×
Ad

ನಮ್ಮ ಮೆಟ್ರೋ 2ನೆ ಹಂತ 2021ಕ್ಕೆ ಪೂರ್ಣ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-02-08 17:57 IST

ಬೆಂಗಳೂರು, ಫೆ. 8: ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ಎರಡನೆ ಹಂತ 2021ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, 2025ರ ವೇಳೆ ನಮ್ಮ ಮೆಟ್ರೋ ವಿಸ್ತೀರ್ಣವನ್ನು 300 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ಬಿಬಿಎಂಪಿಯಿಂದ ಏರ್ಪಡಿಸಿದ್ದ ಯಾಂತ್ರಿಕೃತ ಕಸ ಗುಡಿಸುವ ವಾಹನ ಹಾಗೂ 6 ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ 2023ರೊಳಗೆ ಪೂರ್ಣಗೊಳ್ಳಲಿದ್ದು, ಪೂರ್ವ ದಿಕ್ಕಿನ ವೈಟ್‌ಫೀಲ್ಡ್, ಐಟಿಪಿಎಲ್, ಪೀಣ್ಯ ಕೈಗಾರಿಕಾ ಪ್ರದೇಶವನ್ನು ಸಂಯೋಜಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ, 2022ರ ವೇಳೆ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರಕಾರ ಬೆಂಗಳೂರಿಗೆ ಸಬ್ ಅರ್ಬನ್ ರೈಲ್ವೆ ಯೋಜನೆ ಮಂಜೂರು ಮಾಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೈರ್ಮಲ್ಯಕ್ಕೆ ಆದ್ಯತೆ: ಬೆಂಗಳೂರು ನಗರ 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ತ್ಯಾಜ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯ ತಡೆಗಟ್ಟಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಸರಕಾರದ ಆದ್ಯತೆ ನೀಡಿದೆ. ರಸ್ತೆಗಳಲ್ಲಿನ ವಾಹನ ದಟ್ಟಣೆ ನಡುವೆ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯದಲ್ಲಿ ತೊಡಗುವುದರಿಂದ ಅವರ ಆರೋಗ್ಯ ಹದಗೆಡುವ ಅಥವಾ ಅಪಘಾತಕ್ಕೀಡಾಗುವ ಸಂಭವ ಹೆಚ್ಚು. ಹೀಗಾಗಿ ರಸ್ತೆಗಳ ಸ್ವಚ್ಛತಾ ಕಾರ್ಯಕ್ಕೆ 15 ಯಾಂತ್ರಿಕ ಕಸ ಗುಡಿಸುವ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಪಾಲಿಕೆ ಸಮಾಜಮುಖಿ ಕಾರ್ಯಗಳಿಗೆ ಯಶಸ್ಸು ದೊರೆಯಲಿ ಎಂದು ಅವರು, ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು, ಈ ನಗರದ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧ ಎಂದರು.

ನಾಗರಿಕರ ದೂರುಗಳು, ಕುಂದುಕೊರತೆಗಳಿಗೆ ತಕ್ಷಣ ಪರಿಹರಿಸಿಕೊಳ್ಳಲು ಅನುಕೂಲ ಆಗುವಂತಹ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಅದನ್ನೂ ಬಿಡುಗಡೆ ಮಾಡಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಸಚಿವರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಆಯುಕ್ತ ಅನಿಲ್‌ಕುಮಾರ್ ಈ ವೇಳೆ ಹಾಜರಿದ್ದರು.

ಬಹುಪಯೋಗಿ-2.0: ‘ಬಿಬಿಎಂಪಿ, ಬೆಸ್ಕಾಂ, ಬಿಎಂಆರ್‌ಡಿಎ, ಬಿಡಿಎ, ಬಿಎಂಆರ್‌ಸಿಎಲ್, ಜಲ ಮಂಡಳಿ, ಬಿಎಂಟಿಸಿ ಸೇರಿದಂತೆ ನಗರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ದೂರು ನೀಡಲು 2.0 ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು, ಜನರ ಸಮಸ್ಯೆಗಳ ಪರಿಹಾರಕ್ಕೆ ಇದು ನೆರವಾಗಲಿದೆ’

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News