ಪಾನಿಪೂರಿ ಮಾರಾಟದಿಂದ ಅಂಡರ್-19 ವಿಶ್ವಕಪ್ ತನಕ ‘ಯಶಸ್ವಿ’ ಯಶೋಗಾಥೆ

Update: 2020-02-05 17:16 GMT
ಯಶಸ್ವಿ ಜೈಸ್ವಾಲ್‌

ಮುಂಬೈ, ಫೆ.5: ಮುಂಬೈನ ಆಝಾದ್ ಮೈದಾನದಲ್ಲಿ ಮುಸ್ಲಿಂ ಯುನೈಟೆಡ್ ಕ್ಲಬ್‌ನ ಡೇರೆಯಲ್ಲಿ ಮೂರು ವರ್ಷ ನೆಲೆಸಿದ್ದ ಯಶಸ್ವಿ ಜೈಸ್ವಾಲ್‌ಗೆ ಕಡು ಬಡತನದಲ್ಲೂ ಭಾರತದ ಪರ ಕ್ರಿಕೆಟ್ ಆಡಬೇಕೆಂಬ ಕನಸು 11ನೇ ವಯಸ್ಸಿನಲ್ಲಿ ಚಿಗುರೊಡೆದಿತ್ತು. ಇದೀಗ ಆರು ವರ್ಷಗಳ ಬಳಿಕ ತನ್ನ 17ನೇ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದ ಅಂಡರ್-19 ವಿಶ್ವಕಪ್ ತಂಡದಲ್ಲಿ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಆಗಿ ರೂಪುಗೊಂಡಿರುವ ಜೈಸ್ವಾಲ್ ಮಂಗಳವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೆಮಿ ಫೈನಲ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಭಾರತ ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದರು.

ರಸ್ತೆಬದಿ ಪಾನಿಪೂರಿ ಮಾರುತ್ತಾ, ಹಸಿದ ಹೊಟ್ಟೆಯಲ್ಲಿ ಎಷ್ಟೋ ರಾತ್ರಿಯನ್ನು ಆಝಾದ್ ಮೈದಾನದ ಡೇರೆಯಲ್ಲಿ ಕಳೆದಿದ್ದ ಯಶಸ್ವಿ ಜೈಸ್ವಾಲ್ ಅವರ ವೃತ್ತಿಜೀವನ ಎಲ್ಲರಿಗೂ ಮಾದರಿ.

ಉತ್ತರ ಪ್ರದೇಶದ ಬಾಧೋಹಿಯ ಸಣ್ಣ ವ್ಯಾಪಾರಿಯೊಬ್ಬರ ಇಬ್ಬರು ಪುತ್ರರಲ್ಲಿ ಒಬ್ಬನಾಗಿರುವ ಜೈಸ್ವಾಲ್ ಕ್ರಿಕೆಟಿಗನಾಗುವ ಕನಸು ಹೊತ್ತು ಮುಂಬೈಗೆ ಬಂದಿದ್ದರು. ಕುಟುಂಬವನ್ನು ನಿಭಾಯಿಸಲು ಕಷ್ಟಪಡುತ್ತಿದ್ದ ಜೈಸ್ವಾಲ್ ತಂದೆ ತನ್ನ ಮಗನ ಬಯಕೆಗೆ ಅಡ್ಡಿಯಾಗಲಿಲ್ಲ. ಜೈಸ್ವಾಲ್ ಅವರ ಚಿಕ್ಕಪ್ಪ ಸಂತೋಷ್ ಮುಂಬೈನ ವರ್ಲಿಯಲ್ಲಿದ್ದರು. ಆದರೆ, ಸಂತೋಷ್ ಮನೆಯಲ್ಲಿ ನೆಲೆಸಲು ಸ್ಥಳವಿರಲಿಲ್ಲ. ಸಂತೋಷ್ ಅವರು ಮುಸ್ಲಿಂ ಯುನೈಟೆಡ್ ಕ್ಲಬ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಹೀಗಾಗಿ ಜೈಸ್ವಾಲ್‌ಗೆ ಅಲ್ಲಿ ನೆಲಸಲು ಅನುಕೂಲ ಮಾಡಿಕೊಟ್ಟರು.

‘‘ಮೂರು ವರ್ಷಗಳ ಕಾಲ ಇದೇ ಡೇರೆ ಜೈಸ್ವಾಲ್‌ಗೆ ಮನೆಯಾಗಿತ್ತು. ತನ್ನ ನೋವನ್ನು ಮನೆಗೆ ತಿಳಿಸದೆ ತನ್ನ ತಂದೆಗೆ ಆಗಾಗ ಹಣವನ್ನು ಕಳುಹಿಸಿಕೊಡುತ್ತಿದ್ದರು. ರಾಮಲೀಲಾ ಉತ್ಸವ ನಡೆಯುವಾಗ ಆಝಾದ್ ಮೈದಾನದಲ್ಲಿ ಪಾನಿ ಪೂರಿ ಮಾರಾಟ ಮಾಡಿದ್ದಲ್ಲದೆ, ಹಣ್ಣು ಮಾರಾಟ ಮಾಡಲು ನೆರವಾಗುತ್ತಿದ್ದರು. ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿ ಮೈದಾನದ ಸಿಬ್ಬಂದಿ ತಂಗುವ ಟೆಂಟ್‌ನಲ್ಲಿ ಮಲಗಿ ಕಾಲ ಕಳೆದಿದ್ದರು.

‘‘ರಾಮಲೀಲಾ ಉತ್ಸವದ ಸಮಯದಲ್ಲಿ ನಾನು ಸಾಕಷ್ಟು ಹಣ ಗಳಿಸುತ್ತಿದ್ದೆ. ನನ್ನ ಸಹ ಆಟಗಾರರು ಪಾನಿಪೂರಿ ಅಂಗಡಿ ಬಳಿ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ನನ್ನ ವಯಸ್ಸಿನ ಬಾಲಕರು ಮನೆಯಿಂದ ಹೆತ್ತವರು ಕಳಿಸಿಕೊಟ್ಟ ಊಟ-ತಿಂಡಿ ತಿನ್ನುವುದನ್ನು ನೋಡುತ್ತಿದ್ದೆ. ನಾನು ಸ್ವತಃ ಅಡುಗೆ ಮಾಡಿ, ಉಣ್ಣಬೇಕಾಗಿತ್ತು. ನನಗೆ ಬೆಳಗ್ಗೆಯ ತಿಂಡಿ ಇರಲಿಲ್ಲ. ತಿಂಡಿಗೆ ಹಣ ನೀಡುವಂತೆ ಎಲ್ಲರಲ್ಲೂ ಕೇಳುತ್ತಿದ್ದೆ. ಮಧ್ಯಾಹ್ನ ಹಾಗೂ ರಾತ್ರಿಯ ಊಟ ಟೆಂಟ್‌ನಲ್ಲಿ ನಡೆಯುತ್ತಿತ್ತು. ನಾನು ರೊಟ್ಟಿ ತಿನ್ನುತ್ತಿದ್ದೆ. ಪ್ರತಿದಿನ ರಾತ್ರಿ ಕ್ಯಾಂಡಲ್ ಬೆಳಕಿನಲ್ಲಿ ಊಟ ಮಾಡುತ್ತಿದ್ದೆ. ನಮಗೆ ವಿದ್ಯುತ್ತಿನ ವ್ಯವಸ್ಥೆ ಇರಲಿಲ್ಲ’’ ಎಂದು ಹಳೆಯ ನೆನಪನ್ನು ಜೈಸ್ವಾಲ್ ಮೆಲುಕು ಹಾಕಿದರು.

ಜೈಸ್ವಾಲ್ ಈಗ ಮುಂಬೈನ ಕದಮ್‌ವಾಡಿಯಲ್ಲಿ ಸಣ್ಣ ಚಾಳ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ.

‘‘ನೀವು ಟೆಂಟ್‌ನಲ್ಲಿ ಕಳೆದಿದ್ದೀರಾ? ನೀವು ಅಲ್ಲಿ ಕಳೆಯಲು ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ಪ್ಲಾಸ್ಟಿಕ್‌ನಿಂದ ಸಹಿಸಲಾರದಷ್ಟು ಸೆಕೆ ಇರುತ್ತದೆ. ಕೆಲವೊಮ್ಮೆ ನಾವು ಮೈದಾನದಲ್ಲಿ ಮಲಗುತ್ತಿದ್ದೆವು. ಒಮ್ಮೆ ಕೀಟವೊಂದು ನನ್ನ ಕಣ್ಣಿಗೆ ಕಚ್ಚಿತ್ತು. ಆಗ ಕಣ್ಣು ಊದಿಕೊಂಡಿತ್ತು. ಆ ನಂತರ ಎಷ್ಟೇ ಸೆಕೆ ಇದ್ದರೂ ಟೆಂಟ್ ಒಳಗೆ ಮಲಗುತ್ತಿದ್ದೆ’’ ಎಂದು ಜೈಸ್ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News