ಬಂಡವಾಳಶಾಹಿ ವ್ಯವಸ್ಥೆಗೆ ಬಂಡವಾಳಶಾಹಿಯಿಂದಲೇ ಅಪಾಯ!!

Update: 2020-02-07 18:33 GMT

ಆರ್ಥಿಕ ಬಿಕ್ಕಟ್ಟಿನ ಭಾಗವಾಗಿ ಬರುತ್ತಿರುವ ‘ನಗರೀಕರಣ’ ಯೋಜನೆಗಳು, ಕಾರ್ಪೊರೇಟ್ ಕೃಷಿ ಯೋಜನೆಗಳು ವ್ಯಾಪಕ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಲಿವೆ. ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. 2050ರ ವೇಳೆಗೆ 2.5 ಬಿಲಿಯನ್ ಜನರು ಜಗತ್ತಿನಾದ್ಯಂತ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರಗಳನ್ನು ಸೇರುತ್ತಾರೆ. 2025ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ 45.5 ಶೇ. ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರ ಪ್ರದೇಶಗಳನ್ನು ಸೇರುತ್ತಾರೆ. ಭಾರತದಲ್ಲಿ ಶೇ. 76 ರೈತರು ಕೃಷಿಯನ್ನು ತೊರೆಯಲು ಮುಂದಾಗಿದ್ದಾರೆ. ಚೀನಾ ದೇಶದ 700 ಮಿಲಿಯನ್ ರೈತರು ಕೃಷಿಯನ್ನು ತೊರೆದು ನಗರಗಳಿಗೆ ವಲಸೆ ಹೋಗಿದ್ದಾರೆ. 2030ರ ವೇಳೆಗೆ ಭಾರತದಲ್ಲಿ ನಗರೀಕರಣ ಶೇ. 70 ತಲುಪುತ್ತದೆ. ಇಂದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.54 ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಶೇ. 66 ತಲುಪಲಿದೆ.


ಸಾಮ್ರಾಜ್ಯವಾದ ಆರ್ಥಿಕತೆಯ ಉಸಿರಾಟಕ್ಕೆ ಸಹಾಯವಾಗಿದ್ದ ಭಾರತ ಮತ್ತು ಚೀನಾ ದೇಶಗಳ ‘ನಿಯಂತ್ರಿತ ಬಂಡವಾಳಶಾಹಿ’ ಆರ್ಥಿಕತೆಗಳು ಸಹ ತೀವ್ರ ಆರ್ಥಿಕ ಉಸಿರಾಟದ ತೊಂದರೆಯಿಂದ ನರಳುತ್ತಿವೆ. ಕಾರ್ಖಾನೆಗಳು ಮುಚ್ಚಲ್ಪಡುತ್ತಿವೆ. ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ಸಾಲಗಳು ಮರುಪಾವತಿಯಾಗದೆ ದಿವಾಳಿ ಹಂತ ತಲುಪಿವೆ. ಸರಕಾರದ ಖಜಾನೆಗಳು ಬರಿದಾಗುತ್ತಿವೆ. ಇವೆಲ್ಲ ಬೆಳವಣಿಗೆಗಳು ಬಂಡವಾಳಶಾಹಿ ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟಿನ ಭೂಕಂಪನದ ಸಂಕೇತಗಳು ಗಡಗಡ ಸದ್ದು ಮಾಡುತ್ತಿವೆ. 2008-09ರಲ್ಲಿ ಉಂಟಾದ ಜಾಗತಿಕ ಬಿಕ್ಕಟ್ಟು ಮುಂಬರುವ ವರ್ಷಗಳಲ್ಲಿ ಪುನರಾವರ್ತನೆಯಾಗುವ ಅಪಾಯ ಎದುರಾಗಿದೆ. ಆದರೆ ಈ ಬಾರಿ ಮಾತ್ರ ಭಾರತ ಮತ್ತು ಚೀನಾಗಳು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೂಕಂಪನದ ಮುಖ್ಯ ಕೇಂದ್ರಬಿಂದು ಆಗಿರುತ್ತವೆ. ಈ ಭೂಕಂಪನದ ಅಲೆಗಳು ಸಾಮ್ರಾಜ್ಯಶಾಹಿ ದೇಶಗಳ ಆರ್ಥಿಕತೆಯ ಬುಡವನ್ನು ಅಲುಗಾಡಿಸುವ ಎಲ್ಲ ಸೂಚನೆಗಳು ಕಾಣುತ್ತಿವೆ.

19ನೇ ಶತಮಾನದಲ್ಲಿ ಉದ್ಭವಗೊಂಡ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಈವರೆಗೆ ನಾಲ್ಕು ಬಾರಿ ತೀವ್ರವಾದ ಬಿಕ್ಕಟ್ಟುಗಳನ್ನು ಕಂಡಿವೆ. ಅವುಗಳಲ್ಲಿ 1873-96ರ ಅವಧಿಯಲ್ಲಿ ಎದುರಿಸಿದ್ದ ಕುಸಿತವು ಈವರೆಗೂ ಎದುರಿಸಿದ ಬಹು ದೀರ್ಘಕಾಲೀನ ಆರ್ಥಿಕ ಕುಸಿತವಾಗಿದೆ. ಅತಿಯಾದ ಲಾಭದ ದುರಾಸೆಗೆ ಬಂಡವಾಳಶಾಹಿಗಳ ಮಧ್ಯೆ ತೀವ್ರ ಪೈಪೋಟಿ ಬಿಕ್ಕಟ್ಟಿಗೆ ಕಾರಣವಾಯಿತು.
ಎರಡನೇ ಬಿಕ್ಕಟ್ಟು 1929-39ರಲ್ಲಿ ಉದ್ಭವವಾಯಿತು. ತೀವ್ರತರನಾದ ಆರ್ಥಿಕ ಅಸಮಾನತೆಗಳು ಹಾಗೂ ಬಂಡವಾಳದ ಅತಿಯಾದ ಸಟ್ಟಾ/ಜೂಜಾಟಗಳು ಹಾಗೂ ಸ್ಥಿರಾಸ್ತಿ (ರಿಯಲ್ ಎಸ್ಟೇಟ್)ಗಳನ್ನು ನಿಯಂತ್ರಿಸುವ ಶಕ್ತಿಗಳು ಈ ಬಿಕ್ಕಟ್ಟಿನ ರೂವಾರಿಯಾಗಿದ್ದರು.
ಮೂರನೇ ಬಿಕ್ಕಟ್ಟು 1973-1980ರ ಅವಧಿಯಲ್ಲಿ ಲಾಭದ ಗಣನೀಯ ಇಳಿಕೆಯಿಂದ ಉಬ್ಬರದ ಮಂದಸ್ಥಿತಿ ಉದ್ಭವವಾಯಿತು.

ನಾಲ್ಕನೇ ಬಿಕ್ಕಟ್ಟು 2008ರಲ್ಲಿ ಮತ್ತೆ ಪ್ರತ್ಯಕ್ಷವಾಯಿತು. ಅತಿಯಾದ ಅಸಮಾನತೆಗಳು ಹಾಗೂ ಹಣಕಾಸು ಬಂಡವಾಳದ ಅತಿಯಾದ ಸಟ್ಟಾಗಳು ಈ ಬಿಕ್ಕಟ್ಟಿನ ಮುಖ್ಯ ಕಾರಣವಾಗಿದ್ದವು. ಅತಿಯಾದ ನೋಟುಗಳನ್ನು ಮುದ್ರಣ ಮಾಡಿ ಸಾಲಗಳಾಗಿ ನೀಡಿ ಕೃತಕ ಬೇಡಿಕೆಯನ್ನು ಸೃಷ್ಟಿಸಿ ಈ ಬಿಕ್ಕಟ್ಟಿಗೆ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. 2008ರ ಕುಸಿತದ ನಂತರ ಜಗತ್ತಿನ ಕೇಂದ್ರ ಬ್ಯಾಂಕುಗಳು 21 ಟ್ರಿಲಿಯನ್ ಡಾಲರ್‌ಗಳನ್ನು ಮುದ್ರಿಸಿ ಸಾಲಗಳ ರೂಪದಲ್ಲಿ ನೀಡಿದವು. ಈ ಅವಧಿಯಲ್ಲಿ ಜಾಗತಿಕ ಒಟ್ಟಾರೆ ಖಾಸಗಿ ಹಾಗೂ ಸಾರ್ವಜನಿಕ ಸಾಲಗಳು 325 ಟ್ರಿಲಿಯನ್ ಡಾಲರ್‌ಗಳನ್ನು ತಲುಪಿತು. ಇದು ಜಾಗತಿಕ ವಾರ್ಷಿಕ ವರಮಾನಕ್ಕಿಂತ ಮೂರು ಪಟ್ಟು ಅಧಿಕವಾಗಿತ್ತು. ಈ ಅವಧಿಯಲ್ಲಿ ಅಮೆರಿಕದ ವಾರ್ಷಿಕ ವರಮಾನವು 17 ಟ್ರಿಲಿಯನ್ ಡಾಲರ್‌ಗಳು. ಆದರೆ ಅಮೆರಿಕ, ಯುರೋಪ್ ಮತ್ತು ಜಪಾನ್ ದೇಶಗಳ ಕೇಂದ್ರ ಬ್ಯಾಂಕುಗಳು ಮುದ್ರಣದ ಮೂಲಕ ಸೃಷ್ಟಿಸಿರುವ ‘ಮಾಂತ್ರಿಕ ಹಣ’ ಅಥವಾ ‘ಕಲ್ಪಿತ ಹಣ’ 13.5 ಟ್ರಿಲಿಯನ್ ಡಾಲರ್‌ಗಳಾಗಿತ್ತು. ಈ ‘ಮಾಂತ್ರಿಕ ಹಣ’ ಜಾಗತಿಕ ವಾರ್ಷಿಕ ನಿಜವಾದ ಆದಾಯದ ಶೇ. 17 ಆಗಿತ್ತು. ಸೃಷ್ಟಿ ಮಾಡಲಾಗಿದ್ದ ಈ ಹಣವೂ ಆರ್ಥಿಕ ಪ್ರಕ್ರಿಯೆಗಳಾದ ಕಂದಾಯ, ವರಮಾನಗಳು, ಲಾಭ ಅಥವಾ ಆರ್ಥಿಕ ಬೆಳವಣಿಗೆಗಳಿಂದ ಬರಲಿಲ್ಲ! ಷೇರುಪೇಟೆಯಲ್ಲಿ ಈ ‘ಮಾಂತ್ರಿಕ ಹಣ’ ಜೂಜಾಟದಲ್ಲಿ ತೊಡಗಿತ್ತು!!

ಸಾಮ್ರಾಜ್ಯಶಾಹಿ ದೇಶಗಳು ಅಗ್ರ ರಾಷ್ಟ್ರಕೂಟ ಜಿ-20 ಮುಖಾಂತರ ತಮ್ಮ ಅಜೆಂಡಾ ಅಥವಾ ಕಾರ್ಯಸೂಚಿ ಪಟ್ಟಿಯನ್ನು ಜಾಗತಿಕ ಸಂಸ್ಥೆಗಳ ಮೂಲಕ ವಿಶ್ವದಲ್ಲಿ ಜಾರಿ ಮಾಡುತ್ತವೆ. ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಮೆರಿಕ ದೇಶವು 1990ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆ(ಡಿಠಿಟ)ಯನ್ನು ಸ್ಥಾಪಿಸಿತು. 2000ದಿಂದ ಚೀನಾ ದೇಶವನ್ನು ಒಂದು ‘ಜವಾಬ್ದಾರಿಯುತ ಪಾಲುದಾರ’ನನ್ನಾಗಿ ಬೆಳೆಸುವುದು ಅಮೆರಿಕದ ಮುಖ್ಯ ಗುರಿಯಾಗಿದೆ.

ಸಾಮ್ರಾಜ್ಯವಾದ ಆರ್ಥಿಕತೆಯು ಅಸ್ಥಿರತೆ, ಅಭದ್ರತೆ ಹಾಗೂ ಯುದ್ಧಗಳ ಮೇಲೆ ಅವಲಂಬಿತವಾಗಿರುತ್ತದೆ. ಎರಡನೇ ಮಹಾಯುದ್ಧವು ತನ್ನ ಮೂಲ ಬಿಕ್ಕಟ್ಟಿನ ಸ್ವರೂಪವಾದ ಆರ್ಥಿಕ ಸ್ಥಗಿತತೆಯನ್ನು ಮುರಿಯಲು ಸಾಮ್ರಾಜ್ಯ ಶಾಹಿಗಳಿಗೆ ತುಂಬಾ ಅನುಕೂಲವಾಯಿತು. ಮೊದಲನೇ ಹಾಗೂ ಎರಡನೇ ಮಹಾಯುದ್ಧದಲ್ಲಿ ಯುರೋಪ್ ಹಾಗೂ ಜಪಾನ್ ದೇಶಗಳ ಆರ್ಥಿಕತೆಗಳು ಸಂಪೂರ್ಣ ನಾಶವಾಗಿದ್ದವು. ಯುದ್ಧದ ನಂತರ ಆರ್ಥಿಕ ಪುನರ್ ನಿರ್ಮಾಣ ಪ್ರಕ್ರಿಯೆಗಳು ಪ್ರಾರಂಭವಾದವು. ಈ ಸಮಯದಲ್ಲಿ ಸಾಮ್ರಾಜ್ಯವಾದವು ಉದಾರ ನೀತಿಯ (ಲಿಬರಲ್ ಸ್ಟೇಟ್) ಮುಖವಾಡವಾದ ಮಾನವ ಹಕ್ಕು, ಪ್ರಜಾಪ್ರಭುತ್ವ, ಕಾನೂನಿನ ಆಡಳಿತವನ್ನು ಧರಿಸಿತು. 1980ರ ನಂತರ ತಲೆದೋರಿದ ಆರ್ಥಿಕ ಬಿಕ್ಕಟ್ಟು ಪ್ರಭುತ್ವಗಳ ನೀತಿಗಳಲ್ಲಿ ಸರ್ವಾಧಿಕಾರಿ ಧೋರಣೆಗಳ ಮಾರ್ಪಾಟು ಕಂಡುಬಂದವು. ಅವು ಮಾನವ ಹಕ್ಕು, ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಘೋಷಣೆಗಳನ್ನು ಕೈಬಿಟ್ಟವು!. ‘ಭಯೋತ್ಪಾದನೆ’, ‘ದೇಶ ರಕ್ಷಣೆ’, ‘ರಾಷ್ಟ್ರಭಕ್ತಿ’, ‘ಅಧಿಕೃತ ವಲಸೆಗಾರರು’ ಪ್ರಭುತ್ವಗಳ ನೂತನ ಘೋಷಣೆಗಳಾದವು.

ಈ ಹಂತದಲ್ಲಿ ಸಾಮ್ರಾಜ್ಯಶಾಹಿಗಳು ಬಿಕ್ಕಟ್ಟಿನಿಂದ ಪಾರಾಗಲು ಯುದ್ಧ ಸಲಕರಣೆಗಳನ್ನು ನಾಗರಿಕ ಸಲಕರಣೆಗಳನ್ನಾಗಿ ಮಾರ್ಪಡಿಸಿದರು. ಉದಾ: ಅಣುಶಕ್ತಿ, ಔಷಧಿಗಳು, ಪೆನ್ಸಿಲಿನ್, ರಾಡಾರ್, ನೈಲಾನ್ ಚಿಪ್ಪುಗಳು, ಯುದ್ಧ ಕವಚಗಳು, ಕೃತಕ ರಬ್ಬರುಗಳು, ಡಬ್ಬಿಗಳಲ್ಲಿ ಶೇಖರಿಸಿದ ಆಹಾರಗಳು, ಇಂಧನಗಳು, ವಿಮಾನಗಳು, ಬಾಹ್ಯಾಕಾಶದಲ್ಲಿ ಬಳಸುವ ರಾಕೆಟ್‌ಗಳು, ಕೃತಕ ಉಪಗ್ರಹಗಳು. ಇವುಗಳಲ್ಲಿ ಬಾಹ್ಯಾಕಾಶ ಮತ್ತು ಅಣುಶಕ್ತಿ ತೀವ್ರ ಬಿಕ್ಕಟ್ಟಿನಲ್ಲಿದ್ದ ಸಾಮ್ರಾಜ್ಯಶಾಹಿ ದೇಶಗಳಿಗೆ ತುಂಬಾ ಅನುಕೂಲವಾಯಿತು.

ಇದೇ ಸಮಯದಲ್ಲಿ ಬಿಕ್ಕಟ್ಟಿನಲ್ಲಿದ್ದ ಸಾಮ್ರಾಜ್ಯಶಾಹಿಗಳು ‘ಹಸಿರು ಕ್ರಾಂತಿ’ಯನ್ನು ಕಂಡುಹಿಡಿದರು. 1940ರಲ್ಲಿ ಅಮೆರಿಕ ದೇಶದ ವಿಜ್ಞಾನಿ ನಾರ್ಮನ್ ಬೋರ್ಲಾಗ್ ದುಬಾರಿ ಬೆಲೆಯ ಬೇಸಾಯ ಯಂತ್ರಗಳು, ಕಚ್ಚಾ ತೈಲ ಆಧಾರಿತ ಗೊಬ್ಬರಗಳು ಹಾಗೂ ಕೀಟನಾಶಕಗಳ ಸಹಾಯದಿಂದ ಅಧಿಕ ಇಳುವರಿಯನ್ನು ಪಡೆಯುವ ತಳಿಗಳನ್ನು ಮೆಕ್ಸಿಕೋ ದೇಶದಲ್ಲಿ ಅಭಿವೃದ್ಧಿ ಪಡಿಸಿದರು. 1968ರಲ್ಲಿ ಅಮೆರಿಕದ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿಲಿಯಂ ಗೌಡ್ ಇದಕ್ಕೆ ‘ಹಸಿರು ಕ್ರಾಂತಿ’ (ಗ್ರೀನ್ ರೆವಲೇಷನ್) ಎಂದು ನಾಮಕರಣ ಮಾಡಿದರು. 1970 ರಲ್ಲಿ ಬೋರ್ಲಾಗ್ ಗೆ ನೊಬೆಲ್ ಪಾರಿತೋಷಕ ನೀಡಲಾಯಿತು. ಹಸಿರು ಕ್ರಾಂತಿಯು ವಿಷಪೂರಿತ ಆಹಾರ ಉತ್ಪಾದನೆಯನ್ನು ಹೆಚ್ಚಿಸಿದರೂ, ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರು ತಮ್ಮ ಭೂಮಿಗಳನ್ನು ಕಳೆದುಕೊಂಡು ಕೃಷಿ ಕಾರ್ಮಿಕರಾಗಿ ಪರಿವರ್ತನೆಯಾಗುವಲ್ಲಿ ಈ ಪ್ರಯೋಗ ಯಶಸ್ವಿಯಾಯಿತು.

ಎರಡನೇ ಮಹಾಯುದ್ಧದ ಬೇಡಿಕೆಗಳನ್ನು ಪೂರೈಸಲು ಅಮೆರಿಕದ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಸಾಯನಿಕ ಅಸ್ತ್ರಗಳನ್ನು ಉತ್ಪಾದಿಸುತ್ತಿದ್ದವು. ಯುದ್ಧ ಮುಕ್ತಾಯದ ನಂತರ ಸಾಮ್ರಾಜ್ಯವಾದಿಗಳು ‘ಹಸಿರು ಕ್ರಾಂತಿ’ಯ ಮುಸುಕಿನಲ್ಲಿ ಈ ರಾಸಾಯನಿಕ ಅಸ್ತ್ರಗಳನ್ನು ಗೊಬ್ಬರಗಳನ್ನಾಗಿ ಪರಿವರ್ತಿಸಿ ಬಡ ದೇಶಗಳಿಗೆ ಅದರಲ್ಲೂ ಭಾರತಕ್ಕೆ ರಫ್ತು ಮಾಡತೊಡಗಿದರು ಹಾಗೂ ಇವುಗಳನ್ನು ಉತ್ಪಾದಿಸುವ ಯಂತ್ರ ಸ್ಥಾವರಗಳನ್ನು ‘ಅಭಿವೃದ್ಧಿ ನೆರವು’ ಹೆಸರಿನಲ್ಲಿ ಭಾರತದಂತಹ ಹಿಂದುಳಿದ ದೇಶಗಳಿಗೆ ಸ್ಥಳಾಂತರಿಸಿದರು.

ತೀಕ್ಷ್ಣಗೊಳ್ಳುತ್ತಿರುವ ಬಿಕ್ಕಟ್ಟಿನಿಂದ ಪಾರಾಗಲು ಬಂಡವಾಳಶಾಹಿಗಳು ಈಗ ‘ನಗರೀಕರಣ’ದ ಮಾರ್ಗ ಹಿಡಿದಿದ್ದಾರೆ. ನಗರೀಕರಣ ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಸಾಗಿದೆ. ಬಂಡವಾಳಶಾಹಿ ಆರ್ಥಿಕತೆ ಬಿಕ್ಕಟ್ಟಿನಲ್ಲಿರುವಾಗ ಅದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ನಗರೀಕರಣ ಉದಾ: ಸ್ಮಾರ್ಟ್‌ಸಿಟಿ, ರಸ್ತೆ, ರೈಲ್ವೆ ನಿರ್ಮಾಣಗಳಿಗೆ ಒತ್ತು ನೀಡುತ್ತದೆ. ಏಶ್ಯ, ಆಫ್ರಿಕಾ, ಯುರೋಪ್ ಖಂಡಗಳ 72 ದೇಶಗಳನ್ನು ಸಂಪರ್ಕಿಸುವ ಚೀನಾದ ಒಂದು ಟ್ರಿಲಿಯನ್ ಡಾಲರ್ ಯೋಜನೆಯಾಗಲಿ (ಬಿಆರ್‌ಐ ಪ್ರಾಜೆಕ್ಟ್) ದಕ್ಷಿಣ ಏಶ್ಯ ಮತ್ತು ಉತ್ತರ ಏಶ್ಯವನ್ನು ಸಂಪರ್ಕಿಸುವ ಭಾರತ, ಚೀನಾ, ರಶ್ಯ, ಇರಾನ್ ಕಾರಿಡಾರ್ ಯೋಜನೆಗಳು ಸಾಮ್ರಾಜ್ಯಶಾಹಿಗಳನ್ನು ಬಿಕ್ಕಟ್ಟಿನಿಂದ ಪಾರಾಗಿಸುವ ಯೋಜನೆಗಳಾಗಿವೆ. ಬಂಡವಾಳಶಾಹಿ ಶಾಶ್ವತ ಬಿಕ್ಕಟ್ಟನ್ನು ಪರಿಹರಿಸುವ ಈ ಯೋಜನೆಗಳು ತಾತ್ಕಾಲಿಕವಾದದ್ದು ಹಾಗೂ ಇವು ಇನ್ನಷ್ಟು ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ.

ಸಾಮ್ರಾಜ್ಯವಾದ ಜಾಗತಿಕ ಆರ್ಥಿಕತೆಯನ್ನು ಪುನರ್‌ರಚಿಸುತ್ತಿದೆ. ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸುತ್ತಿದೆ. ರಫ್ತು ಮಾಡುವ ವಾಣಿಜ್ಯ ಬೆಳೆಗಳನ್ನು ಹೇರುತ್ತಿದೆ. ಸ್ಥಳೀಯವಾಗಿ ದೊರೆಯುವ ಅಗ್ಗದ ಖನಿಜಗಳು ಹಾಗೂ ಅಗ್ಗದ ಕೂಲಿಗಳನ್ನು ಬಳಸಿ ಅಧಿಕ ಲಾಭ ಮಾಡುವ ಭಾರೀ ಮತ್ತು ಲಘು ಕೈಗಾರಿಕೆಗಳನ್ನು ಹಿಂದುಳಿದ ದೇಶಗಳಿಗೆ ‘ಅಭಿವೃದ್ಧಿ ನೆರವು’ ಹೆಸರಿನಲ್ಲಿ ಸ್ಥಳಾಂತರಿಸುತ್ತಿದೆ. ಅಧಿಕ ಲಾಭ ಮಾಡುವ ಉದ್ದೇಶದಿಂದ ಬಂಡವಾಳಶಾಹಿಗಳು ಗಣಕ ಯಂತ್ರ (ಕಂಪ್ಯೂಟರ್) ಕಂಡು ಹಿಡಿದರು. ಈ ಯಂತ್ರವು ಯುದ್ಧ ನಾಶಪಡಿಸುವಷ್ಟು ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡಿತ್ತು. ಈಗ ಇದಕ್ಕಿಂತ ಅಪಾಯಕಾರಿಯಾದ ‘ಕೃತಕ ಯೋಚಿಸುವ’ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯಂತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಯಂತ್ರವು ಮುಂದಿನ ದಿನಗಳಲ್ಲಿ ಉದ್ಯೋಗ ನಾಶಪಡಿಸುವುದರ ಜತೆಗೆ ಅಭಿಪ್ರಾಯಭೇದ ಹೊಂದಿದವರನ್ನು (‘ಭಯೋತ್ಪಾದಕರು’) ಪತ್ತೆ ಹಚ್ಚಿ ಸ್ವಯಂ ಕೊಂದು ಹಾಕುತ್ತದೆ. ಮುಂದಿನ ದಿನಗಳಲ್ಲಿ ಪ್ರಭುತ್ವಗಳು ಇನ್ನಷ್ಟು ಸರ್ವಾಧಿಕಾರಿಯಾಗಿ ಪರಿವರ್ತನೆಯಾಗುವಲ್ಲಿ ಯಾವ ಸಂದೇಹವೂ ಇಲ್ಲ.

ಆರ್ಥಿಕ ಬಿಕ್ಕಟ್ಟಿನ ಭಾಗವಾಗಿ ಬರುತ್ತಿರುವ ‘ನಗರೀಕರಣ’ ಯೋಜನೆಗಳು, ಕಾರ್ಪೊರೇಟ್ ಕೃಷಿ ಯೋಜನೆಗಳು ವ್ಯಾಪಕ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಲಿವೆ. ಗ್ರಾಮೀಣ ಪ್ರದೇಶಗಳಿಂದ ನಗರಗಳತ್ತ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಲಿದೆ. 2050ರ ವೇಳೆಗೆ 2.5 ಬಿಲಿಯನ್ ಜನರು ಜಗತ್ತಿನಾದ್ಯಂತ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರಗಳನ್ನು ಸೇರುತ್ತಾರೆ. 2025ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯ 45.5 ಶೇ. ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರ ಪ್ರದೇಶಗಳನ್ನು ಸೇರುತ್ತಾರೆ. ಭಾರತದಲ್ಲಿ ಶೇ. 76 ರೈತರು ಕೃಷಿಯನ್ನು ತೊರೆಯಲು ಮುಂದಾಗಿದ್ದಾರೆ. ಚೀನಾ ದೇಶದ 700 ಮಿಲಿಯನ್ ರೈತರು ಕೃಷಿಯನ್ನು ತೊರೆದು ನಗರಗಳಿಗೆ ವಲಸೆ ಹೋಗಿದ್ದಾರೆ. 2030ರ ವೇಳೆಗೆ ಭಾರತದಲ್ಲಿ ನಗರೀಕರಣ ಶೇ. 70 ತಲುಪುತ್ತದೆ. ಇಂದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ.54 ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ. 2050ರ ವೇಳೆಗೆ ಈ ಸಂಖ್ಯೆ ಶೇ. 66 ತಲುಪಲಿದೆ. ಇಂದು ಜಗತ್ತಿನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆ 3.4 ಬಿಲಿಯನ್‌ಗಳಾಗಿವೆ. 2050ರ ವೇಳೆಗೆ ಈ ಸಂಖ್ಯೆ 3.1 ಬಿಲಿಯನ್‌ಗೆ ಇಳಿಮುಖವಾಗಲಿದೆ.

2021ರ ವೇಳೆಗೆ ಕೃತಕ ಯೋಚಿಸುವ ಯಂತ್ರ ಜಗತ್ತಿನಾದ್ಯಂತ ಶೇ. 6 ಉದ್ಯೋಗಗಳನ್ನು ನಾಶಪಡಿಸುತ್ತದೆ. ಈ ಅವಧಿಯಲ್ಲಿ ಅಮೆರಿಕ ದೇಶದಲ್ಲಿ ಒಟ್ಟು 9 ಮಿಲಿಯನ್ ಉದ್ಯೋಗಗಳು ನಾಶವಾಗುತ್ತವೆ. 2021ರ ವೇಳೆಗೆ ಅಮೆರಿಕ ದೇಶದ ಶೇ. 47 ಉದ್ಯೋಗಗಳು ಅಪಾಯದ ಅಂಚಿನಲ್ಲಿವೆ.

ಅಗತ್ಯ ತಂತ್ರಜ್ಞಾನ ಇಲ್ಲದ ಕಾರಣ ಕೋಟ್ಯಂತರ ಜನರ ಉದ್ಯೋಗಗಳನ್ನು ಕಳೆದುಕೊಳ್ಳುವ ದಿನಗಳು ಹತ್ತಿರವಾಗುತ್ತಿವೆ. ಅತ್ಯಾಧುನಿಕ ಯಂತ್ರಗಳು ಮನುಷ್ಯನಷ್ಟೇ ಯೋಚಿಸುವಾಗ ಶೇ. 99 ಉದ್ಯೋಗಗಳು ಭವಿಷ್ಯದಲ್ಲಿ ನಾಶವಾಗುತ್ತವೆ. 2030ರ ವೇಳೆಗೆ ಜಗತ್ತಿನಾದ್ಯಂತ ರೊಬ್ಯಾಟಿಕ್ ಯಂತ್ರಗಳಿಂದ 800 ಮಿಲಿಯನ್ ಉದ್ಯೋಗಿಗಳು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಾರೆ.

ಕಟ್ಟಡ ಉದ್ಯೋಗಗಳಲ್ಲಿ ಹೆಚ್ಚಿನ ಕೂಲಿಯು ಗ್ರಾಮೀಣ ಪ್ರದೇಶಗಳ ಕೃಷಿ ಕಾರ್ಮಿಕರನ್ನು ಆಕರ್ಷಿಸುತ್ತದೆ. ಮೂಲಭೂತ ಸೌಕರ್ಯ ಹಾಗೂ ಕಟ್ಟಡ ಉದ್ಯೋಗಗಳಲ್ಲಿ ಹೆಚ್ಚಿನ ಕೂಲಿಯು ಗ್ರಾಮೀಣ ಪ್ರದೇಶಗಳ ಕೃಷಿ ರಂಗದಲ್ಲಿ ಹೆಚ್ಚಿನ ಕೂಲಿಗೆ ಕಾರಣವಾಗಿದೆಯಾದರೂ ಇದು ಕೃಷಿಯ ನಾಶಕ್ಕೆ ಕಾರಣವಾಗಿದೆ.
‘ಕೃತಕ ಯೋಚಿಸುವ’ ಹಾಗೂ ಕೃಷಿ ಕಾರ್ಪೊರೇಟೀಕರಣದಿಂದ ಉದ್ಭವಿಸುವ ಭೀಕರ ನಿರುದ್ಯೋಗದ ಸಮಸ್ಯೆ, ಬಡತನ ಸಮಸ್ಯೆ ಹಾಗೂ ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಸಾಮ್ರಾಜ್ಯಶಾಹಿಗಳು ಇಂದು ಪ್ರತಿ ಕುಟುಂಬಗಳಿಗೆ ಪ್ರತಿ ತಿಂಗಳು ನಿಗದಿತ ಆದಾಯ (ಯೂನಿವರ್ಸಲ್ ಬೇಸಿಕ್ ಇನ್‌ಕಮ್) ಜಾರಿಗೆ ತರುತ್ತಿವೆ. ಈ ಯೋಜನೆಯು ಜನರನ್ನು ಮತ್ತಷ್ಟು ಗುಲಾಮಗಿರಿಗೆ ನೂಕುವ ಯೋಜನೆಯಾಗಿದೆ.

ಬಂಡವಾಳಶಾಹಿಗಳು ಹೆಚ್ಚು ಲಾಭ ಮಾಡಲು ನೂತನ ಸಂಶೋಧನೆಗಳಲ್ಲಿ ತೊಡಗಿ ಉದ್ಯೋಗಗಳನ್ನು ಕಡಿಮೆ ಮಾಡುವ, ಹೆಚ್ಚು ಉತ್ಪಾದನೆ ಮಾಡುವ ಯಂತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಯಂತ್ರಗಳು ಕಾರ್ಮಿಕರ ಕುಶಲತೆಯನ್ನು ಕಿತ್ತುಕೊಳ್ಳುತ್ತಿವೆ. ಕಾರ್ಮಿಕರು ಕೇವಲ ಮಾರಾಟದ ಸರಕಾಗಿ ಮಾರ್ಪಟ್ಟಿದ್ದಾರೆ. ಇಂದು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಬಂಡವಾಳಶಾಹಿಯಿಂದಲೇ ಅಪಾಯ ಒದಗಿದೆ.

ಹಿಂದುಳಿದ ದೇಶಗಳಲ್ಲಿ ಸಾಮ್ರಾಜ್ಯಶಾಹಿಗಳ ಮಿತ್ರರಾದ ‘ಚುನಾಯಿತ ಸರ್ವಾಧಿಕಾರಿಗಳು’ ಸರ್ವಾಧಿಕಾರಿ ಅಮಲಿನಲ್ಲಿ ತಮ್ಮನ್ನು ತಾವು ಮರೆತುಬಿಟ್ಟಿದ್ದಾರೆ. ಇವರು ಒಂದು ವಿಷಯ ಗಂಭೀರವಾಗಿ ಗಮನದಲ್ಲಿಡಬೇಕು. ತಾವು ಸಾಮ್ರಾಜ್ಯಶಾಹಿಗಳ ಟೊಂಗೆಯ ಮೇಲೆ ಸಂಪೂರ್ಣ ಅವಲಂಬಿತವಾಗಿ ಕುಳಿತಿರುವುದು, ತಾವು ಕುಳಿತಿರುವ ಟೊಳ್ಳು ಟೊಂಗೆಯು ಯಾವಾಗ ಮುರಿದು ಬೀಳುತ್ತೋ ಗೊತ್ತಿಲ್ಲ!! ಸಾಮ್ರಾಜ್ಯಶಾಹಿಗಳು ಚುನಾಯಿತ ಸರ್ವಾಧಿಕಾರಿ ಆಳ್ವಿಕೆ ಹಾಗೂ ಕೇಂದ್ರೀಕೃತ ಪ್ರಭುತ್ವ ಯಂತ್ರಾಂಗದ ಮೂಲಕ ಫ್ಯಾಶಿಸ್ಟ್ ಧೋರಣೆಗಳನ್ನು ಜಾರಿಗೊಳಿಸುತ್ತಿದ್ದಾರೆ.

ಸಾಮ್ರಾಜ್ಯವಾದಿಗಳಿಂದು ಜನರ ಮೇಲೆ ಪರೋಕ್ಷ ಯುದ್ಧ ಮಾಡುತ್ತಿದ್ದಾರೆ. ಮೊದಲನೇ ಮತ್ತು ಎರಡನೇ ಮಹಾಯುದ್ಧ ಒಂದು ನಿರ್ದಿಷ್ಟ ಅವಧಿಯಲ್ಲಿ ಮುಕ್ತಾಯ ಕಂಡವು. ಆದರೆ ಈಗ ನಡೆಯುತ್ತಿರುವ ಜನರ ವಿರುದ್ಧದ, ಯಾವುದೇ ಒಂದು ರಾಷ್ಟ್ರದ ಗಡಿಗೆ ಸೀಮಿತವಾಗಿರದ, ಕಾಣದ ಶತ್ರುವಿನ ವಿರುದ್ಧದ ‘ಭಯೋತ್ಪಾದನೆ ವಿರುದ್ಧ’, ‘ದಾಖಲೆಯಿಲ್ಲದ’ ಗಡಿಯಿಲ್ಲದ ಬಹಳ ದೀರ್ಘಕಾಲದ ವರೆಗೆ ನಡೆಯುವ ಯುದ್ಧವನ್ನು ಸಾಮ್ರಾಜ್ಯವಾದಿಗಳು ಹೆಣೆದಿದ್ದಾರೆ.!

Writer - ಸಿ. ಶ್ರೀರಾಮ್, ಬೆಂಗಳೂರು

contributor

Editor - ಸಿ. ಶ್ರೀರಾಮ್, ಬೆಂಗಳೂರು

contributor

Similar News