ಡಿಸೆಂಬರ್ ತಿಂಗಳಲ್ಲೇ ಕೊರೊನಾವೈರಸ್ ಬಗ್ಗೆ ಎಚ್ಚರಿಕೆ ನೀಡಿದ್ದ ವೈದ್ಯ ಅದೇ ಸೋಂಕಿಗೆ ಬಲಿ

Update: 2020-02-07 10:40 GMT

ಬೀಜಿಂಗ್: ಮಾರಕ ಕೊರೋನಾವೈರಸ್ ಅಪಾಯದ ಕುರಿತಂತೆ ಚೀನಾದಲ್ಲಿ ಮೊದಲು ಎಚ್ಚರಿಕೆ ನೀಡಿದ್ದ ಅಲ್ಲಿನ ವೈದ್ಯರೊಬ್ಬರು ಇದೀಗ ಅದೇ ಸೋಂಕಿಗೆ ಬಲಿಯಾಗಿದ್ದಾರೆ.

ವುಹಾನ್‍ ನಲ್ಲಿ ಸಾರ್ಸ್ ರೀತಿಯ ಕಾಯಿಲೆ ಹರಡುತ್ತಿರುವ ಎಚ್ಚರಿಕೆಯನ್ನು ವೈದ್ಯ ಲಿ ವೆನ್ಲಿಯಾಂಗ್  ಕಳೆದ ವರ್ಷದ ಡಿಸೆಂಬರ್ 30ರಂದೇ ನೀಡಿದ್ದರೂ ಅಲ್ಲಿನ ಸರಕಾರ ಅವರ ಎಚ್ಚರಿಕೆಯನ್ನು ಕಡೆಗಣಿಸಿದ್ದೇ ಅಲ್ಲದೆ ಅದನ್ನು ಅಲ್ಲಗಳೆದಿತ್ತು. ಗುರುವಾರ ಲಿ ವೆನ್ಲಿಯಾಂಗ್ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆಂದು ಅಲ್ಲಿನ ಸರಕಾರಿ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

 ಮೂವತ್ತ್ನಾಲ್ಕು ವರ್ಷದ ವೆನ್ಲಿಯಾಂಗ್ ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ನೇತ್ರ ವೈದ್ಯರಾಗಿದ್ದು ತಮ್ಮ ಸ್ನೇಹಿತರಿಗೆ ಕಳೆದ ವರ್ಷಾಂತ್ಯದಲ್ಲಿ ಕಳುಹಿಸಿದ್ದ ಖಾಸಗಿ ಸಂದೇಶಗಳಲ್ಲಿ ಈ ವೈರಲ್ ಸೋಂಕಿನ ಕುರಿತು ಎಚ್ಚರಿಸಿದ್ದರು.

ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಏಳು ರೋಗಿಗಳಲ್ಲಿ ಸಾರ್ಸ್ ರೀತಿಯ ಲಕ್ಷಣಗಳಿವೆ ಎಂದು ಚೀನಾದ ಮೆಸೇಜಿಂಗ್ ಆ್ಯಪ್ ವಿ ಚಾಟ್ ಮೂಲಕ ಅವರು ಇತರ  ವೈದ್ಯರಲ್ಲಿ ಹೇಳಿಕೊಂಡಿದ್ದರು. ರೋಗ ಮೊದಲು ಪತ್ತೆಯಾದ ಹುಬೈ ಎಂಬಲ್ಲಿನ   ಸಾಗರೋತ್ಪನ್ನ ಮಾರುಕಟ್ಟೆಯಲ್ಲಿ ಖರೀದಿಸಿದ್ದ ಮಾಂಸವನ್ನೇ ಈ ಏಳು ಮಂದಿಯೂ ಸೇವಿಸಿದ್ದರೆಂದೂ ವೆನ್ಲಿಯಾಂಗ್ ಹೇಳಿದ್ದರು.

ಚೀನಾ ಸಹಿತ ಜಗತ್ತಿನಲ್ಲಿ 2003ರಲ್ಲಿ 800 ಜನರು ಬಲಿಯಾದ ಸಾರ್ಸ್  ರೀತಿಯ ಕೊರೋನಾವೈರಸ್ ಸೋಂಕು ಎಂದೂ ಪರೀಕ್ಷೆಯಿಂದ ತನಗೆ ತಿಳಿದು ಬಂದಿತ್ತು ಎಂದು ಅವರು ವಿವರಿಸಿದ್ದರು.

ಅವರ ಈ ಚಾಟ್ ಸಂದೇಶಗಳು ಚೀನೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ಸುದ್ದಿಯ ಸದ್ದಡಗಿಸುವ ಯತ್ನವಾಗಿ ಜನವರಿ 3ರಂದು ಚೀನೀ ಅಧಿಕಾರಿಗಳು ವೆನ್ಲಿಯಾಂಗ್ ಹಾಗೂ ಏಳು ಮಂದಿ ಇತರ ವೈದರಿಗೆ ಸಮನ್ಸ್ ಕಳುಹಿಸಿ ವದಂತಿಗಳನ್ನು ಹರಡುತ್ತಿರುವ ಆರೋಪ ಹೊರಿಸಿದ್ದರಲ್ಲದೆ  ಈ ವದಂತಿಗಳಿಗೆ ಅಂತ್ಯ ಹಾಡಬೇಕೆಂಬ ಸಂದೇಶವನ್ನೂ ದೇಶಾದ್ಯಂತ ಪಸರಿಸಲಾಗಿತ್ತು.

ಲಿ ವೆನ್ಲಿಯಾಂಗ್ ಅವರಿಗೆ ಅವರ ತಪ್ಪನ್ನು ಒಪ್ಪಿ ಅಫಿಡವಿಟ್ ಒಂದಕ್ಕೆ ಸಹಿ ಹಾಕುವಂತೆ ಮಾಡಲಾಯಿತಲ್ಲದೆ ಭವಿಷ್ಯದಲ್ಲಿ ವದಂತಿಗಳನ್ನು ಹರಡದಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಮುಂದೆ ಕೊರೋನಾವೈರಸ್ ಬಾಧಿತ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೇಳೆ ಅವರಿಗೂ ಈ ಸೋಂಕು ತಗಲಿ ಅವರನ್ನು ಜನವರಿ 12ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ  ಅವರನ್ನು ಐಸಿಯುವಿಗೆ ಸ್ಥಳಾಂತರಿಸಲಾಯಿತು.

ಅತ್ತ ಚೀನಾ ಕೊರೋನಾವೈರಸ್ ಗಂಭೀರತೆಯನ್ನು ಅರ್ಥೈಸಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಜನವರಿ 20ರಂದಷ್ಟೇ ಘೋಷಿಸಿತ್ತು. ಲಿ ಅವರಿಗೆ ಉಂಟಾದ ಸೋಂಕು ಕೊರೋನಾವೈರಸ್‍ ನಿಂದ ಎಂಬುದು ಫೆಬ್ರವರಿ 1ರಂದು ದೃಢಪಟ್ಟಿದ್ದರೆ ಐದು ದಿನಗಳ ನಂತರ ಅವರು ಮೃತಪಟ್ಟಿದ್ದರು.

ಆದರೆ ಲಿ ಅವರ ನೀಡಿದ್ದ ಎಚ್ಚರಿಕೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ನಿವಾರಣೋಪಾಯಗಳನ್ನು ಕೈಗೊಂಡಿದ್ದೇ ಆದಲ್ಲಿ ಇಂದು ಈ ಸೋಂಕು ಇಷ್ಟರ ಮಟ್ಟಿಗೆ ವ್ಯಾಪಿಸುತ್ತಿರಲಿಲ್ಲ ಎಂದು  ಸುಪ್ರೀಂ ಕೋರ್ಟ್ ನ್ಯಾಯಾಧೀಶ ಟ್ಯಾಂಗ್ ಕ್ಸಿಂಗ್‍ ಹುವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News