ಲಾಕಪ್ ಸಾವುಗಳ ಸಂಖ್ಯೆಯನ್ನು ಇಳಿಸುವುದು ಹೇಗೆ?

Update: 2020-02-10 18:34 GMT

ಓರ್ವ ಭದ್ರತಾ ಸಿಬ್ಬಂದಿಯಾದ ಪ್ರದೀಪ್ ತೋಮರ್ 2019ರ ಅಕ್ಟೋಬರ್ 13ರಂದು ಉತ್ತರ ಪ್ರದೇಶದ ಹಾರ್ಪುರ್ ಜಿಲ್ಲೆಯ ಪಿಲ್ಕ್‌ಹುವಾ ಪೊಲೀಸ್ ಠಾಣೆಗೆ ತನ್ನ ಹತ್ತು ವರ್ಷದ ಮಗನೊಂದಿಗೆ ಧಾವಿಸಿದ. ಕೊಲೆ ಮೊಕದ್ದಮೆಯೊಂದರ ಸಂಬಂಧ ಆತನನ್ನು ಠಾಣೆಗೆ ಕರೆಸಲಾಗಿತ್ತು. ತನ್ನ ಎದುರೇ ಪೊಲೀಸರು ತನ್ನ ತಂದೆಗೆ ಹಲವು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದರೆಂದು ಮಗ ಆ ಮೇಲೆ ಹೇಳಿದ. ತೋಮರ್ ಸ್ಥಿತಿ ಹದಗೆಟ್ಟಾಗ ಆತನನ್ನು ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತು. ಅಲ್ಲಿ ಆತ ಮೃತಪಟ್ಟ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪ್ರಕರಣವನ್ನು ಗಮನಿಸಿದ ಬಳಿಕ ನಾಲ್ಕು ಮಂದಿ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು.

ಕಳೆದ ವರ್ಷದ ಆದಿಯಲ್ಲಿ, ದಿಲ್ಲಿಯ ಒಂದು ನ್ಯಾಯಾಲಯವು 2006ರಲ್ಲಿ ವ್ಯಕ್ತಿಯೊಬ್ಬನಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಕೊಂದದ್ದಕ್ಕಾಗಿ ಉತ್ತರ ಪ್ರದೇಶದ ಐದು ಮಂದಿ ಪೊಲೀಸರಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಕಾರು ದರೋಡೆ ಪ್ರಕರಣವೊಂದರಲ್ಲಿ ಒಳಗೊಂಡಿದ್ದನೆಂಬ ಸಂಶಯದ ಮೇರೆಗೆ ಐದು ಮಂದಿ ಪೊಲೀಸರು ಆತನನ್ನು ಠಾಣೆಗೆ ಹೊತ್ತೊಯ್ದು ಲಾಕಪ್‌ನಲ್ಲಿ ಆತನಿಗೆ ಚಿತ್ರಹಿಂಸೆ ನೀಡಿದರು. ಆತ ಮೃತಪಟ್ಟ ಬಳಿಕ ಪೊಲೀಸರು ಲಾಕಪ್ ಸಾವಿನ ಎಲ್ಲ ಸಾಕ್ಷ್ಯಗಳು ನಾಶವಾಗುವಂತೆ ಪೊಲೀಸ್ ದಾಖಲೆಗಳನ್ನು ತಿರುಚಿ ಅದನ್ನು ಆತ್ಮಹತ್ಯೆ ಎಂದು ಮೊಕದ್ದಮೆಯನ್ನು ಅಂತ್ಯ ಗೊಳಿಸಿದ್ದರು.
ಮೊಕದ್ದಮೆಯ ವಿಚಾರಣೆ ನಡೆಸಿದ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜೀವ್ ಕುಮಾರ್ ಮಲ್ಹೋತ್ರಾ ಹೀಗೆ ಹೇಳಿದ್ದರು: ‘‘ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಪೊಲೀಸರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ತಮಗೆ ಪುರಾವೆಗಳನ್ನು ತಿರುಚುವ ಒಂದು ಅಧಿಕಾರವಿದೆ ಮತ್ತು ಅಂತಹ ತಿರುಚುವಿಕೆಯ ಮೂಲಕ ತಾವು ಸತ್ಯವನ್ನು ಹೂತು ಹಾಕಬಲ್ಲವೆಂದು ಪೊಲೀಸರು ತಿಳಿದಿರುವುದೇ ಲಾಕಪ್ ಸಾವಿಗೆ ಇರುವ ಕಾರಣಗಳಲ್ಲಿ ಒಂದು ಕಾರಣ.’’
ಭಾರತದ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳಿಗೆ ಲಾಕಪ್‌ನಲ್ಲಿ ಹೇಗೆ ಚಿತ್ರಹಿಂಸೆ ನೀಡಿ ಅವರನ್ನು ಕೊಲ್ಲುತ್ತಾರೆ ಎನ್ನುವುದನ್ನು ಈ ಮೇಲಿನ ಪ್ರಕರಣಗಳು ಹೇಳುತ್ತವೆ. ಪರಿಣಾಮವಾಗಿ ದೇಶಾದ್ಯಂತ ಪೊಲೀಸರನ್ನು ಕಟುವಾಗಿ ಟೀಕಿಸಿ ಖಂಡಿಸಲಾಗುತ್ತದೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕೂಡ ಶಂಕಿತರ ತನಿಖೆಯ ಒಂದು ಭಾಗವಾಗಿ ಚಿತ್ರ ಹಿಂಸೆಯನ್ನು ಬಳಸುತ್ತದೆ. 2016ರ ಸೆಪ್ಟ್ಟಂಬರ್‌ನಲ್ಲಿ ಕಾರ್ಪೊರೇಟ್ ಅಫೇರ್ಸ್‌ನ ಡೈರೆಕ್ಟರ್ ಜನರಲ್ ಬಿ.ಕೆ. ಬನ್ಸಾಲ್ ಮತ್ತು ಅವರ ಪುತ್ರ ಯೋಗೀಶ್ ಆತ್ಮಹತ್ಯೆ ಮಾಡಿಕೊಂಡರು. ಆದಾಯ ಮೀರಿದ ಆಸ್ತಿ ಗಳಿಕೆಯ ಪ್ರಕರಣವೊಂದರಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಚಿತ್ರಹಿಂಸೆ ನೀಡಿದ್ದ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಅವರು ಆತ್ಮಹತ್ಯೆಗೈಯುವ ಮೊದಲು ಬರೆದಿಟ್ಟಿದ್ದ ಪತ್ರದಲ್ಲಿ ಹೆಸರಿಸಿದ್ದರು. ಎರಡು ತಿಂಗಳುಗಳ ಮೊದಲು ಬನ್ಸಾಲ್ ಅವರ ಪತ್ನಿ ಮತ್ತು ಮಗಳು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆದೇಶವೊಂದರ ಪ್ರಕಾರ ಸಿಬಿಐ ಪ್ರಕರಣದ ತನಿಖೆ ನಡೆಸಿತ್ತು. ನಿರೀಕ್ಷಿಸಿದ್ದಂತೆಯೇ, ಸಿಬಿಐ ಎಲ್ಲಾ ಆಪಾದಿತರನ್ನು ದೋಷಮುಕ್ತಗೊಳಿಸಿತು. ಇತ್ತೀಚಿನ ವರ್ಷಗಳಲ್ಲಿ ಲಾಕಪ್ ಸಾವುಗಳು ಸಂಖ್ಯೆ ಹೆಚ್ಚುತ್ತಲೇ ಇದೆ. 2016ರಲ್ಲಿ 92 ಲಾಕಪ್ ಸಾವುಗಳು ನಡೆದಿದ್ದವು. 2017ರಲ್ಲಿ ಈ ಸಂಖ್ಯೆ ನೂರಕ್ಕೆ ಏರಿತ್ತು. ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ನೀಡಿರುವ ಅಂಕಿ ಅಂಶ.
ಲಾಕಪ್ ಸಾವುಗಳಿಗೆ ಜವಾಬ್ದಾರರಾದ ಪೊಲೀಸರಿಗೆ ಶಿಕ್ಷೆಯಾಗುವುದು ಅಪರೂಪವಾದ್ದರಿಂದ ಅವರು ಆಪಾದಿತರಿಂದ ಸತ್ಯ ಹೊರಡಿಸಲು ಚಿತ್ರಹಿಂಸೆ ನೀಡುವುದನ್ನು ಒಂದು ಸಾಧನವಾಗಿ, ಸಲಕರಣೆಯಾಗಿ ಬಳಸುವುದನ್ನು ಮುಂದುವರಿಸುತ್ತಲೇ ಇರುತ್ತಾರೆ. ಉದಾಹರಣೆಗೆ 2015ರಲ್ಲಿ 97 ಲಾಕಪ್ ಸಾವುಗಳ ಪೈಕಿ ಕೇವಲ 33 ಸಾವು ಪ್ರಕರಣಗಳಲ್ಲಿ ಮಾತ್ರ ಪೊಲೀಸರು ತಮ್ಮ ಅಪರಾಧಿ ಸಹೋದ್ಯೋಗಿ ಪೊಲೀಸ್ ಅಧಿಕಾರಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದ್ದರು. 2006ರಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಒಂದು ಐತಿಹಾಸಿಕ ತೀರ್ಪು ನೀಡಿತು. ಪ್ರತಿಯೊಂದು ರಾಜ್ಯದಲ್ಲೂ ಒಂದು ಪೊಲೀಸ್ ದೂರುಗಳ ಪ್ರಾಧಿಕಾರ (ಪೊಲೀಸ್ ಕಂಪ್ಲೈಂಟ್ಸ್ ಅಥಾರಿಟಿ) ಇರಬೇಕೆಂದು ಅದು ಹೇಳಿತು. ಯಾವುದೇ ಪೊಲೀಸ್ ಸಿಬ್ಬಂದಿಯ ವಿರುದ್ಧ ದೇಶದ ಯಾವನೇ ನಾಗರಿಕ ಆ ಪ್ರಾಧಿಕಾರದಲ್ಲಿ ತಪ್ಪಿತಸ್ಥ ಪೊಲೀಸರ ವಿರುದ್ಧ ದೂರು ಸಲ್ಲಿಸುತ್ತಿರಬೇಕು ಎಂದು ಅದು ಆದೇಶಿಸಿತ್ತು. ಆದರೆ ಕೇರಳ, ಜಾರ್ಖಂಡ್, ಹರ್ಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರದಂತಹ ಕೆಲವೇ ಕೆಲವು ರಾಜ್ಯಗಳು ಮಾತ್ರ ಆ ಆಜ್ಞೆಯನ್ನು ಅನುಷ್ಠಾನಗೊಳಿಸಿದವು.
ಲಾಕಪ್ ಸಾವುಗಳಿಗೆ ಜವಾಬ್ದಾರರಾದ ಪೊಲೀಸರಿಗೆ ಕಠಿಣ ಶಿಕ್ಷೆಯಾಗದ ಹೊರತು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದ ಹೊರತು ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಸುಳ್ಳಾಗುತ್ತದೆ. ವೈಜ್ಞಾನಿಕ ವಿಧಾನಗಳ ಜೊತೆಗೆ ಸರಿಯಾದ ವಿಚಾರಣಾ ತಂತ್ರಗಳನ್ನು ಬಳಸಿ ಅಪರಾಧಿಗಳಿಂದ ಸತ್ಯ ನುಡಿಸುವ ವ್ಯವಸ್ಥೆ ಇದ್ದಾಗ ಮಾತ್ರ ಲಾಕಪ್ ಸಾವುಗಳ ಸಂಖ್ಯೆ ಕಡಿಮೆಯಾದೀತು.

(ಲೇಖಕರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಓರ್ವ ನಿವೃತ್ತ ಇನ್‌ಸ್ಪೆಕ್ಟರ್ ಜನರಲ್)
     

Writer - ಎಂ. ಪಿ. ನಾಥನೇಲ್

contributor

Editor - ಎಂ. ಪಿ. ನಾಥನೇಲ್

contributor

Similar News