ಮತ್ತೆ ಒಂದಾದ ದಿಗ್ಗಜ ಆಟಗಾರರು, ಪಾಂಟಿಂಗ್ ತಂಡಕ್ಕೆ ಜಯ

Update: 2020-02-09 18:38 GMT

ಮೆಲ್ಬೋರ್ನ್, ಫೆ.9: ಆಸ್ಟ್ರೇಲಿಯದ ಕಾಡ್ಗಿಚ್ಚಿನ ಪರಿಹಾರ ನಿಧಿ ಸಂಗ್ರಹಕ್ಕೆ ರವಿವಾರ ನಡೆದ ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ವಿಶ್ವದ ಎಲ್ಲ ದಿಗ್ಗಜ ಕ್ರಿಕೆಟಿಗರು ಒಂದೆಡೆ ಸೇರಿದ್ದು, ರಿಕಿ ಪಾಂಟಿಂಗ್ ನೇತೃತ್ವದ ತಂಡ ಗಿಲ್‌ಕ್ರಿಸ್ಟ್ ನಾಯಕತ್ವದ ತಂಡವನ್ನು ಮಣಿಸಿತು. ವೆಸ್ಟ್‌ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಔಟಾಗದೆ 30 ರನ್ ಗಳಿಸಿ ತನ್ನಲ್ಲಿನ್ನೂ ಕ್ರಿಕೆಟ್ ಬಾಕಿ ಇದೆ ಎಂದು ತೋರಿಸಿಕೊಟ್ಟರು. ಮೆಲ್ಬೋರ್ನ್‌ನ ಜಂಕ್ಷನ್ ಓವಲ್‌ನಲ್ಲಿ ಸ್ಟಾರ್ ಆಟಗಾರರು ಪಾಲ್ಗೊಂಡಿದ್ದ ಪಂದ್ಯದಲ್ಲಿ ಕವರ್ ಡ್ರೈವ್ ಹಾಗೂ ಸ್ಟೈಟ್ ಡ್ರೈವ್‌ನ ಮೂಲಕ ಎರಡು ಸಿಕ್ಸರ್ ಸಹಿತ ಹಲವು ಹೊಡೆತ ಬಾರಿಸಿದ ಲಾರಾ ಇನ್ನೊಬ್ಬ ಆಟಗಾರನಿಗೆ ಬ್ಯಾಟಿಂಗ್‌ಗೆ ಅನುವು ಮಾಡಿಕೊಡಲು ಆಟದಿಂದ ನಿವೃತ್ತಿಯಾದರು. ಜಸ್ಟಿನ್ ಲ್ಯಾಂಗರ್ ಔಟಾದ ಬೆನ್ನಿಗೇ ಕ್ರೀಸ್‌ಗೆ ಇಳಿದ ನಾಯಕ ರಿಕಿ ಪಾಂಟಿಂಗ್ 26 ರನ್ ಗಳಿಸಿದ್ದು, ಪಾಂಟಿಂಗ್ ಪಡೆ 10 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 104 ರನ್ ಗಳಿಸಿತು. ಗಿಲ್‌ಕ್ರಿಸ್ಟ್ ರನ್ ಚೇಸಿಂಗ್ ವೇಳೆ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಮತ್ತೊಂದೆಡೆ ಶೇನ್ ವ್ಯಾಟ್ಸನ್ 9 ಎಸೆತಗಳಲ್ಲಿ 30 ರನ್ ಗಳಿಸಿದರು. ಪಾಕ್ ಲೆಜೆಂಡ್ ವಸೀಂ ಅಕ್ರಂ ಅವರು ವ್ಯಾಟ್ಸನ್‌ರಿಂದ ಚೆನ್ನಾಗಿ ದಂಡಿಸಲ್ಪಟ್ಟರು. ಗಿಲ್‌ಕ್ರಿಸ್ಟ್ ಇಲೆವೆನ್ ತಂಡ ಗೆಲುವಿಗಾಗಿ ಸರ್ವಪ್ರಯತ್ನ ನಡೆಸಿದರೂ ಪಾಂಟಿಂಗ್ ಬಳಗ 1 ರನ್‌ನಿಂದ ಜಯಶಾಲಿಯಾಯಿತು.

‘‘ಎಲ್ಲ ಆಟಗಾರರು ಈ ಪಂದ್ಯವನ್ನು ಆಡಿ ಸಂತಸಗೊಂಡರು. ಮತ್ತೊಮ್ಮೆ ನಾವೆಲ್ಲರೂ ಏಕೆ ಆಡಬಾರದು ಎಂದು ಪ್ರಶ್ನಿಸಿದರು. ಹಳೆಯ ಸ್ನೇಹಿತರೊಂದಿಗೆ ಮತ್ತೊಮ್ಮೆ ಪಂದ್ಯ ಆಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಪಾಂಟಿಂಗ್ ಹೇಳಿದ್ದಾರೆ. ಆಸ್ಟ್ರೇಲಿಯ ಹಾಗೂ ವಿಶ್ವದೆಲ್ಲೆಡೆಯ ಜನತೆಯ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು. ನಾವು 7.7 ಆಸ್ಟ್ರೇಲಿಯನ್ ಡಾಲರ್‌ನಷ್ಟು ನಿಧಿ ಸಂಗ್ರಹಿಸಿದ್ದು, ಇತ್ತೀಚೆಗೆ ಸಂಭವಿಸಿದ ಕಾಡ್ಗಿಚ್ಚಿ ನಲ್ಲಿ ಸಂತ್ರಸ್ತರಾಗಿರುವ ಸಮುದಾಯಗಳು ಹಾಗೂ ಕುಟುಂಬಗಳಿಗೆ ಇದನ್ನು ಹಂಚುತ್ತೇವೆ ಎಂದು ಚಾರಿಟಿ ಪಂದ್ಯದ ಬಳಿಕ ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮಾಡಿದೆ.

 ಆಸ್ಟ್ರೇಲಿಯದಲ್ಲಿ ಸಂಭವಿಸಿರುವ ಕಾಡ್ಗಿಚ್ಚಿನಲ್ಲಿ ಕನಿಷ್ಠ 30 ಜನರು ಪ್ರಾಣ ಕಳೆದುಕೊಂಡರೆ, ಸಾವಿರಾರು ಮನೆಗಳು ಹಾನಿಗೀಡಾಗಿವೆ. ಪೂರ್ವ ಆಸ್ಟ್ರೇಲಿಯದಾದ್ಯಂತ ಇತ್ತೀಚೆಗೆ ಮಳೆ ಬಂದ ಬಳಿಕವೇ ಕಾಡಿನ ಬೆಂಕಿ ನಿಯಂತ್ರಣಕ್ಕೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News