×
Ad

ಬೆಂಗಳೂರು: ತಾಯಿಯನ್ನೇ ಹತ್ಯೆಗೈದ ಆರೋಪ; ಅಂಡಮಾನ್‌ನಲ್ಲಿ ಪ್ರಿಯಕರನೊಂದಿಗೆ ಯುವತಿ ಬಂಧನ

Update: 2020-02-05 19:53 IST

ಬೆಂಗಳೂರು, ಫೆ.5: ತಾಯಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಪ್ರಿಯಕರನೊಂದಿಗೆ ಪುತ್ರಿಯನ್ನು ಅಂಡಮಾನ್ ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇಯರ್ ಸ್ಥಳದಲ್ಲಿ ಇಲ್ಲಿನ ಕೆ.ಆರ್‌.ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಕೆಆರ್‌ಪುರಂ ಅಕ್ಷಯ ನಗರದ ಅಮೃತಾ ಚಂದ್ರಶೇಖರ್, ಈಕೆಯ ಪ್ರಿಯಕರ ಶ್ರೀಧರ್ ರಾವ್ ಬಂಧಿತ ಆರೋಪಿಗಳೆಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಏನಿದು ಪ್ರಕರಣ?: ದಾವಣಗೆರೆ ಜಿಲ್ಲೆಯವರಾದ ನಿರ್ಮಲಾ ಅವರು ಮಗ ಹರೀಶ್ ಮತ್ತು ಮಗಳು ಅಮೃತಾ ಜತೆ ಅಕ್ಷಯನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅಮೃತಾ ಮಾರತ್ತಹಳ್ಳಿಯಲ್ಲಿರುವ ಸಿಂಫೋನಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಮೃತಾಗೆ ಇತ್ತೀಚೆಗೆ ಹೈದರಾಬಾದಿನಲ್ಲಿರುವ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗ ಸಿಕ್ಕಿತ್ತು.

ಫೆ.2ರಂದು ತಾಯಿ ಮತ್ತು ಸಹೋದರನನ್ನು ಹೈದರಾಬಾದ್ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಅಮೃತಾ ನಿರ್ಧರಿಸಿದ್ದಳು. ಅದರಂತೆ ಇಡೀ ಕುಟುಂಬ ಅಂದು ನಸುಕಿನಲ್ಲಿ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಬೇಕಿತ್ತು. ಹಿಂದಿನ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ನಸುಕಿನ ನಾಲ್ಕು ಗಂಟೆಗೆ ಕೊಠಡಿಯಲ್ಲಿದ್ದ ಬೀರುವಿನ ಶಬ್ದವಾಗಿದ್ದು ಎಚ್ಚರಗೊಂಡು ನೋಡಿದಾಗ ಬೀರು ತೆಗೆದು ಅಮೃತಾ ಹುಡುಕಾಡುತ್ತಿದ್ದಳು. ಇದನ್ನು ಪ್ರಶ್ನಿಸಿದ ಹರೀಶ್ ಮೇಲೆ ಹಲ್ಲೆ ನಡೆಸಿ, ಕೈಯಲ್ಲಿದ್ದ ಚಾಕುವಿನಿಂದ ಕತ್ತಿನ ಬಲಭಾಗಕ್ಕೆ ಚುಚ್ಚಿದ್ದಾಳೆ. ಅಲ್ಲದೇ, ಇದೇ ಚಾಕುವಿನಿಂದ ಚುಚ್ಚಿ ಅಮ್ಮನನ್ನು ಕೊಲೆಗೈದಿದ್ದೇನೆ ಎಂದು ಅಮೃತಾ ಉತ್ತರಿಸಿದ್ದಾಳೆ ಎಂದು ಘಟನೆ ಕುರಿತು ಪೊಲೀಸ್ ದೂರಿನಲ್ಲಿ ಹರೀಶ್ ಉಲ್ಲೇಖಿಸಿದ್ದಾನೆ.

ಜೊತೆಗೆ, 'ನಾನು ಸುಮಾರು 15 ಲಕ್ಷದಷ್ಟು ಸಾಲ ಮಾಡಿದ್ದೇನೆ. ಸಾಲಗಾರರು ಮನೆಯ ಬಳಿ ಬರುತ್ತೇನೆಂದು ಹೇಳಿದ್ದಾರೆ. ಸಾಲಗಾರರು ಬಂದರೆ ಮರ್ಯಾದೆ ಹೋಗಬಾರದು. ಅದಕ್ಕೆ ನಿಮ್ಮಿಬ್ಬರನ್ನು ಕೊಲೆ ಮಾಡಿ ಹೋಗುತ್ತೇನೆ ಎಂದು ಅಮೃತಾ ಹೇಳಿದ್ದಾಳೆ. ನನ್ನ ಕುತ್ತಿಗೆಯ ಭಾಗದಲ್ಲಿ ರಕ್ತ ಬರುತ್ತಿದ್ದರಿಂದ ನಾನು ನಿಶಕ್ತಗೊಂಡೆ. ಆಕೆಯನ್ನು ಹಿಡಿಯಲು ಹೋದಾಗ ನನ್ನನ್ನು ತಳ್ಳಿ ಹೊರಗೆ ಓಡಿ ಹೋದಳು' ಎಂದು ಹರೀಶ್ ದೂರಿನಲ್ಲಿ ತಿಳಿಸಿದ್ದಾರೆ.

ಅಮೃತಾ ಕೃತ್ಯವೆಸಗಿ ಶ್ರೀಧರ್ ರಾವ್ ಜತೆ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕೆಆರ್‌ಪುರಂ ಠಾಣಾ ಪೊಲೀಸರು, ಅಂಡಮಾನ್ ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇಯರ್ ಸ್ಥಳದಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯವು ಹಣಕಾಸಿನ ವಿಚಾರವಾಗಿ ನಡೆದಿದೆ ಎಂದು ಮೊದಲಿಗೆ ನಂಬಲಾಗಿತ್ತಾದರೂ ನಂತರ ಶೀಧರ್‌ ರಾವ್‌ನನ್ನು ಪ್ರೀತಿಸಿ ವಿವಾಹವಾಗಲು ಅಡ್ಡಿಪಡಿಸಿದ್ದಕ್ಕಾಗಿ ಈ ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News