ರಣಜಿ: ಕರ್ನಾಟಕಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ ನಿರಾಕರಿಸಿದ ಆದಿತ್ಯ ಶ್ರೀವಾಸ್ತವ

Update: 2020-02-07 18:36 GMT

ಶಿವಮೊಗ್ಗ, ಫೆ.7: ಭರ್ಜರಿ ಶತಕ(192 ರನ್,339ಎಸೆತ)ಸಿಡಿಸಿದ ಆದಿತ್ಯ ಶ್ರೀವಾಸ್ತವ ಆತಿಥೇಯ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ನಿರಾಕರಿಸಿದರು. ನಾಲ್ಕನೇ ಹಾಗೂ ಅಂತಿಮ ದಿನವಾದ ಶುಕ್ರವಾರ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 5 ರನ್ ಮುನ್ನಡೆ ಸಾಧಿಸಿ ಮೂರಂಕವನ್ನು ತನ್ನದಾಗಿಸಿಕೊಂಡಿತು. ಮತ್ತೊಂದೆಡೆ ಕರ್ನಾಟಕ ಕೇವಲ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡು ನಿರಾಸೆ ಅನುಭವಿಸಿತು.

ನವಿಲೆಯಲ್ಲಿರುವ ಕೆಎಸ್‌ಸಿಎ ಸ್ಟೇಡಿಯಂನಲ್ಲಿ ಇಂದು ಮಧ್ಯಪ್ರದೇಶ 4 ವಿಕೆಟ್ ನಷ್ಟಕ್ಕೆ 311 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. 80 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವೆಂಕಟೇಶ್ ಅಯ್ಯರ್ ನಿನ್ನೆಯ ಮೊತ್ತಕ್ಕೆ ಕೇವಲ 6 ರನ್ ಗಳಿಸಿ ಔಟಾದರು. ಹಿಮಾಂಶು ಮಂತ್ರಿ(3), ಕುಮಾರ್ ಕಾರ್ತಿಕೇಯ(0), ರವಿ ಯಾದವ್(0) ಹಾಗೂ ಗೌರವ್ ಯಾದವ್(0)ಪೆವಿಲಿಯನ್‌ಗೆ ಪರೇಡ್ ನಡೆಸಿದರು.

ಮಧ್ಯಪ್ರದೇಶ 381 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕುಲದೀಪ ಸೇನ್(ಔಟಾಗದೆ 23, 19 ಎಸೆತ, 1 ಬೌಂಡರಿ,3 ಸಿಕ್ಸರ್)ಅವರೊಂದಿಗೆ 9ನೇ ವಿಕೆಟ್ ಜೊತೆಯಾಟದಲ್ಲಿ 50 ರನ್(52 ಎಸೆತ)ಸೇರಿಸಿದ ಆದಿತ್ಯ, ಕರ್ನಾಟಕಕ್ಕೆ ಮುನ್ನಡೆ ನಿರಾಕರಿಸಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದಾಗ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಲಾಯಿತು. ಕರುಣ್ ನಾಯರ್ ಪಡೆ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಾತ್ರಿಪಡಿಸಬೇಕಾದರೆ ಮುಂದಿನ ವಾರ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಬರೋಡಾ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಮೂರಂಕವನ್ನು ಗಳಿಸಲೇಬೇಕಾಗಿದೆ.

ಕರ್ನಾಟಕದ ಮೊದಲ ಇನಿಂಗ್ಸ್ 426 ರನ್‌ಗೆ ಉತ್ತರವಾಗಿ 115 ರನ್ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಮಧ್ಯಪ್ರದೇಶದ ಕೈಯಲ್ಲಿ 6 ವಿಕೆಟ್‌ಗಳಿದ್ದವು. ಆದಿತ್ಯ ಹಾಗೂ ವೆಂಕಟೇಶ್ ಅಯ್ಯರ್ 5ನೇ ವಿಕೆಟ್ ಜೊತೆಯಾಟವನ್ನು 200ಕ್ಕೆ ತಲುಪಿಸಿದ ತಕ್ಷಣ ರೋನಿತ್ ಮೋರೆ ಈ ಜೋಡಿಯನ್ನು ಬೇರ್ಪಡಿಸಿದರು. ಅಯ್ಯರ್ ಅವರು ರೋನಿತ್‌ಗೆ ವಿಕೆಟ್ ಒಪ್ಪಿಸಿದರು. 30 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ಹಿಮಾಂಶು ಮಂತ್ರಿ 18 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿ ರೋನಿತ್ ಮೋರೆಗೆ ಕ್ಲೀನ್‌ಬೌಲ್ಡಾದರು. ವೇಗದ ಬೌಲರ್ ಅಭಿಮನ್ಯು ಮಿಥುನ್ ಸತತ ಎರಡು ಎಸೆತಗಳಲ್ಲಿ ಕಾರ್ತಿಕೇಯನ್ ಹಾಗೂ ರವಿ ಯಾದವ್ ವಿಕೆಟ್ ಉಡಾಯಿಸಿದರು. ಎರಡು ಓವರ್ ಬಳಿಕ ಗೌರವ್ ಯಾದವ್ ರನೌಟಾದರು. ಆಗ ಮಧ್ಯಪ್ರದೇಶ 381 ರನ್‌ಗೆ 9 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕರ್ನಾಟಕಕ್ಕೆ ಮುನ್ನಡೆ ಪಡೆಯುವ ಅವಕಾಶವಿತ್ತು. ಆದರೆ, ಕುಲದೀಪ್ ಹಾಗೂ ಆದಿತ್ಯ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಬಾಲಂಗೋಚಿ ಕುಲದೀಪ್ ತಾನೆದುರಿಸಿದ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸಿದರು. ಶ್ರೇಯಸ್ ಗೋಪಾಲ್ ಒಂದೇ ಓವರ್‌ನಲ್ಲಿ 13 ರನ್ ಬಿಟ್ಟುಕೊಟ್ಟರು. ಆದಿತ್ಯ ಹಾಗೂ ಕುಲದೀಪ್ ತಲಾ ಒಂದು ಸಿಕ್ಸರ್ ಸಿಡಿಸಿದರು. ಆದಿತ್ಯ ಕೇವಲ 8 ರನ್‌ನಿಂದ ದ್ವಿಶತಕ ವಂಚಿತರಾಗಿ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಆದಿತ್ಯ 192 ರನ್‌ಗೆ ಔಟಾಗುವ ಮೊದಲು 339 ಎಸೆತಗಳಲ್ಲಿ 25 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು. ಕರ್ನಾಟಕ ವಿರುದ್ಧ ದಿಟ್ಟ ಹೋರಾಟ ನೀಡಿದ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 431 ರನ್ ಗಳಿಸಿ ಆಲೌಟಾಯಿತು. ಕುಲದೀಪ್ ಔಟಾಗದೆ 23 ರನ್ ಗಳಿಸಿ ತನ್ನ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿ ಕೊಟ್ಟ ತೃಪ್ತಿಯೊಂದಿಗೆ ಪೆವಿಲಿಯನ್‌ನತ್ತ ಸಾಗಿದರು. ಕರ್ನಾಟಕದ ಪರ ಮಿಥುನ್(3-69)ಯಶಸ್ವಿ ಬೌಲರ್ ಎನಿಸಿಕೊಂಡರು. ರೋನಿತ್ ಮೋರೆ(2-93) ಹಾಗೂ ಕೆ.ಗೌತಮ್(2-99)ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News