ಹೆಚ್‌ಡಿಕೆ- ಸಿದ್ದರಾಮಯ್ಯ ಒಳ ಜಗಳದಿಂದ ಕಾಂಗ್ರೆಸ್-ಜೆಡಿಎಸ್ ಬೀದಿಗೆ: ಸಚಿವ ಆರ್.ಅಶೋಕ್
ಬೆಂಗಳೂರು, ಫೆ. 8: ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ಒಳ ಜಗಳದಿಂದ ಕಾಂಗ್ರೆಸ್-ಜೆಡಿಎಸ್ ಬೀದಿಗೆ ಬಂದಿದ್ದು, ಅವರಿಬ್ಬರೇ ಬಹಿರಂಗವಾಗಿ ನಿಂದನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ ಎಂದು ಎಚ್‌ಡಿಕೆ ಹೇಳುತ್ತಿದ್ದಾರೆ. ಅವರಿಬ್ಬರೂ ಯಾವುದೇ ಕಾರಣಕ್ಕೂ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳದ್ದು ಮುಗಿದ ಅಧ್ಯಾಯ. ದೇಶ ಮತ್ತು ರಾಜ್ಯದ ಜನತೆ ಆ ಎರಡೂ ಪಕ್ಷಗಳನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಟ್ಟಿದ್ದಾರೆ. ಹೀಗಾಗಿ ಇಬ್ಬರು ನಾಯಕರು ಪುನಃ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿಲ್ಲ ಎಂದು ಟೀಕಿಸಿದರು.
ದೇಶ ಮತ್ತು ಕರ್ನಾಟಕ ರಾಜ್ಯದ ಜನತೆ ಬಿಜೆಪಿಯನ್ನು ಒಪ್ಪಿ ನಮಗೆ ಅಧಿಕಾರ ನೀಡಿದ್ದಾರೆ. ಜನರಿಗೆ ಕಾಂಗ್ರೆಸ್-ಜೆಡಿಎಸ್ ಬೇಡವಾದ ಪಕ್ಷಗಳಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಪಕ್ಷಗಳಲ್ಲಿ ಇರುವವರೆ ಖಾಲಿ ಮಾಡಲಿದ್ದಾರೆ ಎಂದು ಅಶೋಕ್ ಭವಿಷ್ಯ ನುಡಿದರು.
ಸಿಎಂ ಪರಮಾಧಿಕಾರ: ಖಾತೆ ಹಂಚಿಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಪರಮಾಧಿಕಾರ. ಯಾರಿಗೆ ಯಾವ ಖಾತೆ ನೀಡಬೇಕು ಎಂದು ಅವರೇ ತೀರ್ಮಾನ ಮಾಡಲಿದ್ದಾರೆ. ಅಲ್ಲದೆ, ನೂತನ ಸಚಿವರಿಗೆ ಶೀಘ್ರದಲ್ಲೇ ಸಿಎಂ ಖಾತೆ ಹಂಚಿಕೆ ಮಾಡಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.