4.5 ಲಕ್ಷ ಸ್ವಚ್ಛ ಶೌಚಾಲಯ ಮಂಗಮಾಯ!

Update: 2020-02-10 04:22 GMT
ಸಾಂದರ್ಭಿಕ ಚಿತ್ರ

ಭೋಪಾಲ್, ಫೆ.10: ಮಧ್ಯಪ್ರದೇಶದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ್ದ 4.5 ಲಕ್ಷಕ್ಕೂ ಹೆಚ್ಚು ಶೌಚಾಲಯಗಳು ನಾಪತ್ತೆಯಾಗಿದ್ದು, ಇದರ ನಿರ್ಮಾಣಕ್ಕೆ ಆದ 540 ಕೋಟಿ ರೂ. ದುರ್ಬಳಕೆಯಾಗಿದೆ. ಹೀಗೆ ಶೌಚಾಲಯ ನಿರ್ಮಾಣದ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

ಪ್ರತಿ ಶೌಚಾಲಯದ ಜಿಪಿಎಸ್ ಟ್ಯಾಗ್ ಮಾಡಿದ ಫೋಟೊಗಳಿದ್ದರೂ, ಈ ಶೌಚಾಲಯಗಳು ಇದೀಗ ಎಲ್ಲೂ ಕಾಣಿಸುತ್ತಿಲ್ಲ. ಆದರೆ ಸರ್ಕಾರ ಈ ಶೌಚಾಲಯಕ್ಕೆ ನಿರ್ಮಾಣವಾದ ಪ್ರತಿ ಪೈಸೆಯನ್ನೂ ವಸೂಲಿ ಮಾಡಿಕೊಳ್ಳಲು ಮುಂದಾಗಿದೆ. 2017ರಲ್ಲಿ ಗುಣಾ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಶೌಚಾಲಯ ಬಾಗಿಲುಗಳ ಹಗರಣವನ್ನು ಈ ಬೃಹತ್ ಹಗರಣ ನೆನಪಿಸಿದೆ. 42 ಸಾವಿರ ಶೌಚಾಲಯಗಳಿಗೆ ನಿಗದಿಗಿಂತ 10 ಕೆ.ಜಿ. ಕಡಿಮೆ ತೂಕದ ಕಬ್ಬಿಣದ ಬಾಗಿಲುಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತರ ರೂಪಾಯಿ ಲೂಟಿ ನಡೆದಿತ್ತು.

ಇದೀಗ ಮತ್ತೊಂದು ಹಗರಣದಲ್ಲಿ 2012ರಿಂದ 2018ರ ಅವಧಿಯಲ್ಲಿ ಈ ಶೌಚಾಲಯಗಳು ನಿರ್ಮಾಣವಾಗಿವೆ ಎನ್ನಲಾಗಿದೆ. ಆದರೆ ಇಂದು ಯಾವ ಶೌಚಾಲಯದ ಕುರುಹು ಕೂಡಾ ಉಳಿದಿಲ್ಲ. ಹಣ ಪಡೆಯುವ ಸಲುವಾಗಿ ಪಕ್ಕದ ಮನೆಯ ನಿರ್ಮಾಣ ಹಂತದ ಶೌಚಾಲಯದ ಫೋಟೊ ತೆಗೆದು ಕಳುಹಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬೇತುಲ್ ಬುಡಕಟ್ಟು ಲಕ್ಕಡ್‌ಜಾಮ್ ಪಂಚಾಯತ್‌ನಲ್ಲಿ ಕೆಲವರು ದೂರು ನೀಡುವ ಮೂಲಕ ಮೊದಲು ಈ ಅವ್ಯವಹಾರ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡಸಿದಾಗ ಸ್ವಚ್ಛ ಭಾರತ ಫಲಾನುಭವಿಗಳು ಎನ್ನಲಾದ ಎಷ್ಟೋ ಮಂದಿಗೆ ತಮ್ಮ ಮನೆಗೆ ಶೌಚಾಲಯ ಈ ಯೋಜನೆಯಡಿ ನಿರ್ಮಾಣವಾಗಿದೆ ಎನ್ನುವುದು ಕೂಡಾ ತಿಳಿದಿಲ್ಲ ಎನ್ನುವ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಕೇವಲ ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಈ ಶೌಚಾಲಯಗಳಿವೆ.

ಆ ಬಳಿಕ ರಾಜ್ಯಾದ್ಯಂತ ಈ ಬಗ್ಗೆ ತನಿಖೆ ನಡೆಸಿದಾಗ 4.5 ಲಕ್ಷ ಶೌಚಾಲಯಗಳು "ಕಾಗದ ಶೌಚಾಲಯ"ಗಳಾಗಿರುವುದು ಕಂಡುಬಂದಿದೆ. ಇವುಗಳ ಮೌಲ್ಯ 540 ಕೋಟಿ ಎಂದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News