ಬಾಂಗ್ಲಾದೇಶಿಯರಿಂದ ಅಸ್ಸಾಮಿ ಮುಸ್ಲಿಮರನ್ನು ಪ್ರತ್ಯೇಕಿಸಲು ಸಮೀಕ್ಷೆ: ಅಸ್ಸಾಂ ಸರಕಾರದ ನಿರ್ಧಾರ

Update: 2020-02-10 15:38 GMT

ಗುವಾಹಟಿ,ಫೆ.10: ಆಗಿನ ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನ ಅಥವಾ ಈಗಿನ ಬಾಂಗ್ಲಾದೇಶದಿಂದ ವಲಸೆ ಬಂದಿರುವವರಿಂದ ರಾಜ್ಯದ ಸ್ಥಳೀಯ ಮುಸ್ಲಿಮರನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಸಾಮಾಜಿಕ-ಆರ್ಥಿಕ ಗಣತಿಯನ್ನು ನಡೆಸಲು ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರವು ನಿರ್ಧರಿಸಿದ್ದು,ಇದು ರಾಜ್ಯದಲ್ಲಿ ಹೊಸ ವಿವಾದವನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಅಸ್ಸಾಮಿನ 3.55 ಕೋ.ಜನಸಂಖ್ಯೆಯಲ್ಲಿ ಮುಸ್ಲಿಮರು ಸುಮಾರು ಶೇ.34.22ರಷ್ಟಿದ್ದಾರೆ. ಇದರಲ್ಲಿ ಸುಮಾರು 40 ಲಕ್ಷ ಸ್ಥಳೀಯ ಮುಸ್ಲಿಮರು ಸೇರಿದ್ದಾರೆ. 2001ರಲ್ಲಿ ಶೇ.47ರಷ್ಟಿದ್ದ ಅಸ್ಸಾಮಿನ ಮೂಲನಿವಾಸಿಗಳ ಪ್ರಮಾಣ ವಲಸಿಗರ ಹರಿವಿನಿಂದಾಗಿ 2016ರಲ್ಲಿ ಶೇ.40.45ಕ್ಕೆ ಕುಸಿದಿದೆ.

ಸಮೀಕ್ಷೆಗೆ ಮುನ್ನ ಸಂಬಂಧಿಸಿದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಅಸ್ಸಾಂ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮೂಮಿನುಲ್ ಓವಾಲ್ ಅವರು,ಸ್ಥಳೀಯ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ಮುಸ್ಲಿಮರ ಹೆಸರುಗಳು ಒಂದೇ ರೀತಿಯಾಗಿವೆ. ಇದರಿಂದಾಗಿ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕಾಗಿ ಸ್ಥಳೀಯ ಮುಸ್ಲಿಮರನ್ನು ಗುರುತಿಸುವಲ್ಲಿ ಸರಕಾರವು ಸಮಸ್ಯೆ ಎದುರಿಸುತ್ತಿದೆ. ಸರಕಾರವು ಸ್ಥಳೀಯ ಮುಸ್ಲಿಮರ ಏಳಿಗೆಗೆ ಬದ್ಧವಾಗಿರುವುದರಿಂದ ಅವರು ಪ್ರತ್ಯೇಕ ಗುರುತು ಹೊಂದಿರುವುದು ಅಗತ್ಯವಾಗಿದೆ ಎಂದರು.

ಗಣತಿಗೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ತಿಳಿಸಿದ ಅವರು,ಹಾಲಿ ಹಣಕಾಸಿನ ವರ್ಷದಲ್ಲಿಯೇ ಗಣತಿ ಆರಂಭಗೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.

ಅಸ್ಸಾಮಿನ ಜನಸಂಖ್ಯೆಯಲ್ಲಿ ಶೇ.61.47 ಹಿಂದುಗಳು,ಶೇ.34.22 ಮುಸ್ಲಿಮರು, ಶೇ.3.74 ಕ್ರೈಸ್ತರು,ಶೇ.0.18 ಬೌದ್ಧರು,ಶೇ.0.08 ಜೈನರು ಮತ್ತು ಶೇ.0.09ರಷ್ಟು ಇತರ ಧರ್ಮಗಳಿಗೆ ಸೇರಿದವರಿದ್ದರೆ,ಶೇ.0.16ರಷ್ಟು ಜನರು ಯಾವುದೇ ಧರ್ಮವನ್ನು ಘೋಷಿಸಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News