ಸ್ಕೂಟರ್‌ಗೆ ಲಾರಿ ಢಿಕ್ಕಿ: ಮುಖ್ಯ ಪೇದೆ ಮೃತ್ಯು
ಬೆಂಗಳೂರು, ಫೆ.4: ಶರವೇಗವಾಗಿ ಸಾಗಿ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮುಖ್ಯ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಯಶವಂತಪುರ ಸಂಚಾರ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭಕ್ತರಾಮ್(44) ಮೃತಪಟ್ಟಿದ್ದು, ಇಲ್ಲಿನ ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ಠಾಣೆಯಿಂದ ಕೆಲಸ ಮುಗಿಸಿಕೊಂಡು ಭಕ್ತರಾಮ್ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಎಂಇಎಸ್ ರಿಂಗ್ ರಸ್ತೆಯಲ್ಲಿ ಜಾಲಹಳ್ಳಿ ರೈಲ್ವೆ ಕ್ರಾಸಿಂಗ್ ಮಾರ್ಗವಾಗಿ ಬಂದ ಲಾರಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೇದೆಯ ಕಣ್ಣುಗಳ ದಾನ
ನಾರಾಯಣ ನೇತ್ರಾಲಯದ ಡಾ. ರಾಜ್‌ಕುಮಾರ್ ಕಣ್ಣಿನ ಬ್ಯಾಂಕ್‌ಗೆ ಪೇದೆ ಭಕ್ತ ರಾಮ್ ಅವರ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ಸದಸ್ಯ ಕಿರಣ್ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.