×
Ad

ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಸಂಪುಟದಲ್ಲಿ ಚರ್ಚೆ: ಸಿಎಂ ಬಿಎಸ್‌ವೈ

Update: 2020-02-08 19:58 IST

ಬೆಂಗಳೂರು, ಫೆ. 8: ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶನಿವಾರ ಸೆಂಟ್ರಲ್ ಕಾಲೇಜು ಆವರಣದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಏರ್ಪಡಿಸಿದ್ದ ಸಣ್ಣ ಕೈಗಾರಿಕೋದ್ಯಮಿಗಳಿಗೆ ಕೆಎಸ್‌ಎಸ್‌ಐಡಿಸಿಯಿಂದ ನೆಲಮಂಗಲ ಮತ್ತು ಹರಿಹರ ಕೈಗಾರಿಕಾ ವಸಾಹತುಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಈ ಹಿಂದೆಯೇ ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ಮನ್ನಾ ನಿರ್ಧಾರ ಆಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಅದು ಸಾದ್ಯವಾಗಿರಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಉದ್ಯಮಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಸರಕಾರ 2020-23ನೆ ಸಾಲಿನ ನೂತನ ಕೈಗಾರಿಕಾ ನೀತಿ ಸಿದ್ದಪಡಿಸಿದೆ. ಶೀಘ್ರದಲ್ಲೇ ಅದನ್ನು ಪ್ರಕಟಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ. ಭೂಮಿ, ನೀರು, ವಿದ್ಯುತ್ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ ಎಂದರು

ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಇದು ತಾತ್ಕಾಲಿಕವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದು ಎಂದ ಅವರು, ಕೈಗಾರಿಕೆಗಳಲ್ಲಿ ಏರಿಳಿತ ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಅದೇ ಪರಿಸ್ಥಿತಿ ಇರುತ್ತದೆ ಎಂದು ಭಾವಿಸಬೇಡಿ ಎಂದರು.

ಕರ್ನಾಟಕ ದೇಶದಲ್ಲೇ ಸಣ್ಣ ಉದ್ದಿಮೆಗಳಿಗೆ ಅತ್ಯುತ್ತಮ ತಾಣ. ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣವಿದೆ. ರಾಜ್ಯದಲ್ಲಿ ಒಟ್ಟು 7ಲಕ್ಷ ಸಣ್ಣ ಕೈಗಾರಿಕೆಗಳಿವೆ. ಆ ಪೈಕಿ ಕೆಲವು ಕೈಗಾರಿಕೆಗಳು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳನ್ನು ಬಗೆಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಸಚಿವ ಕೆ.ಗೋಪಾಲಯ್ಯ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು ಸೇರಿದಂತೆ ಸಂಘ ಪದಾಧಿಕಾರಿಗಳು ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News