ಇಂದಿನಿಂದ ಪಾಕಿಸ್ತಾನ –ಬಾಂಗ್ಲಾ ಮೊದಲ ಟೆಸ್ಟ್ ಸರಣಿ

Update: 2020-02-06 18:56 GMT

ರಾವಲ್ಪಿಂಡಿ, ಫೆ.6: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ.

ಕಳೆದ ಎರಡು ತಿಂಗಳ ಹಿಂದೆ ಪಾಕಿಸ್ತಾನದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆರಂಭಗೊಂಡಿತ್ತು. 10 ವರ್ಷಗಳ ಹಿಂದೆ ಶ್ರೀಲಂಕಾ ವಿರುದ್ಧ ಸರಣಿಯ ವೇಳೆ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕ್‌ನಲ್ಲಿ ಕ್ರಿಕೆಟ್ ಸ್ಥಗಿತಗೊಂಡಿತ್ತು. ಲಾಹೋರ್‌ನಲ್ಲಿ 2009ರ ಮಾರ್ಚ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ನ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ಘಟನೆಯ ಬಳಿಕ ಪಾಕಿಸ್ತಾನದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅವಕಾಶ ಇರಲಿಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸುತ್ತಿತ್ತು. ಪಾಕಿಸ್ತಾನದಲ್ಲಿ ಭದ್ರತಾ ಸಮಸ್ಯೆ ನಿವಾರಣೆಯಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಮೂರು ಹಂತಗಳಲ್ಲಿ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿತ್ತು. ಕಳೆದ ತಿಂಗಳು ಟ್ವೆಂಟಿ-20 ಸರಣಿಯನ್ನು ಆಡಿತ್ತು. ಇದೀಗ ಮೊದಲ ಟೆಸ್ಟ್ ನ್ನು ಆಡಲಿದೆ. ಈ ಟೆಸ್ಟ್ ಮುಗಿದು ತವರಿಗೆ ವಾಪಸಾಗಲಿರುವ ಬಾಂಗ್ಲಾದೇಶ ತಂಡ ಎ.3ರಂದು ಮತ್ತೆ ಪಾಕ್‌ಗೆ ಆಗಮಿಸಲಿದೆ. ಎ.3ರಂದು ಪಾಕ್ ವಿರುದ್ಧ ಏಕದಿನ ಪಂದ್ಯ ಮತ್ತು ಎ.5ರಿಂದ 9ರ ತನಕ ಕರಾಚಿಯಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ.

   ಪಾಕಿಸ್ತಾನದಲ್ಲಿ ಹಂತ ಹಂತವಾಗಿ ನಡೆಯಲಿರುವ ಸರಣಿಯಿಂದಾಗಿ ಪಾಕಿಸ್ತಾನವನ್ನು ಟೆಸ್ಟ್ ಆಯೋಜಿಸುವ ದೇಶವನ್ನಾಗಿ ರೂಪಿಸಲು ಸಹಾಯಕವಾಗಲಿದೆ ಎಂದು ಪಾಕ್ ತಂಡದ ನಾಯಕ ಅಝರ್ ಅಲಿ ತಿಳಿಸಿದ್ದಾರೆ.

 ಪಾಕಿಸ್ತಾನ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 9 ದೇಶಗಳ ಪೈಕಿ ಅಂಕಪಟ್ಟಿಯಲ್ಲಿ ಭಾರತ (360 ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯ (296) ಎರಡನೇ ಹಾಗೂ ಇಂಗ್ಲೆಂಡ್ (146) ಮೂರನೇ ಸ್ಥಾನದಲ್ಲಿದೆ.

 ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಎರಡು ತಂಡಗಳು 2021ರಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಾಂಪಿಯನ್‌ಪಟ್ಟಕ್ಕಾಗಿ ಸೆಣಸಾಡಲಿವೆೆ.

 ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಯೋಜಿಸುವ ಮೂಲಕ ಪಾಕ್ ಸುರಕ್ಷಿತ ದೇಶ ಎಂದು ವಿಶ್ವಕ್ಕೆ ತೋರಿಸಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದು ಅಝರ್ ಅಲಿ ಹೇಳಿದ್ದಾರೆ.

 ಬಾಂಗ್ಲಾದೇಶ ತಂಡಕ್ಕೆ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಶಾಕಿಬ್ ಅಲ್‌ಹಸನ್ ಸ್ಪಾಟ್ ಫಿಕ್ಸಿಂಗ್ ಕಾರಣಕ್ಕಾಗಿ ಒಂದು ವರ್ಷದ ನಿಷೇಧದ ಸಜೆ ಎದುರಿಸುತ್ತಿದ್ದಾರೆ. ಮುಶ್ಫಿಕುರ್ರಹೀಂ ಭದ್ರತಾ ಭಯದ ಕಾರಣದಿಂದಾಗಿ ಪಾಕ್‌ಗೆ ಪ್ರಯಾಣಿಸಲು ಹಿಂದೇಟು ಹಾಕಿದ್ದಾರೆ. ರಹೀಮ್ ತಂಡದ ಸೇವೆಗೆ ಅಲಭ್ಯ ಎಂದು ನಾಯಕ ಮುಮಿನುಲ್ ಹಕ್ ಹೇಳಿದ್ದಾರೆ.

‘‘ಅತ್ಯುತ್ತಮ ಆಟಗಾರರ ಅನುಪಸ್ಥಿತಿಯಲ್ಲಿ ನಿಮಗೆ ಆಡುವುದು ಕಷ್ಟ ಸಾಧ್ಯ. ಆದರೆ ಇದರಿಂದಾಗಿ ಯುವ ಆಟಗಾರರಿಗೆ ಆಡಲು ಅವಕಾಶ ಸಿಗಲಿದೆ’’ ಎಂದು ಹಕ್ ಹೇಳಿದ್ದಾರೆ. ಹಕ್ ನೇತೃತ್ವದ ಬಾಂಗ್ಲಾ ತಂಡ ಭಾರತ ವಿರುದ್ಧ ಕಳೆದ ವರ್ಷ ಟೆಸ್ಟ್ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿತ್ತು.

ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ದೇಶೀಯ ಪಂದ್ಯದಲ್ಲಿ ತ್ರಿಶತಕ ದಾಖಲಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಮೀಮ್, ಹಕ್ ಮತ್ತು ಮಹಮದುಲ್ಲಾ ತಂಡದ ಶಕ್ತಿಯಾಗಿದ್ದಾರೆ. ಪಾಕಿಸ್ತಾನ ತಂಡದ ಬಲಿಷ್ಠ ಬೌಲಿಂಗ್ ದಾಳಿಯನ್ನು ಬಾಂಗ್ಲಾ ಎದುರಿಸಬೇಕಾಗಿದೆ. ಪಾಕ್ ಬೌಲಿಂಗ್ ವಿಭಾಗದಲ್ಲಿ 16ರ ಹರೆಯದ ನಸೀಮ್ ಶಾ ಇದ್ದಾರೆ.

ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಆಬಿದ್ ಅಲಿ ಭಾರತದ ಬ್ಯಾಟಿಂಗ್ ಸ್ಟಾರ್ ಮುಹಮ್ಮದ್ ಅಝರುದ್ದೀನ್ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಈ ಟೆಸ್ಟ್ ನಲ್ಲಿ ಶತಕ ದಾಖಲಿಸಿದರೆ ಅಝರ್ ಅವರ ಹ್ಯಾಟ್ರಿಕ್ ಶತಕಗಳ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗುತ್ತದೆ. ಅಝರುದ್ದೀನ್ 1984 -85ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಮೂರು ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News