಾಗುತ್ತಿದ್ದ ಅನ್ನದಾಸೋಹ ಯೋಜನೆಯಡಿ ಆಹಾರ ಧಾನ್ಯಗಳನ್ನು ರದ್ದುಪಡಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಾದ ಯು.ಟಿ.ಖಾದರ್, ವಿ.ಎಸ್.ಉಗ್ರಪ್ಪ ದಾಖಲೆ ಬಿಡುಗಡೆ ಮಾಡಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದಗಂಗಾ ಮಠದಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಠಕ್ಕೆ 73,590 ಕೆಜಿ ಅಕ್ಕಿ, 36,794 ಕೆಜಿ ಗೋಧಿ ಅನ್ನು ಅನ್ನದಾಸೋಹ ಯೋಜನೆಯಡಿ ಹಿಂದಿನ ರಾಜ್ಯ ಸರಕಾರ ನೀಡುತ್ತಿತ್ತು. ಆದರೆ, ಇದೀಗ ಬಿಜೆಪಿ ಸರಕಾರ ಕಳೆದ ಎರಡು ತಿಂಗಳ ಹಿಂದೆ ಈ ಯೋಜನೆ ರದ್ದು ಮಾಡಿದೆ ಎಂದು ದೂರಿದರು.

ಅನ್ನದಾಸೋಹ ಯೋಜನೆ ರದ್ದು ಮಾಡಿದರೆ ವೃದ್ಧರು, ಅಂಗವಿಕಲರು ಏನಾಗಬೇಕು. ಈ ಯೋಜನೆಯನ್ನೇ ನಂಬಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ ಎಂದ ಅವರು, ಸಂಸ್ಥೆಗಳಿಗೆ ಆಹಾರ ಧಾನ್ಯ ನೀಡುವ ಈ ಯೋಜನೆ ನಿಲ್ಲಿಸಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.

ಈ ಹಿಂದೆ, ಬಂಟ್ವಾಳದ ಶ್ರೀರಾಮ ಶಾಲೆಗೆ ನೀಡಲಾಗುತ್ತಿದ್ದ ಅಕ್ಕಿ ನಿಲ್ಲಿಸಿದರು ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದರು. ಈಗ ಅನ್ನದಾಸೋಹ ಯೋಜನೆಯನ್ನು ಸಂಪೂರ್ಣ ರದ್ದು ಮಾಡಿದ್ದು, ಇದಕ್ಕೆ ಅವರ ಬಳಿ ಉತ್ತರ ಇದೆಯೇ ಎಂದು ಪ್ರಶ್ನಿಸಿದರು.

ಸುಮಾರು 464 ಸಂಸ್ಥೆಗಳು, 41 ಸಾವಿರ ಫಲಾನುಭವಿಗಳಿಗೆ ಅನ್ನ ದಾಸೋಹದಡಿ ವಿತರಿಸುವ ಅಕ್ಕಿ, ಗೋಧಿ ನಿಲ್ಲಿಸಲಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಈ ಯೋಜನೆಯನ್ನು ರದ್ದು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಕೂಡಲೇ ಅನ್ನ ದಾಸೋಹ ಯೋಜನೆ ಶುರು ಮಾಡಬೇಕು, ಇಲ್ಲದಿದ್ದರೆ ಕಾಂಗ್ರೆಸ್ ಹೋರಾಟಕ್ಕೆ ಸಜ್ಜಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ

ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಇದೀಗ ಅಸಂತೋಷಗೊಂಡಿದ್ದು, ಶೇಕಡ 68ರಷ್ಟು ಜನ ಹೊರಗಿನಿಂದ ಬಂದವರು ವಾಲ್ಮೀಕಿ ಸಮುದಾಯ ಎಂದು ಅಪಮಾನ ಮಾಡಿದ್ದಾರೆ. ಈ ಬಗ್ಗೆ ಸಚಿವ ಶ್ರೀರಾಮುಲು ಏಕೆ ಮಾತನಾಡುತ್ತಿಲ್ಲ. ಅಲ್ಲದೆ, ವಿವಾದಿತ ಹೇಳಿಕೆ ನೀಡುವ ಮನುವಾದಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಬೇಕು.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News