ಪೌರತ್ವ ಕಾಯ್ದೆ ವಿರೋಧಿ ಹೋರಾಟದ ವ್ಯಾಪ್ತಿ ಹೆಚ್ಚಾಗಲಿ

Update: 2020-02-10 18:37 GMT

ದೇಶದ ಜನಸಾಮಾನ್ಯರಲ್ಲಿ ಮೂಡುತ್ತಿರುವ ಜಾಗೃತಿ ಹಾಗೂ ಅವರು ಮಾಡುತ್ತಿರುವ ಕೆಚ್ಚಿನ ಹೋರಾಟಗಳೊಂದಿಗೆ ಕಾರ್ಮಿಕ ವರ್ಗ ಭುಜಕೊಟ್ಟು ನಿಲ್ಲುವಂತಹ ನಿಟ್ಟಿನಲ್ಲಿ ಯೋಚಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಾಗಬೇಕಾದರೆ ಕಾರ್ಮಿಕ ವರ್ಗ ಸಂಘಟನೆಗಳ ನಾಯಕತ್ವ ಬದಲಾಗಬೇಕಿದೆ. ಪೌರತ್ವ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿರುವ ವಿದ್ಯಾರ್ಥಿ ಯುವಜನರು ಮಹಿಳೆಯರು ಮತ್ತಿತರರು ಈ ಎಲ್ಲಾ ವಿಚಾರಗಳನ್ನು ಒಳಗೊಳಿಸಿಕೊಂಡು ಅಸ್ತಿತ್ವ ಹಾಗೂ ಹಕ್ಕುಗಳಿಗಾಗಿನ ಹೋರಾಟಗಳನ್ನು ಮುಂದಕ್ಕೊಯ್ಯಬೇಕಾಗಿದೆ.


ಸಿಎಎ, ಎನ್‌ಪಿಆರ್, ಎನ್‌ಆರ್‌ಐಸಿಯಂತಹ ಪೌರತ್ವ ಸಂಬಂಧಿ ಕಾಯ್ದೆಗಳ ಹೇರಿಕೆಯನ್ನು ವಿರೋಧಿಸಿ ತಿಂಗಳುಗಳಿಂದ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಜನಸಾಮಾನ್ಯರು ಬೀದಿಗಿಳಿದಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯ ಇಂದು ಬೀದಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಿವೆೆ. ಪ್ರಭುತ್ವದ ಪಡೆಗಳು ಹತ್ತಾರು ಜನರನ್ನು ಗುಂಡಿಟ್ಟು ಕೊಂದಿವೆ. ಅದರಲ್ಲೂ ಬಿಜೆಪಿಯ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ಹಾಗೂ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರವಿರುವ ಅಸ್ಸಾಮಿನಲ್ಲಿ ಸಾವು ನೋವುಗಳು ಅತ್ಯಧಿಕವಾಗಿ ದಾಖಲಾಗುತ್ತಿವೆ. ಪ್ರಭುತ್ವ ಬೆಂಬಲಿತ ಫ್ಯಾಶಿಸ್ಟ್ ಗೂಂಡಾ ಪಡೆಗಳು ಜೆಎನ್‌ಯು, ಎಎಮ್‌ಯು, ಬಿಎಚ್‌ಯು, ದಿಲ್ಲಿ, ಜಾದವ್‌ಪುರ, ಪಂಜಾಬ್ ಮೊದಲಾದ ವಿಶ್ವ ವಿದ್ಯಾನಿಲಯಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ದಾಳಿಗಳನ್ನು ನಡೆಸಿ ಹತ್ತಾರು ಜನರನ್ನು ಗಂಭೀರ ರೀತಿಯಲ್ಲಿ ಗಾಯಗೊಳಿಸಿವೆ. ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಹಾಗೂ ಬೀದರ್‌ನ ಶಾಲೆಯಲ್ಲಿ ಸಿಎಎ ಕುರಿತು ನಾಟಕ ಆಡಿದ ಪುಟ್ಟ ಮಕ್ಕಳು ಮತ್ತವರ ಪೋಷಕರು, ಹಾಗೂ ಶಿಕ್ಷಕರ ಮೇಲೆ ದೇಶದ್ರೋಹದಂತಹ ವಸಾಹತುಶಾಹಿ ಕರಾಳ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಪ್ರಜಾತಾಂತ್ರಿಕ ಹಕ್ಕುಗಳನ್ನು ಎತ್ತಿ ಹಿಡಿಯಬೇಕಿದ್ದ ನ್ಯಾಯವಾದಿಗಳ ಸಂಘ ಹೋರಾಡಿದ ವಿದ್ಯಾರ್ಥಿಗಳ ಪರವಾಗಿ ಯಾವುದೇ ನ್ಯಾಯವಾದಿಗಳು ವಾದಿಸದಂತೆ ನಿರಂಕುಶ ನಿರ್ಬಂಧ ಹೇರಿದ ಘಟನೆಯೂ ನಡೆಯಿತು. ವಿದ್ಯಾರ್ಥಿಗಳ ಪರವಾಗಿ ವಕಾಲತ್ತು ಹಾಕುವಲ್ಲಿ ಶ್ರಮಿಸಿದ ವಕೀಲರನ್ನು ಸಂಘದಿಂದ ಹೊರಗಿಡುವ ನಿರ್ಣಯ ತೆಗೆದುಕೊಂಡ ಘಟನೆಯೂ ನಡೆಯಿತು. ಇಂತಹ ಅಪ್ರಜಾತಾಂತ್ರಿಕ ನಡೆಗಳು ನ್ಯಾಯವಾದಿ ವೃತ್ತಿಗೇ ಕಳಂಕವೆಂಬ ಪ್ರಾಥಮಿಕ ತಿಳಿವಳಿಕೆಯೇ ಈ ನ್ಯಾಯವಾದಿಗಳ ಸಂಘಕ್ಕೆ ಇಲ್ಲದೇ ಹೋಗಿರುವುದು ದುರಂತ.

ಅಲ್ಲದೆ ದಿಲ್ಲಿಯಲ್ಲಿ ಹೋರಾಟ ನಿರತ ವಿದ್ಯಾರ್ಥಿ ಯುವಜನರು ಹಾಗೂ ಮಹಿಳೆಯರ ಮೇಲೆ ಫ್ಯಾಶಿಸ್ಟ್ ಗೂಂಡಾ ಪಡೆಗಳು ಗುಂಡಿನ ದಾಳಿಗಳನ್ನೂ ನಡೆಸುತ್ತಿವೆ. ಪ್ರಭುತ್ವ ಹತ್ತು ಹಲವು ಹೆಸರುಗಳಲ್ಲಿ ಹೋರಾಟ ನಿರತ ಜನರಿಗೆ ಕಿರುಕುಳ ನೀಡುತ್ತಾ ಬರುತ್ತಿದೆ. ಜನರು ತಮ್ಮ ಕನಿಷ್ಠ ಪ್ರಜಾತಾಂತ್ರಿಕ ಹಕ್ಕುಗಳನ್ನು ಚಲಾಯಿಸಲು ಕೂಡ ಪೊಲೀಸರ ಅನುಮತಿ ಕಡ್ಡಾಯವೆನ್ನುವಂತಹ ನಿರಂಕುಶ ವಾತಾವರಣವನ್ನು ದೇಶಾದ್ಯಂತ ನಿರ್ಮಿಸಲಾಗಿದೆ. ಪ್ರಭುತ್ವ ತನ್ನ ಪಡೆಗಳ ಮೂಲಕ ದಮನಕಾಂಡ ಸೇರಿದಂತೆ ಎಲ್ಲಾ ರೀತಿಯಿಂದಲೂ ಜನಸಾಮಾನ್ಯರನ್ನು ಹೋರಾಟದಿಂದ ದೂರವಿರಿಸಬೇಕೆಂದು ಪ್ರಯತ್ನಿಸುತ್ತಿದ್ದರೂ ಜನಸಾಮಾನ್ಯರು ಅವುಗಳಿಗೆ ಸೆಡ್ಡು ಹೊಡೆಯುತ್ತಾ ನಿರಂತರವಾಗಿ ಬೀದಿ ಹೋರಾಟಗಳಲ್ಲಿ ತೊಡಗಿದ್ದಾರೆ. ಲಕ್ಷಗಳ ಸಂಖ್ಯೆಯಲ್ಲಿ ಪ್ರತಿಭಟನಾ ಸಮಾವೇಶ ಮೆರವಣಿಗೆಗಳಲ್ಲಿ ಜನರು ಸಂಘಟಿತರಾಗಿ ತಮ್ಮ ಧ್ವನಿಗಳನ್ನು ಮೊಳಗಿಸುತ್ತಿದ್ದಾರೆ. ಅದರೊಂದಿಗೆ ವಿಚಾರ ಸಂಕಿರಣ, ಚರ್ಚೆ, ಸಂವಾದಗಳನ್ನು ಸಾಕಷ್ಟು ವ್ಯಾಪಕವಾಗಿ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಯುವಜನರ ನಿರಂತರ ಸಕ್ರಿಯತೆ ಮೇಲ್ನೋಟದಲ್ಲೇ ಕಾಣುವಂತಹ ವಿಚಾರವಾಗಿದೆ. ಈ ರೀತಿಯಲ್ಲಿ ಜನಸಾಮಾನ್ಯರು ಬೀದಿಗಿಳಿದು ಹೋರಾಡುತ್ತಿರುವುದು ಕಳೆದ ಕೆಲವು ದಶಕಗಳಲ್ಲೇ ಕಾಣದಂತಹ ವಿದ್ಯಮಾನವಾಗಿದೆ. ಆದರೆ ಪ್ರಭುತ್ವ ಇದೇ ವೇಳೆಯಲ್ಲೇ ದೇಶದ ಒಟ್ಟಾರೆ ಜನರನ್ನು ಗಂಭೀರವಾಗಿ ಬಾಧಿಸುವಂತಹ ಹಲವಾರು ನಡೆಗಳನ್ನು ನಡೆಸಿದೆ.

ಸಾರ್ವಜನಿಕ ಕ್ರೇತ್ರಗಳನ್ನು ಒಂದೊಂದಾಗಿ ಪೂರ್ಣ ಕಾರ್ಪೊರೇಟೀಕರಣಕ್ಕೆ ಒಳಪಡಿಸುತ್ತಾ ಸಾಗಿದೆ. ಅದು ಬಿಪಿಸಿಎಲ್, ಎಲ್‌ಐಸಿ, ರಕ್ಷಣಾ ಕೈಗಾರಿಕೆಗಳು, ರೈಲ್ವೆ, ಬ್ಯಾಂಕುಗಳು, ಹೀಗೆ ಪಟ್ಟಿ ಸಾಗುತ್ತಿದೆ. ಅದರ ಜೊತೆಗೆ ಸಾರ್ವಜನಿಕ ಕ್ಷೇತ್ರದ ಆಸ್ತಿಗಳನ್ನು ದುಗ್ಗಾಣಿ ಬೆಲೆಗೆ ಮಾರಾಟ ಮಾಡಿ ತನ್ನ ಹಣಕಾಸು ಕೊರತೆಗಳನ್ನು ತುಂಬಿಸುವ ಶ್ರಮ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಸಾರ್ವಜನಿಕ ಆಸ್ತಿಗಳು ಕಾರ್ಪೊರೇಟ್ ಕೈಗಳಿಗೆ ಸೇರಿವೆ. ಕಳೆದ ನಾಲ್ಕು ದಶಕಗಳಲ್ಲೇ ಅತೀ ಹೆಚ್ಚು ದಾಖಲೆಯ ನಿರುದ್ಯೋಗ ಸಮಸ್ಯೆಯನ್ನು ದೇಶ ಎದುರಿಸುತ್ತಿರುವಾಗಲೇ ಬಿಎಸ್‌ಎನ್‌ಎಲ್‌ನ 90,000 ನೌಕರಿಗಳನ್ನು ಕಡಿತಗೊಳಿಸಲಾಗಿದೆ. ಉದ್ಯೋಗಾವಕಾಶಗಳ ಹೆಚ್ಚಳ ಮಾಡಬೇಕಾಗಿರುವ ಸಂದರ್ಭದಲ್ಲೇ ಸರಕಾರದ ನಡೆಗಳು ಅದಕ್ಕೆ ತದ್ವಿರುದ್ಧವಾಗಿರುವುದು ಎದ್ದು ಕಾಣುತ್ತಿದೆ. ಸಾರ್ವಜನಿಕ ರಂಗದ ಕಾರ್ಪೊರೇಟೀಕರಣವೆಂದಾಗ ಅದು ದಲಿತ ದಮನಿತರಿಗೆ ಸಹಜವಾಗಿ ದೊರೆಯಬೇಕಾದ ಪಾಲುಗಳಿಗೆ ಸಂಚಕಾರದ ನಡೆಗಳೆಂದೇ ಅರ್ಥಮಾಡಿಕೊಳ್ಳಬೇಕಾಗಿದೆ. ಇವುಗಳ ಜೊತೆಯಲ್ಲೇ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳನ್ನು ಮಾಡುತ್ತಾ ಕಾರ್ಮಿಕರ ರಕ್ಷಣೆ ಹಾಗೂ ಹಕ್ಕುಗಳನ್ನು ಮೊಟಕುಗೊಳಿಸುತ್ತಾ ಬರಲಾಗಿದೆ.

ಈಗವುಗಳು ನಾಮಮಾತ್ರದ್ದಾಗುವ ಹಂತ ತಲುಪುತ್ತಿದೆ. ಅಲ್ಲದೆ ಈ ಬಾರಿ ಆಯವ್ಯಯದಲ್ಲಿ ಭಾರೀ ಕಾರ್ಪೊರೇಟ್‌ಗಳು ನಡೆಸುವ ಆರ್ಥಿಕ ಅಪರಾಧಗಳನ್ನು ಕ್ರಿಮಿನಲ್ ಅಪರಾಧಗಳಾಗಿ ಪರಿಗಣಿಸಲಾಗದಂತೆ ಕಾನೂನು ತಿದ್ದುಪಡಿಯ ಪ್ರಸ್ತಾವವನ್ನು ಹೊಂದಿದೆ. ಭಾರೀ ಕಾರ್ಪೊರೇಟ್‌ಗಳು ದಿವಾಳಿ ಘೋಷಿಸಿಕೊಂಡು ರಕ್ಷಣೆ ಪಡೆಯಲು ಅನುಕೂಲವಾಗುವಂತೆ ಕಂಪೆನಿ ಕಾಯ್ದೆ ಹಾಗೂ ದಿವಾಳಿ (ಇನ್ ಸಾಲ್ ವೆನ್ಸಿ) ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಪೌರತ್ವ ಸಂಬಂಧಿ ಕಾಯ್ದೆಗಳನ್ನು ಹೆಣೆದಿರುವುದರ ಹಿಂದೆ ಭಾರೀ ಷಡ್ಯಂತ್ರವಿದೆ. ಅದು ದೇಶದ ಸಂವಿಧಾನ, ಕಾನೂನು, ಸಾಂವಿಧಾನಿಕ ಸಂಸ್ಥೆಗಳು, ಆಡಳಿತಾತ್ಮಕ ವ್ಯವಸ್ಥೆಗಳನ್ನು ಪೂರ್ಣವಾಗಿ ಮಾರ್ಪಡಿಸಿ ಆಳುವ ವರ್ಗಗಳ ಹಿತಾಸಕ್ತಿಗಳಿಗೆ ತಕ್ಕಂತೆ ದೇಶದ ಆಡಳಿತ ವ್ಯವಸ್ಥೆಯನ್ನು ಬಹಳ ಸಹಜವೆನ್ನುವಂತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದಲಾಯಿಸಿಕೊಳ್ಳಲು ಮಾಡಿದ ಯೋಜನಾಬದ್ಧ ನಡೆಗಳಾಗಿವೆ. ಅದು ದೇಶದ ಶೇ. 99ಕ್ಕೂ ಹೆಚ್ಚಿರುವ ಬಹುಸಂಖ್ಯಾತ ಜನರನ್ನು ನೇರವಾಗಿ ಗುರಿಮಾಡಿ ಕೇವಲ ಶೇ. 1ರಷ್ಟಿರುವ ಆಳುವ ಶಕ್ತಿಗಳಿಗೆ ಪೂರ್ಣ ಮಟ್ಟದಲ್ಲಿ ದೇಶ ಹಾಗೂ ದೇಶದ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಅನುಕೂಲ ಮಾಡಿಕೊಡುವ ವ್ಯವಸ್ಥಿತ ನಡೆಗಳಾಗಿವೆ. ಈಗಾಗಲೇ ದೇಶದ ಶೇ. 73ಕ್ಕೂ ಹೆಚ್ಚಿನ ಆಸ್ತಿ ಸಂಪತ್ತು ಇದೇ ಜನರ ಕೈಗಳಲ್ಲಿ ಶೇಖರಣೆಗೊಂಡಿದೆಯೆಂದು ಹಲವು ವರದಿಗಳು ಹೇಳುತ್ತಿವೆ. ಇದು ಕೇವಲ ಮೋದಿ ಸರಕಾರವೋ ಇಲ್ಲವೇ ಸಂಘಪರಿವಾರವೋ ಮಾಡಿರುವ ನಡೆಗಳಲ್ಲ. ಇದಕ್ಕೆ ಸ್ಪಷ್ಟವಾದ ಕಾನೂನು ಚೌಕಟ್ಟುಗಳು ರೂಪಿತವಾಗತೊಡಗಿದ್ದು 2003ರ ಬಿಜೆಪಿಯ ವಾಜಪೇಯಿ ಸರಕಾರದ ಸಂದರ್ಭದಲ್ಲಾದರೂ ಅದಕ್ಕೂ ಹಿಂದಿನಿಂದಲೇ ಅಂದರೆ ಪ್ರಧಾನವಾಗಿ ಜಾಗತೀಕರಣ ಆರಂಭವಾದಾಗಿನಿಂದಲೂ ಆರಂಭಗೊಂಡಿದೆ.

ಉದಾರೀಕರಣ, ಖಾಸಗೀಕರಣ, ‘ಜಾಗತಿಕ ಹಳ್ಳಿ , ವಿಶ್ವವೇ ಒಂದು ಹಳ್ಳಿ’ ಎಂದೆಲ್ಲಾ ಜಾಗತೀಕರಣ ಮುಂದಿಟ್ಟ ಘೋಷಣೆಗಳನ್ನು ಈ ಅರ್ಥದಲ್ಲಿಯೇ ಗ್ರಹಿಸಬೇಕಿದೆ. ಆಗಿನಿಂದಲೇ ದೇಶ, ಗಡಿ, ದೇಶೀಯ ಆಡಳಿತ ವ್ಯವಸ್ಥೆಗಳು ಜಾಗತೀಕರಣದ ಪರಿಕಲ್ಪನೆಯ ಜಾರಿಗೆ ಅಡ್ಡಿಯಾಗಿದ್ದನ್ನು ನಿವಾರಿಸುತ್ತಾ ಬರಲಾಗಿತ್ತು. ಅದರ ಉಚ್ಛ್ರಾಯ ಹಂತವೇ ಇಂದಿನದಾಗಿದೆ. ಈ ಹಿನ್ನೆಲೆಗಳನ್ನು ಬಿಟ್ಟು ಈಗಿನ ಬೆಳವಣಿಗೆಗಳನ್ನು ಗ್ರಹಿಸಲು ಹೋದರೆ ಅದು ಆಳುವ ವರ್ಗಗಳಿಗೆ ಅನುಕೂಲವನ್ನೇ ಮಾಡಿಕೊಡುತ್ತದೆ. ಅವರಿಗೆ ಜನಸಾಮಾನ್ಯರನ್ನು ತಮ್ಮ ಮೇಲಿನ ನೇರ ಗುರಿಯಿಂದ ಬೇರೆಡೆಗೆ ತೊಡಗಿಸುತ್ತಾ ಹತ್ತು ಹಲವು ರೀತಿಯಲ್ಲಿ ಅವರಿಗೆ ಬೇಕಾದ ಕಾರ್ಯಗಳನ್ನು ಸಲೀಸಾಗಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಅದೇ ಸಂದರ್ಭದಲ್ಲಿ ಸಂವಿಧಾನ ರಕ್ಷಿಸಿದರೆ ದೇಶದ ಹಾಗೂ ದೇಶದ ಜನಸಾಮಾನ್ಯರ ರಕ್ಷಣೆಯಾಗುತ್ತದೆ ಎನ್ನುವ ಸಿನಿಕತನದ ಗ್ರಹಿಕೆಗಳು ಪ್ರಸ್ತುತ ಮೇಲುಗೈಯಲ್ಲಿವೆ. ಸಾಕಷ್ಟು ಬುದ್ಧಿಜೀವಿಗಳು, ಪ್ರಗತಿಪರರು ಇದೇ ವಾದಗಳನ್ನು ಮುಂದಿಡುತ್ತಿದ್ದಾರೆ. ಅದಕ್ಕೆಂದೇ ಸಂಘಟನೆಗಳನ್ನು ಹುಟ್ಟುಹಾಕುತ್ತಾ ಹೋರಾಟ, ಸಂವಾದಗಳನ್ನು ಸಂಘಟಿಸಲಾಗುತ್ತಿದೆ. ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ದೇಶ ಹಾಗೂ ಜನಸಾಮಾನ್ಯರ ರಕ್ಷಣೆ ಎನ್ನುವ ಮಟ್ಟದಲ್ಲಿ ವಾದಗಳನ್ನು ಮುಂದಿಡಲಾಗುತ್ತಿದೆ. ಜೊತೆಗೆ ಸಂವಿಧಾನವೇ ಧರ್ಮ, ಸಂವಿಧಾನವೇ ಪವಿತ್ರ ಗ್ರಂಥ ಎನ್ನುವಂತಹ ಅತಿರೇಕದ ಕುರುಡು ವಾದಗಳನ್ನೂ ಮುಂದಿಡಲಾಗುತ್ತಿದೆ. ಇವೆಲ್ಲವೂ ಜನಸಾಮಾನ್ಯರಿಗಾಗಲೀ, ದೇಶಕ್ಕಾಗಲೀ ಇಂದು ಉಪಯೋಗವಾಗುವುದಿಲ್ಲ ಬದಲಿಗೆ ಆಳುವ ವರ್ಗಗಳಿಗೆ ಜನಸಾಮಾನ್ಯರನ್ನು ಮತ್ತಷ್ಟು ದಿನ ಕತ್ತಲೆಯಲ್ಲಿಟ್ಟು ದಿಕ್ಕು ತಪ್ಪಿಸಲು ಅನುಕೂಲ ಮಾಡಿಕೊಡುವಂತಹ ವಾದಗಳಾಗಿ ಪರಿಣಮಿಸುತ್ತವೆ.

ಸಂವಿಧಾನವನ್ನು ಪವಿತ್ರವೆನ್ನುವಂತೆ, ಸಂವಿಧಾನವೆಂದರೆ ಡಾ. ಅಂಬೇಡ್ಕರ್‌ರೆಂಬಂತೆ ಬಿಂಬಿಸುವುದರಿಂದ ದಲಿತ ದಮನಿತರನ್ನು ಮತ್ತಷ್ಟು ದಿನ ಭಾವನಾತ್ಮಕ ಮೋಡಿಯಲ್ಲಿರಿಸಲು ಒಂದಷ್ಟು ಸಹಾಯವಾಗಬಹುದು ಬಿಟ್ಟರೆ ಅವರ ಅಸ್ತಿತ್ವ ಹಾಗೂ ಹಕ್ಕುಗಳ ರಕ್ಷಣೆಯ ಕುರಿತಾದ ಪ್ರಜ್ಞೆ ಮೂಡಿಸಲು ಸಹಾಯ ಮಾಡಲಾರದು. ಸಂವಿಧಾನವನ್ನು ಮುಂದಿಟ್ಟುಕೊಂಡು ತಮ್ಮ ಕಾರ್ಯಗಳನ್ನು ಸಾಧಿಸುತ್ತಾ ದೇಶದ ಮುಕ್ಕಾಲು ಪಾಲು ಆಸ್ತಿ ಸಂಪತ್ತನ್ನು ಕಬಳಿಸಿ ಇಟ್ಟುಕೊಂಡ ಆಳುವ ಶಕ್ತಿಗಳಿಗೆ ಇಂದು ಸಂವಿಧಾನದ ಉಪಯೋಗ ಇಲ್ಲವಾಗಿದೆ. ಅದಕ್ಕೆ ತಕ್ಕಂತೆ ಅವರು ತಮ್ಮ ನಡೆಗಳನ್ನು ಶುರುವಿಟ್ಟುಕೊಂಡಿದ್ದಾರೆ. ಪೌರತ್ವದ ತಿದ್ದುಪಡಿ ಕಾನೂನುಗಳು, ಪೂರ್ಣಮಟ್ಟದ ಕಾರ್ಪೊರೇಟೀಕರಣದ ಸರಕಾರಿ ನಡೆಗಳು ಇವೆಲ್ಲಾ ಅದರ ಭಾಗವೇ ಆಗಿವೆ. ಹಾಗಾಗಿ ದಲಿತ ದಮನಿತ ಹಿಂದುಳಿದ ಒಂದು ಸಣ್ಣ ಜನ ಸಂಖ್ಯೆಗೆ ಕೆಲವು ಅನುಕೂಲ ಕಲ್ಪಿಸಿದ್ದ ಮೀಸಲಾತಿ, ದಲಿತ ದಮನಿತರಿಗೆಂದೇ ಆಯವ್ಯಯದಲ್ಲಿ ತೆಗೆದಿಡಬೇಕಾಗಿದ್ದ ಹಣಕಾಸು, ಮಧ್ಯಮ ವರ್ಗ ಶ್ರೀಮಂತ ವರ್ಗಗಳಿಗೆ ಒಂದು ಮಟ್ಟದಲ್ಲಿ ಲಭ್ಯವಿದ್ದ ಪ್ರಜಾತಾಂತ್ರಿಕ ಅವಕಾಶಗಳು, ಮಾನವ ಹಕ್ಕುಗಳು ಮೊದಲಾದವು ಇಂದು ಪೂರ್ಣ ಮಟ್ಟದಲ್ಲಿ ಕಡಿತಗೊಳಿಸಲಾಗುತ್ತಿದೆ ಎನ್ನುವುದನ್ನು ಗ್ರಹಿಸಬೇಕಿದೆ. ಎರಡು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯವು ಭಡ್ತಿ ಮೀಸಲಾತಿಯ ಬಗ್ಗೆ ಮೀಸಲಾತಿ ವಿರೋಧಿ ತೀರ್ಪು ನೀಡಿರುವುದನ್ನು ನಾವಿಲ್ಲಿ ಗಮನಿಸಬಹುದು.

ಈ ಹೋರಾಟಗಳು ಹಾಗೂ ಬೆಳವಣಿಗೆಗಳ ಬಗ್ಗೆ ದೇಶದ ಕಾರ್ಮಿಕ ವರ್ಗದ ಪ್ರತಿಕ್ರಿಯೆ ನೀರಸವಾಗಿದೆ. ಅದರ ನಾಯಕತ್ವ ಭ್ರಷ್ಟಗೊಂಡಿರುವುದರಿಂದ ತಮ್ಮ ಅಸ್ತಿತ್ವಕ್ಕೇ ಮಾರಕವಾಗುವ ಸರಕಾರದ ಇಂತಹ ನಡೆಗಳಿಗೆ ಪ್ರತಿರೋಧ ಒಡ್ಡುವಂತಹ ಹೋರಾಟಗಳನ್ನು ಸಂಘಟಿಸದೇ ಹೋಗುತ್ತಿದೆ. ದೇಶದ ಮಟ್ಟದಲ್ಲಿ ಕೆಲವು ಮುಷ್ಕರಗಳಿಗೆ ಕರೆಗಳನ್ನು ಕೊಟ್ಟರೂ ಅದು ಬಹುತೇಕವಾಗಿ ವಾರ್ಷಿಕ ಹರಕೆಯಂತಾಗಿ ಬಿಟ್ಟಿವೆ. ಅಲ್ಲದೆ ಅದು ಸಂಬಳ, ಸವಲತ್ತುಗಳ ಹೆಚ್ಚಳಗಳಂತಹ ಆರ್ಥಿಕ ಹಕ್ಕೊತ್ತಾಯಗಳಿಗೆ ಸೀಮಿತವಾಗಿ ಸಾಂಕೇತಿಕತೆಯ ಮಟ್ಟಕ್ಕೆ ನಡೆಸಲಾಗುತ್ತಿದೆ. ರಾಜಕೀಯ ಹಕ್ಕೊತ್ತಾಯಗಳಿಲ್ಲದ ತಮ್ಮ ತಮ್ಮ ಅಗತ್ಯಗಳ ಪೂರೈಕೆಗೆಂಬಂತೆ ಇರುವುದೇ ಹೆಚ್ಚಿನವು. ಜನಸಾಮಾನ್ಯರೊಂದಿಗೆ ಒಳಗೊಳ್ಳುವ ಹಾಗೇನೆ ಒಳಗೊಳಿಸಿಕೊಳ್ಳುವ ಅಗತ್ಯ ಆಸಕ್ತಿಗಳನ್ನು ಈ ಸಂಘಟನೆಗಳು ಈಗಲೂ ಬೆಳೆಸಿಕೊಳ್ಳುವ ಕಡೆ ಗಮನ ನೀಡದೆ ಇರುವುದು ಇವುಗಳಿರುವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಾರ್ವಜನಿಕ ರಂಗವನ್ನು ನಾಶ ಮಾಡಲು ಹೊರಟ ಸರಕಾರದ ನಡೆಗಳನ್ನು ತಡೆಯುವಂತಹ ಒತ್ತಡ ಮಾಡುವ ಇರಾದೆಯನ್ನು ನಾಯಕತ್ವ ತೋರಿಸುತ್ತಿಲ್ಲ. ಇತ್ತೀಚೆಗೆ ಬ್ಯಾಂಕ್ ಹಾಗೂ ವಿಮಾ ನೌಕರ ಸಂಘಗಳು ದೇಶಾದ್ಯಂತ ಮುಷ್ಕರ ನಡೆಸಿದ್ದವು. ಅದರ ವಿಚಾರವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈಗ ನಡೆಯುತ್ತಿರುವ ಪೌರತ್ವ ಸಂಬಂಧಿ ಕಾಯ್ದೆಗಳ ವಿರುದ್ಧದ ಹೋರಾಟಗಳಲ್ಲಿ ಕಾರ್ಮಿಕ ವರ್ಗದ ಪ್ರತಿಕ್ರಿಯೆ ನೀರಸವೇ ಆಗಿದೆ. ಕೆಲವೆಡೆ ಸಂಜೆಯ ವೇಳೆ ಕ್ಯಾಂಡಲ್ ಹಿಡಿದು ನಿಲ್ಲುವಂತಹ ಸಾಂಕೇತಿಕತೆಯನ್ನು ಬ್ಯಾಂಕ್ ನೌಕರರ ಸಂಘಟನೆಯಂತಹವುಗಳು ಮಾಡುತ್ತಿವೆ. ಅಸಂಘಟಿತ ಜನಸಮೂಹ ತೋರುತ್ತಿರುವ ಪ್ರತಿರೋಧದ ಜೊತೆಗೆ ಈ ಸಂಘಟಿತ ಕಾರ್ಮಿಕ ಸಂಘಟನೆಗಳು ನಿಲ್ಲದೇ ಹೋಗಿವೆ. ಸಿಎಎ, ಎನ್‌ಪಿಆರ್, ಎನ್‌ಆರ್‌ಐಸಿಯನ್ನು ವಿರೋಧಿಸುತ್ತೇವೆಂದು ಒಂದು ಘೋಷಣೆ ಬರೆದು ಪ್ರದರ್ಶಿಸುವ ಮಟ್ಟದಲ್ಲಿ, ಇವುಗಳಲ್ಲಿ ಕೆಲವದರ ಪ್ರತಿಕ್ರಿಯೆಗಳಾಗಿವೆ. ದೇಶದ ಜನಸಾಮಾನ್ಯರ ಮೇಲೆ ಆರ್ಥಿಕ ರಾಜಕೀಯ ದಾಳಿಗಳಿಗೆ ಸಂಬಂಧ ಪಟ್ಟಂತೆ ಆದ್ಯತಾ ರೀತಿಯಲ್ಲಿ ಈ ಕಾರ್ಮಿಕ ಸಂಘಟನೆಗಳು ಹೋರಾಟ ಕಾರ್ಯಕ್ರಮಗಳನ್ನು ರೂಪಿಸಲು ಜವಾಬ್ದಾರಿ ಹೊರುತ್ತಿಲ್ಲ. ಇಂತಹ ನಡೆಗಳು ಕಾರ್ಮಿಕ ವರ್ಗವನ್ನು ಮತ್ತಷ್ಟು ಬಲಹೀನತೆಗೆ ತಳ್ಳುತ್ತಿದೆ.

ಕಾರ್ಮಿಕ ವರ್ಗ ಸಂಘಟನೆಗಳ ಈ ಮಟ್ಟದ ಬಲಹೀನತೆಗಳು ದೇಶದಲ್ಲಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಧಾಳಿಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಿದೆ ಎಂದರೆ ತಪ್ಪಲ್ಲ. ಅಷ್ಟೇ ಅಲ್ಲದೆ ಕಾರ್ಮಿಕರ ಅಸ್ತಿತ್ವಗಳಿಗೇ ಕೊಡಲಿಯೇಟಿನ ಬಿರುಸುಗಳನ್ನು ದ್ವಿಗುಣಗೊಳಿಸಿದೆ. ದೇಶದ ಜನಸಾಮಾನ್ಯರಲ್ಲಿ ಮೂಡುತ್ತಿರುವ ಜಾಗೃತಿ ಹಾಗೂ ಅವರು ಮಾಡುತ್ತಿರುವ ಕೆಚ್ಚಿನ ಹೋರಾಟಗಳೊಂದಿಗೆ ಕಾರ್ಮಿಕ ವರ್ಗ ಭುಜಕೊಟ್ಟು ನಿಲ್ಲುವಂತಹ ನಿಟ್ಟಿನಲ್ಲಿ ಯೋಚಿಸುವ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಾಗಬೇಕಾದರೆ ಕಾರ್ಮಿಕ ವರ್ಗ ಸಂಘಟನೆಗಳ ನಾಯಕತ್ವ ಬದಲಾಗಬೇಕಿದೆ. ಪೌರತ್ವ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿರುವ ವಿದ್ಯಾರ್ಥಿ ಯುವಜನರು ಮಹಿಳೆಯರು ಮತ್ತಿತರರು ಈ ಎಲ್ಲಾ ವಿಚಾರಗಳನ್ನು ಒಳಗೊಳಿಸಿಕೊಂಡು ಅಸ್ತಿತ್ವ ಹಾಗೂ ಹಕ್ಕುಗಳಿಗಾಗಿನ ಹೋರಾಟಗಳನ್ನು ಮುಂದಕ್ಕೊಯ್ಯಬೇಕಾಗಿದೆ.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News