ಕನ್ನಡದ ಹೆಗಲ ಮೇಲೆ ಸಂಸ್ಕೃತದ ಹೆಣ ಹೊರಿಸಲು ಹೊರಟವರು

Update: 2020-02-07 05:17 GMT

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಸಾಹಿತ್ಯ ಸಮ್ಮೇಳನಗಳು ನಿಧಾನಕ್ಕೆ ‘ವೈದಿಕ ಸಮ್ಮೇಳನ’ವಾಗಿ ರೂಪಾಂತರವಾಗುತ್ತಿರುವ ಆರೋಪ ಇಂದು ನಿನ್ನೆಯದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಶ್ರಾದ್ಧ ಸಮ್ಮೇಳನವಾಗಿ ಪರಿವರ್ತನೆಗೊಳುತ್ತಿದೆ. ವರ್ತಮಾನದೊಂದಿಗೆ ಸರ್ವ ಸಂಬಂಧಗಳನ್ನು ಕಳೆದುಕೊಂಡು ರನ್ನ, ಪೊನ್ನ, ಪಂಪ ಮೊದಲಾದ ದಿವಂಗತರ ಹೆಸರುಗಳನ್ನು ಮುಂದು ಮಾಡಿ ‘ತೌಡು ಕುಟ್ಟು’ವ ಈ ಸಮ್ಮೇಳನ  ಒಂದಿಷ್ಟು ಜೀವಂತಿಕೆಯನ್ನು ಉಳಿಸಿಕೊಂಡಿದ್ದರೆ, ಅಲ್ಲಿನ ಭೋಜನ ವ್ಯವಸ್ಥೆ ಮತ್ತು ಪುಸ್ತಕ ವ್ಯಾಪಾರಗಳ ಕಾರಣದಿಂದ. ಇದಕ್ಕೆ ಹೊರತಾಗಿ ವೇದಿಕೆಯಲ್ಲಿ ಕೂತ ಮನುಷ್ಯರು ಮಂಗಳ ಗ್ರಹದಿಂದ ಬಂದ ಏಲಿಯನ್‌ಗಳಂತೆ ಈ ನೆಲಕ್ಕೆ ಸಂಬಂಧವೇ ಇಲ್ಲದ, ವರ್ತಮಾನದ ನೋವು ದುಮ್ಮಾನಗಳ ಅರಿವೇ ಇಲ್ಲದವರಂತೆ ಮಾತನಾಡುತ್ತಾರೆ. ಕಲಬುರ್ಗಿಯಲ್ಲಿ ಈ ಬಾರಿಯ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಕನ್ನಡ ಸಮ್ಮೇಳನಕ್ಕೆ ಆಗಮಿಸುವಾಗ ಹೆಗಲ ಮೇಲೆ ಮೃತದೇಹವೊಂದನ್ನು ಹೊತ್ತುಕೊಂಡು ಬಂದು ಅದನ್ನು ಕನ್ನಡದ ಹೆಗಲಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಸಾಯುತ್ತಿರುವ ಕನ್ನಡಕ್ಕೆ ಉಸಿರು ನೀಡುವ ಬಗೆಯನ್ನು ಕಂಡುಕೊಳ್ಳುವ ಬದಲು ಈ ಮೃತದೇಹವನ್ನು ತಟ್ಟಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ.

ಜನಸಾಮಾನ್ಯರ ನಡುವೆ ಬಳಕೆಯೇ ಇಲ್ಲದ, ಕೇವಲ ಅಧ್ಯಯನಕ್ಕಷ್ಟೇ ಸೀಮಿತವಾಗಿರುವ ಸಂಸ್ಕೃತ ಭಾಷೆಯನ್ನು ಒಕ್ಕೂಟ ವ್ಯವಸ್ಥೆಗೆ ಸೇತುವೆಯಾಗಿ ಬಳಕೆ ಮಾಡಬೇಕು ಎನ್ನುವ ಸಮ್ಮೇಳನಾಧ್ಯಕ್ಷ ಎಚ್. ಎಸ್. ವೆಂಕಟೇಶ ಮೂರ್ತಿಯವರ ಕರೆ, ಮೃತದೇಹಕ್ಕೆ ಮಾಡಿದ ಶೃಂಗಾರವೇ ಹೊರತು, ಯಾವ ರೀತಿಯಲ್ಲೂ ಅನುಷ್ಠಾನಕ್ಕೆ ಯೋಗ್ಯವಲ್ಲ. ಒಂದು ಭಾಷೆಯನ್ನು ಜನರ ನಡುವೆ ಬೆಸೆಯುವ ಸಂವಹನ ಭಾಷೆಯಾಗಿ ಆಯ್ಕೆ ಮಾಡುವಾಗ, ಅದು ಜನ ಜೀವನದಲ್ಲಿ ಎಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ ಮತ್ತು ಅದು ಅವರ ಬದುಕನ್ನು ಯಾವ ರೀತಿಯಲ್ಲಿ ರೂಪಿಸುತ್ತಿದೆ ಎನ್ನುವುದು ಮುಖ್ಯವಾಗುತ್ತದೆ ಎಂಬ ಅರಿವೇ ಇಲ್ಲದ ಒಬ್ಬ ಅವಿವೇಕಿಯಷ್ಟೇ ಇಂತಹದೊಂದು ಸಲಹೆಯನ್ನು ನೀಡಬಲ್ಲ. ದೇವಲೋಕಕ್ಕೂ-ಈ ಭೂಮಿಗೂ ಯಾವುದಾದರೂ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ದೇವತೆಗಳು ಶೇ. 100ರಷ್ಟು ಸಂಸ್ಕೃತವನ್ನೇ ಆಡುವುದರಿಂದ ನಾವು ಎಚ್‌ಎಸ್‌ವಿ ಸಲಹೆಯನ್ನು ಮಾನ್ಯಮಾಡಬಹುದಿತ್ತು. ಆದರೆ ಇದು ಮನುಷ್ಯ-ಮನುಷ್ಯರ ನಡುವಿನ ಸಂವಹನಕ್ಕೆ ಸಂಬಂಧಿಸಿದ್ದು. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಸೇತುವೆಯಾಗಬೇಕಾಗಿರುವ ಭಾಷೆ ಆ ಎರಡೂ ಪ್ರದೇಶಗಳನ್ನು ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಬೆಸೆದಿರಬೇಕು. ನ್ಯಾಯಾಲಯ, ಬ್ಯಾಂಕ್, ಶಾಲೆ ಕಾಲೇಜುಗಳಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ಜನಪ್ರಿಯವಾಗಿರಬೇಕು. ಜನರಿಗಾಗಿ ಭಾಷೆಯೇ ಹೊರತು, ಭಾಷೆಗಾಗಿ ಜನರಲ್ಲ. ಎಚ್‌ಎಸ್‌ವಿ ಅವರು ಸಂಸ್ಕೃತಕ್ಕಾಗಿ ಜನರು ಬದುಕಬೇಕು ಎಂದು ಕರೆಕೊಟ್ಟಂತಿದೆ. ‘ಒಕ್ಕೂಟ ವ್ಯವಸ್ಥೆಗೆ ಸೇತುವೆಯಾಗುವ ಭಾಷೆ’ಯೊಂದರ ಅಗತ್ಯ ಈಗ ಇದೆಯೇ? ಅದರ ಅನಿವಾರ್ಯ ಇರುವುದು ಕನ್ನಡದ ಜನರಿಗೋ ಅಥವಾ ಕೇಂದ್ರದಲ್ಲಿ ಆಳುತ್ತಿರುವ ದೊರೆಗಳಿಗೋ? ಒಕ್ಕೂಟ ವ್ಯವಸ್ಥೆಗೆ ಸೇತುವೆ ರೂಪದ ಭಾಷೆಯೊಂದು ಇಲ್ಲದೇ ಇರುವುದರಿಂದ ದಕ್ಷಿಣ ಭಾರತೀಯರು ಏನನ್ನೂ ಕಳೆದುಕೊಂಡಿಲ್ಲ.

ಇಂದು ಶಿಕ್ಷಣ, ಆರೋಗ್ಯ, ಸಾಮಾಜಿಕ ಸ್ಥಿತಿಗತಿ, ಐಟಿ, ಬಿಟಿ... ಹೀಗೆ ಯಾವ ಕ್ಷೇತ್ರಗಳಲ್ಲಿ ನೋಡಿದರೂ ದಕ್ಷಿಣ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಹೀಗಿರುವಾಗ ಅವರನ್ನು ಸಂಪರ್ಕಿಸಲು ಹೊಸದೊಂದು ಭಾಷೆಯನ್ನು ಕಂಡು ಹಿಡಿಯುವ ಅನಿವಾರ್ಯ ಕನ್ನಡಕ್ಕೇನಿದೆ? ಅಥವಾ ಎಚ್‌ಎಸ್‌ವಿ ಅವರ ಖಾಸಗಿ ಅಗತ್ಯಕ್ಕಾಗಿ ಜನರೆಲ್ಲ ಸಂಸ್ಕೃತ ಕಲಿಯಬೇಕು ಎಂದು ಅವರು ಬಯಸುತ್ತಿದ್ದಾರೆಯೇ? ಐಚ್ಛಿಕವಾಗಿ ಈಗಾಗಲೇ ಹಿಂದಿಯನ್ನು ಜನರು ಬೇರೆ ಬೇರೆ ಮಾಧ್ಯಮಗಳ ಮೂಲಕ ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಂವಹನ ಅನಿವಾರ್ಯವಾಗಿರುವುದು ದಕ್ಷಿಣ ಭಾರತದ ವಿವಿಧ ಕಚೇರಿಗಳಲ್ಲಿ ಉದ್ಯೋಗದಲ್ಲಿರುವ ಉತ್ತರ ಭಾರತೀಯರಿಗೆ. ಪರಸ್ಪರ ಭಾಷೆಯ ಕೊಡುಕೊಳ್ಳುವಿಕೆಯ ಮೂಲಕವೇ ನಾವು ಈ ಸೇತುವೆಯನ್ನು ಕಟ್ಟಬೇಕಾಗಿದೆ. ಯಾವುದೇ ಭಾಷೆಯನ್ನು ಪ್ರಾದೇಶಿಕ ಭಾಷೆಗಳ ಮೇಲೆ ಹೇರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ನಮ್ಮ ನಮ್ಮ ವ್ಯಾವಹಾರಿಕ ಅಗತ್ಯಗಳೇ ಆಯಾ ಭಾಷೆಗಳನ್ನು ನಮ್ಮದಾಗಿಸುತ್ತವೆ. ಇಷ್ಟಕ್ಕೂ ಇಂದು ಇಂಗ್ಲಿಷ್ ಪರಕೀಯ ಭಾಷೆಯಾಗಿ ಉಳಿದಿಲ್ಲ.

ಉರ್ದುವಿನಂತೆಯೇ ಇಂಗ್ಲಿಷ್ ಕೂಡ ನಮ್ಮ ನೆಲದ ಭಾಷೆಯಾಗಿ ಆಳವಾಗಿ ಬೇರೂರುತ್ತಿದೆ. ಅಣಬೆಗಳಂತೆ ತಲೆಯೆತ್ತುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳೇ ಇದಕ್ಕೆ ಉದಾಹರಣೆ. ಇಂಗ್ಲಿಷ್ ಈ ನೆಲವನ್ನು ಆಧುನಿಕಗೊಳಿಸಿದೆ. ಹೊಸ ಚಿಂತನೆಗಳ ಬಾಗಿಲನ್ನು ತೆರೆದುಕೊಟ್ಟಿದೆ. ಪರಕೀಯ ಭಾಷೆಯೆಂದು ಅದನ್ನು ಹೊರಗಿಡುವ ಸ್ಥಿತಿ ಭಾರತದಲ್ಲಿ ಇಲ್ಲ ಎನ್ನುವ ವಾಸ್ತವವನ್ನು ನಾವು ಒಪ್ಪಲೇಬೇಕಾಗಿದೆ. ಮೇಲ್‌ಜಾತಿಯ ಯುವ ತಲೆಮಾರು ಇದೇ ಇಂಗ್ಲಿಷ್ ಕಲಿತು ಅಮೆರಿಕ, ಲಂಡನ್ ದಾರಿ ಹುಡುಕಿಕೊಂಡು ಹೋಗಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಇಂಗ್ಲಿಷ್ ಕುರಿತ ಎಚ್‌ಎಸ್‌ವಿ ಮಾತು, ‘ಬೆಕ್ಕು ಕಣ್ಣು ಮುಚ್ಚಿ ಹಾಲುಕುಡಿದಂತೆ’ ಆಗಿದೆ. ದೇಶವನ್ನು ಬೆಸೆಯಲು ಇಂಗ್ಲಿಷ್ ಸಮರ್ಥ ಪಾತ್ರವನ್ನು ಈಗಾಗಲೇ ಅನಧಿಕೃತವಾಗಿ ವಹಿಸಿದೆ. ಸಮ್ಮೇಳನದಲ್ಲಿ ಇಂಗ್ಲಿಷ್ ಜೊತೆಗೆ ಜೊತೆಗೇ ಕನ್ನಡವನ್ನು ಉಳಿಸುವ ದಾರಿಯನ್ನು ಹುಡುಕುವ ಪ್ರಯತ್ನ ನಡೆಯಬೇಕಾಗಿತ್ತು. ಆದರೆ ಅವರು ಕನ್ನಡದ ಹೆಗಲಿಗೆ ಸಂಸ್ಕೃತದ ಹೆಣವನ್ನು ಹೊರಿಸುವ ಪ್ರಯತ್ನ ನಡೆಸಿದ್ದಾರೆ.

ಇದು ಅಕ್ಷಮ್ಯ, ಖಂಡನೀಯ. ಸಂಸ್ಕೃತ ಅಥವಾ ಪ್ರಾಕೃತ ದೇಶ ಭಾಷೆಯಾಗಬೇಕು ಎಂದು ಕರೆ ನೀಡುವ ಎಚ್‌ಎಸ್‌ವಿ ತಮ್ಮ ಕಾವ್ಯಗಳನ್ನು ಸಂಸ್ಕೃತದಲ್ಲಿ ಬರೆಯದೇ ಕನ್ನಡದಲ್ಲೇಕೆ ಬರೆದರು? ಅಥವಾ ಉತ್ತರ ಭಾರತೀಯರನ್ನು ತಲುಪುವುದಕ್ಕಾಗಿ ತಮ್ಮ ಕವಿತೆ, ಲೇಖನಗಳನ್ನು ಸಂಸ್ಕೃತದಲ್ಲಿ ಬರೆಯುತ್ತಾರೆಯೇ? ಸಂಸ್ಕೃತಕ್ಕೆ ಜೀವಕೊಡುವುದು ಎಂದರೆ, ನಾಲ್ವರು ದಡ್ಡ ಪಂಡಿತರು ಮೃತ ನರಭಕ್ಷ ಹುಲಿಯೊಂದರ ಎಲುಬುಗಳನ್ನು ಜೋಡಿಸಿ , ಮಾಂಸ ತುಂಬಿ ಅದಕ್ಕೆ ಜೀವಕೊಟ್ಟಂತಾಗುತ್ತದೆ. ಸಂಸ್ಕೃತಕ್ಕೆ ಜೀವಕೊಡುವುದೆಂದರೆ ಅದರೊಂದಿಗೆ ತಳಕು ಹಾಕಿಕೊಂಡಿರುವ ಜಾತಿ, ವರ್ಣ, ಅಸ್ಪಶ್ಯತೆ, ಶೋಷಣೆ ಇವೆಲ್ಲಕ್ಕೂ ಜೀವಕೊಡುವುದೆಂದರ್ಥ. ಈ ನಾಡಿನ ಕೋಟ್ಯಂತರ ಜನರ ತೆರಿಗೆಯ ಹಣವನ್ನು ಬಳಸಿಕೊಂಡು ನಡೆಸಿದ ಸಮ್ಮೇಳನದ ವೇದಿಕೆಯನ್ನು ಎಚ್‌ಎಸ್‌ವಿ ಅವರು ಕನ್ನಡ ಮೌಲ್ಯಗಳನ್ನು ಸಂಸ್ಕೃತಕ್ಕೆ ಬಲಿಕೊಡುವುದಕ್ಕಾಗಿ ಬಳಸಿಕೊಂಡಿದ್ದಾರೆ. ಎಚ್‌ಎಸ್‌ವಿ ಅವರ ಮಾತುಗಳನ್ನು ಸಾಹಿತ್ಯ ಸಮ್ಮೇಳನ ದೊಡ್ಡ ಧ್ವನಿಯಲ್ಲಿ ಖಂಡಿಸಬೇಕಾಗಿದೆ ಮಾತ್ರವಲ್ಲ, ಅದರ ವಿರುದ್ಧವೇ ನಿರ್ಣಯವನ್ನು ತೆಗೆದುಕೊಳ್ಳಬೇಕು. ಜೊತೆಗೆ ಸಮ್ಮೇಳನಾಧ್ಯಕ್ಷರು ಕನ್ನಡ ಜನಕೋಟಿಯ ಕ್ಷಮೆ ಯಾಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News