ಹಣ ಹಂಚಿಕೆ ವಿಚಾರದಲ್ಲಿ ಯುವಕನ ಕೊಲೆ ಪ್ರಕರಣ: ಆರೋಪಿ ಬಂಧನ

Update: 2020-02-08 14:50 GMT

ಬೆಂಗಳೂರು, ಫೆ.8: ಕಳವು ಮಾಡಿದ್ದ ಮೊಬೈಲ್ ಮಾರಾಟ ಮಾಡುವ ವಿಷಯಕ್ಕೆ ಹಲ್ಲೆ ನಡೆಸಿ, ಯುವಕನೋರ್ವನನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಚಂದಾಪುರ ರವಿತೇಜಾ(20) ಕೊಲೆಯಾದ ಯುವಕ ಎಂದು ತಿಳಿದುಬಂದಿದ್ದು, ಕೃತ್ಯವೆಸಗಿರುವ ಆರೋಪದಡಿ ರಾಕೇಶ್ ಡ್ಯಾನಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ರಾಕೇಶ್ ಡ್ಯಾನಿ, ರವಿತೇಜಾ ಇಬ್ಬರು ಚಂದಾಪುರ ನಿವಾಸಿಗಳಾಗಿದ್ದು, ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇತ್ತೀಚಿಗೆ ಒಂದು ಮೊಬೈಲ್ ಕಳ್ಳತನ ಮಾಡಿದ್ದು, ಅದನ್ನು ಮಾರಾಟ ಮಾಡಿದ್ದಾರೆ. ಆದರೆ, ಹಣ ಹಂಚಿಕೆ ವಿಚಾರದಲ್ಲಿ ಈ ಇಬ್ಬರಿಗೂ ಜಗಳ ನಡೆದಿದೆ. ಬಳಿಕ ಜ.31 ರಂದು ಆನೇಕಲ್ ಮರಸೂರು ರೈಲ್ವೆ ನಿಲ್ದಾಣದ ಬಳಿ ರವಿತೇಜಾನನ್ನು ಮಾತನಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ಬಳಿಕ ರೈಲ್ವೆ ಹಳಿ ಮೇಲೆ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸರು ರೈಲ್ವೆಗೆ ತಲೆಕೊಟ್ಟು ಸತ್ತಿದ್ದಾನೆ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಕೊಲೆಯಾದ ರವಿತೇಜಾ ಅವರ ತಂದೆ ನನ್ನ ಮಗನ ಸಾವು ಅಸಹಜ ಸಾವಲ್ಲ. ಇದು ಕೊಲೆ ಎಂದು ದೂರು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಬೈಯ್ಯಪ್ಪನ ಹಳ್ಳಿ ರೈಲ್ವೆ ಪೊಲೀಸರಿಗೆ ಕೊಲೆಯಾಗಿದೆ ಎಂಬುದು ದೃಢಪಟ್ಟಿದೆ. ಈ ಸಂಬಂಧ ರಾಕೇಶ್ ಡ್ಯಾನಿಯನ್ನು ಬಂಧಿಸಿ ಉಳಿದ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News