ಸಿಎಎ, ಎನ್‌ಆರ್‌ಸಿ ಸಂವಿಧಾನ-ಗಾಂಧಿ ವಿಚಾರಧಾರೆಗಳಿಗೆ ವಿರುದ್ಧ: ಇತಿಹಾಸ ತಜ್ಞ ರಾಮಚಂದ್ರ ಗುಹಾ

Update: 2020-02-08 12:15 GMT

ಬೆಂಗಳೂರು, ಫೆ.8: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ಎನ್‌ಆರ್‌ಸಿ, ಎನ್‌ಪಿಆರ್ ಸಂವಿಧಾನ ವಿರೋಧಿಯಷ್ಟೇ ಅಲ್ಲ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ವಿಚಾರಧಾರೆಗಳಿಗೂ ವಿರುದ್ಧವಾಗಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.

ಶನಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್’ ವಿರುದ್ಧ ಪ್ರಜಾಧಿಕಾರ ಹೋರಾಟ ಸಮಿತಿಯು ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿ ಎಲ್ಲ ಸಂದರ್ಭಗಳಲ್ಲೂ ಗಾಂಧೀಜಿಯವರ ವಿಚಾರಗಳನ್ನು ಉಲ್ಲೇಖಿಸುತ್ತಾರೆ. ಆದರೆ, ಹಿಂದೂ-ಮುಸ್ಲಿಮರ ಸೌಹಾರ್ದತೆಯ ವಿಚಾರದಲ್ಲಿ ಗಾಂಧಿ ಪ್ರತಿಪಾದಿಸಿದ ವಿಚಾರಗಳ ಬಗ್ಗೆ ಮಾತ್ರ ಮೋದಿ ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ ಎಂದು ರಾಮಚಂದ್ರ ಗುಹಾ ಹೇಳಿದರು.

ಮಹಾತ್ಮ ಗಾಂಧೀಜಿ ಹಿಂದೂ-ಮುಸ್ಲಿಮರ ಏಕತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಆದರೆ, ಈ ಸರಕಾರ ಗಾಂಧೀಜಿಯ ವಿಚಾರಗಳನ್ನು ನಾಶ ಮಾಡಲು ಹೊರಟಿದೆ. ದೇಶ ಎದುರಿಸುತ್ತಿರುವ ಆರ್ಥಿಕ ಕುಸಿತ, ಉದ್ಯೋಗ ನಷ್ಟ, ಬೆಲೆ ಏರಿಕೆ ಸೇರಿದಂತೆ ಮೂಲ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜಕೀಯ ಪಕ್ಷಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಜನತೆ ಮಾತ್ರ ಈ ಚಳವಳಿಯನ್ನು ಮುಂದುವರೆಸಬೇಕಿದೆ. ಭಾರತದ ಅಸ್ಮಿತೆಯನ್ನು ಉಳಿಸಲು ನಡೆಯುತ್ತಿರುವ ಹೋರಾಟ ಇದಾಗಿದೆ ಎಂಬುದನ್ನು ನಾವು ಮರೆಯಬಾರದು ಎಂದು ರಾಮಚಂದ್ರ ಗುಹಾ ಹೇಳಿದರು.

ಸಿಎಎ ಜಾರಿಗೆ ಇವತ್ತು ನಾವು ಮೌನ ಸಮ್ಮತಿ ನೀಡಿದರೆ, ಹಿಂದೂ-ಮುಸ್ಲಿಮ್ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಪುರುಷ-ಮಹಿಳೆ, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಂಬ ವಿಭಜನೆಗಳು ನಡೆಯಬಹುದು. ಒಂದು ಮಹತ್ವದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ತಿಳಿಸಿದರು. ದೊರೆಸ್ವಾಮಿಯನ್ನು 1980ರಲ್ಲಿ ಮೊಟ್ಟಮೊದಲ ಬಾರಿಗೆ ನಾನು ಭೇಟಿಯಾಗಿದ್ದೆ. ಆಗ ನಾನು ವಿದ್ಯಾರ್ಥಿಯಾಗಿದ್ದೆ. ಅವತ್ತಿನಿಂದ ಈವತ್ತಿನವರೆಗೆ ದೊರೆಸ್ವಾಮಿ ನಿರಂತರವಾಗಿ ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಾಗಿ ಎಲ್ಲ ರೀತಿಯ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದು ರಾಮಚಂದ್ರ ಗುಹಾ ತಿಳಿಸಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ರಾಮಚಂದ್ರ ಗುಹಾ ಉತ್ತಮ ಇತಿಹಾಸ ತಜ್ಞ, ಸುಳ್ಳು ಹೇಳುವುದಿಲ್ಲ, ಉತ್ಪ್ರೇಕ್ಷೆ ಮಾಡಲ್ಲ, ಇದ್ದದ್ದನ್ನು ಇದ್ದ ಹಾಗೇ ಹೇಳುವ ಜಾಯಮಾನದವರು. ಮಹಾತ್ಮ ಗಾಂಧೀಜಿಯ ಸತ್ಯಾಗ್ರಹದ ಚರಿತ್ರೆಯನ್ನು ಸಂಪೂರ್ಣವಾಗಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.

ಸಿಎಎ ಹಾಗೂ ಎನ್‌ಆರ್‌ಸಿಯಿಂದ ಕೇವಲ ಮುಸ್ಲಿಮರಿಗಷ್ಟೇ ಅಲ್ಲ, ಹಿಂದುಳಿದ ವರ್ಗದವರು, ಆದಿವಾಸಿಗಳು ಹಾಗೂ ದಲಿತರು ಸೇರಿದಂತೆ ಪ್ರತಿಯೊಬ್ಬರೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ವೋಟ್ ಬ್ಯಾಂಕ್ ರಾಜಕಾರಣಕ್ಕೆ ತಂದಿರುವ ಕಾನೂನೇ ಹೊರತು, ದೇಶದ ಪ್ರಜೆಗಳ ಅಭಿವೃದ್ಧಿಯ ದೃಷ್ಟಿಯಿಂದಲ್ಲ ಎಂದು ದೊರೆಸ್ವಾಮಿ ವಾಗ್ದಾಳಿ ನಡೆಸಿದರು.

ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸಬಾರದು. ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಮುಂಬರುವ ಚುನಾವಣೆಯಲ್ಲಿ ವಿಭಜನಕಾರಿ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಆಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಅವರು ಹೇಳಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ನಡೆಯುತ್ತಿರುವ ಹೋರಾಟವು ನನಗೆ ತುರ್ತು ಪರಿಸ್ಥಿತಿಯ ಹೋರಾಟದ ದಿನಗಳನ್ನು ಸ್ಮರಿಸಿಕೊಳ್ಳುವಂತೆ ಮಾಡಿದೆ. ಹಿಂದೂ-ಮುಸ್ಲಿಮರು ಸಹೋದರತೆಯ ಭಾವನೆಯಿಂದ ಈ ಹೋರಾಟಕ್ಕೆ ಪರಸ್ಪರ ಕೈ ಜೋಡಿಸುವಂತಾಗಿದೆ ಎಂದು ಅವರು ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ ಗೌಡ, ಕೆಪಿಸಿಸಿ ಮುಖಂಡ ನಟರಾಜಗೌಡ, ತಾರಾ ಕೃಷ್ಣಮೂರ್ತಿ, ಭವ್ಯ ನರಸಿಂಹಮೂರ್ತಿ, ಜೆಡಿಎಸ್ ಮುಖಂಡ ಶಫೀಉಲ್ಲಾ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News