ನ್ಯೂಝಿಲ್ಯಾಂಡ್ ಹಾಕಿ ಪ್ರವಾಸ: ಭಾರತ ಮಹಿಳಾ ತಂಡಕ್ಕೆ ಗೆಲುವು

Update: 2020-02-05 19:06 GMT

ಆಕ್ಲಂಡ್, ಫೆ.5: ಸ್ಟ್ರೈಕರ್ ನವನೀತ್ ಕೌರ್ ಗಳಿಸಿದ ಅವಳಿ ಗೋಲು ನೆರವಿನಿಂದ ಭಾರತೀಯ ಮಹಿಳಾ ಹಾಕಿ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಕೊನೆಯ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ ಕಿವೀಸ್ ಹಾಕಿ ಪ್ರವಾಸದಲ್ಲಿ ಆಡಿರುವ ಐದು ಪಂದ್ಯಗಳ ಸರಣಿಯನ್ನು ಗೆಲುವಿನೊಂದಿಗೆ ಕೊನೆಗೊಳಿಸಿತು.

ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ನವನೀತ್ 45ನೇ ಹಾಗೂ 58ನೇ ನಿಮಿಷದಲ್ಲಿ ಗೋಲು ಗಳಿಸಿದರು. ಶರ್ಮಿಳಾ 54ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ನ್ಯೂಝಿಲ್ಯಾಂಡ್ ಪ್ರವಾಸವನ್ನು ಉಜ್ವಲವಾಗಿ ಕೊನೆಗೊಳಿಸಲು ನೆರವಾದರು.

ಭಾರತ ತಂಡ ನ್ಯೂಝಿಲ್ಯಾಂಡ್ ಡೆವಲಪ್‌ಮೆಂಟ್ ತಂಡವನ್ನು 4-0 ಅಂತರದಿಂದ ಮಣಿಸುವುದರೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಿತು. ಆ ಬಳಿಕ ಆತಿಥೇಯ ತಂಡದ ವಿರುದ್ಧ ನಡೆದ 2 ಪಂದ್ಯಗಳಲ್ಲಿ 1-2 ಹಾಗೂ 0-1 ಗೋಲುಗಳ ಅಂತರದಿಂದ ಸೋಲುಂಡಿತ್ತು.

ಗ್ರೇಟ್ ಬ್ರಿಟನ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ನಾಯಕಿ ರಾಣಿ ಗಳಿಸಿದ ಏಕೈಕ ಗೋಲು ನೆರವಿನಿಂದ ಭಾರತ 1-0 ಅಂತರದಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News