ಜಮ್ಮು ಕಾಶ್ಮೀರ : ಗಣಿ ಹರಾಜು ಪ್ರಕ್ರಿಯೆಯಲ್ಲಿ 60% ಹೆಚ್ಚುವರಿ ಆದಾಯ

Update: 2020-02-07 16:50 GMT

ಶ್ರೀನಗರ, ಫೆ.7: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ದೇಶದ ವಿವಿಧೆಡೆಯ ಗಣಿ ಉದ್ಯಮಿಗಳು ತಮ್ಮ ವ್ಯವಹಾರವನ್ನು ಈ ರಾಜ್ಯಕ್ಕೆ ವಿಸ್ತರಿಸಲು ಆಸಕ್ತಿ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ ಕಲ್ಲಿದ್ದಲು, ಅಮೃತಶಿಲೆ, ಸುಣ್ಣದ ಕಲ್ಲು ಮತ್ತಿತರ ಖನಿಜಗಳ ಗಣಿಗಾರಿಕೆ ನಡೆಸಲು ಇತ್ತೀಚೆಗೆ ನಡೆಸಲಾದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್, ಉತ್ತರಪ್ರದೇಶ ಮತ್ತು ರಾಜಸ್ತಾನದ ಗಣಿ ಉದ್ಯಮಿಗಳು ಭಾಗವಹಿಸಿದ್ದರು. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ರಾಜ್ಯಕ್ಕೆ 60% ಅಧಿಕ ವರಮಾನ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಹರಾಜು ಪ್ರಕ್ರಿಯೆಯಲ್ಲಿ ದೇಶದ ಇತರೆಡೆಯ ಬೃಹತ್ ಸಂಸ್ಥೆಗಳು ಪಾಲ್ಗೊಂಡಿರುವುದರಿಂದ ಅವರೊಡನೆ ಸ್ಪರ್ಧಿಸಲು ತಮಗೆ ಸಾಧ್ಯವಾಗದೆ ತಾವು ಅವಕಾಶ ವಂಚಿತರಾಗಿರುವುದಾಗಿ ಸ್ಥಳೀಯ ಉದ್ಯಮಿಗಳು ಅಸಮಾಧಾನ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 554 ಖನಿಜ ಕ್ಷೇತ್ರಗಳಿದ್ದು ಇದರಲ್ಲಿ ಕಾಶ್ಮೀರದ 10 ಜಿಲ್ಲೆಗಳಲ್ಲಿ 261 ಕ್ಷೇತ್ರಗಳಿದ್ದು ತಲಾ ಗರಿಷ್ಟ 10 ಹೆಕ್ಟೇರ್ ವಿಸ್ತೀರ್ಣವಿದೆ. ಇವುಗಳಲ್ಲಿ 160 ಗಣಿಗಳ ಲೀಸ್ ಪ್ರಕ್ರಿಯೆ ನಡೆದಿದೆ. ಇದರಲ್ಲಿ ಹೆಚ್ಚಿನ ಖನಿಜ ಕ್ಷೇತ್ರ ಝೀಲಂ ನದಿ ದಂಡೆಯಲ್ಲಿದೆ. ಈ ಗಣಿಗಳಲ್ಲಿ ಮರಳಿನ ಜೊತೆಗೆ, ಜಿಪ್ಸಂ, ಸುಣ್ಣದ ಕಲ್ಲು, ಬಾಕ್ಸೈಟ್, ಬೊರಾಕ್ಸ್, ಗ್ರನೈಟ್, ಅಮೃತಶಿಲೆ, ಕಲ್ಲಿದ್ದಲಿನ ಸಂಪನ್ಮೂಲ ಹೇರಳವಾಗಿವೆ. ಅಲ್ಲದೆ ಇಂದ್ರನೀಲಮಣಿ, ಪದ್ಮರಾಗ ಮುಂತಾದ ಅಮೂಲ್ಯ ಹರಳುಗಳ ಸಂಪನ್ಮೂಲವನ್ನೂ ಸ್ಥಳೀಯ ಆಡಳಿತ ಗುರುತಿಸಿದೆ. ಕಾಶ್ಮೀರದಲ್ಲಿ 6 ಜಿಲ್ಲೆಗಳಲ್ಲಿ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ವಾರ ಶೋಫಿಯಾನ್, ಅನಂತನಾಗ್, ಕುಲ್ಗಾಂವ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಜಮ್ಮು ಕಾಶ್ಮೀರ ಗಣಿ ಇಲಾಖೆಯ ಜಂಟಿ ನಿರ್ದೇಶಕ ಇಮ್ತಿಯಾಝ್ ಅಹ್ಮದ್ ಖಾನ್ ಹೇಳಿದ್ದಾರೆ. 5 ವರ್ಷದ ಲೀಸ್‌ಗೆ ಸರಕಾರ 5 ಲಕ್ಷ ರೂ. ಮೊತ್ತವನ್ನು ಗರಿಷ್ಟ ಮೂಲಬೆಲೆಯಾಗಿ ನಿಗದಿಗೊಳಿಸಿದ್ದು ಕೋಟಿ ರೂ.ವರೆಗೂ ಬಿಡ್ ಮಾಡಲಾಗಿದೆ. ಪುಲ್ವಾಮಾ ಜಿಲ್ಲೆಯೊಂದರಲ್ಲೇ 15 ಗಣಿ ಕ್ಷೇತ್ರಗಳು 17.82 ಕೋಟಿ ರೂ.ವರೆಗಿನ ಮೊತ್ತಕ್ಕೆ ಹರಾಜಾಗಿವೆ. ಈ ಹಿಂದೆ ಇವುಗಳಿಂದ ಗರಿಷ್ಟ 2 ಕೋಟಿ ಆದಾಯ ಸಿಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಶ್ರೀನಗರದ 10 ಖನಿಜ ಕ್ಷೇತ್ರಗಳಿಂದ 5.08 ಕೋಟಿ ಆದಾಯ ಬಂದಿದ್ದು ಈ ಹಿಂದೆ ಗರಿಷ್ಟ 1.85 ಕೋಟಿ ಆದಾಯ ಬಂದಿತ್ತು. ಪುಲ್ವಾಮಾದಲ್ಲಿ ಒಂದು ಗಣಿ 3.25 ಕೋಟಿ ರೂ.ಗೆ ಹರಾಜಾಗಿದ್ದರೆ ಶ್ರೀನಗರದಲ್ಲಿ 1.62 ಕೋಟಿ ರೂ.ಗೆ ಹರಾಜಾಗಿದೆ. ಇದು ಅಭೂತಪೂರ್ವ ದಾಖಲೆಯಾಗಿದೆ ಎಂದು ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News