ಟಿ-20 ಸರಣಿಗೆ ಸೇಡು: ಭಾರತದ ವಿರುದ್ಧದ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಝಿಲ್ಯಾಂಡ್

Update: 2020-02-11 17:42 GMT

ವೌಂಟ್ ವೌಂಗಾನುಯಿ, ಫೆ.11: ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು ನ್ಯೂಝಿಲ್ಯಾಂಡ್ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಟ್ವೆಂಟಿ-20 ಸರಣಿಯಲ್ಲಿ 0-5 ಅಂತರದಲ್ಲಿ ಸೋತಿದ್ದ ನ್ಯೂಝಿಲ್ಯಾಂಡ್ ಏಕದಿನ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದೆ.

ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 297 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲ್ಯಾಂಡ್ ತಂಡ 47.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 300 ರನ್ ಗಳಿಸುವ ಮೂಲಕ ಸತತ ಮೂರನೇ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ ಏಕದಿನ ಸರಣಿಯಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಮೊದಲ ಬಾರಿ ದ್ವಿಪಕ್ಷೀಯ ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿತು. 1989ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 0-5 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹೆನ್ರಿ ನಿಕೊಲ್ಸ್ 80 ರನ್(103ಎ, 9ಬೌ) ಮತ್ತು ಮಾರ್ಟಿನ್ ಗಪ್ಟಿಲ್ 66 ರನ್(46ಎ, 6ಬೌ,4ಸಿ), ಕಾಲಿನ್ ಡಿ ಗ್ರಾಂಡ್‌ಹೋಮ್ ಔಟಾಗದೆ 58 ರನ್(28ಎ, 6ಬೌ,3ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 ಮೊದಲ ವಿಕೆಟ್‌ಗೆ ಗಪ್ಟಿಲ್ ಮತ್ತು ನಿಕೊಲ್ಸ್ 16.3 ಓವರ್‌ಗಳಲ್ಲಿ 106 ರನ್ ಕಲೆ ಹಾಕಿದ್ದರು. ಅವರು ಆರಂಭದಲ್ಲಿ 40 ಎಸೆತಗಳಲ್ಲಿ 50 ರನ್ ಸೇರಿಸುವ ಮೂಲಕ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.

     ಗಪ್ಟಿಲ್ ಭಾರತದ ಪರ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಅದರಲ್ಲೂ ಮುಖ್ಯವಾಗಿ ನವದೀಪ ಸೈನಿ (68ಕ್ಕೆ 0) ಮತ್ತು ಶಾರ್ದೂಲ್ ಠಾಕೂರ್ (87ಕ್ಕೆ 1) ಹೆಚ್ಚು ದಂಡನೆಗೊಳಗಾದರು. ಇವರು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ರನ್ ಹೊಳೆಯನ್ನು ನಿಯಂತ್ರಿಸುವಲ್ಲಿ ವಿಫಲರಾದರು. ಜಸ್‌ಪ್ರೀತ್ ಬುಮ್ರಾ (10-0-50-0) ವಿಕೆಟ್ ಪಡೆಯುವಲ್ಲಿ ವಿಫಲರಾದರು. ಸರಣಿಯಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡರು

  

ಯಜುವೇಂದ್ರ ಚಹಾಲ್(10-1-47-3) ಅವರು ಮಾತ್ರ ಭಾರತದ ಪರ ಯಶಸ್ಸು ಸಾಧಿಸಿದರು. ಅವರು ಮಾರ್ಟಿನ್ ಗಪ್ಟಿಲ್ ಬ್ಯಾಟಿಂಗ್‌ನ್ನು ನಿಯಂತ್ರಿಸಿದ್ದರು. ನಿಕೊಲ್ಸ್ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಎಚ್ಚರಿಕೆಯಿಂದ ಆಡಿ ಶತಕದ ತ್ತ ನೋಡುತ್ತಿದ್ದ ನಿಕೊಲ್ಸ್‌ರ ಬ್ಯಾಟಿಂಗ್‌ನ್ನು ಶಾರ್ದೂಲ್ 80ರಲ್ಲಿ ಕೊನೆಗೊಳಿಸಿದರು. ಸರಣಿಯಲ್ಲಿ ಮೊದಲ ಬಾರಿ ಆಡಿದ ನಾಯಕ ಕೇನ್ ವಿಲಿಯಮ್ಸನ್ ಮತ್ತು ನಿಕೊಲ್ಸ್ 2ನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟ ನೀಡಿದರು. ಚಹಾಲ್ ಇವರ ಜೊತೆಯಾಟವನ್ನು ಮುರಿದರು.

 ಉತ್ತಮ ಫಾರ್ಮ್‌ನಲ್ಲಿರುವ ರಾಸ್ ಟೇಲರ್‌ಗೆ ರವೀಂದ್ರ ಜಡೇಜ ಬೇಗನೇ ಪೆವಿಲಿಯನ್ ಹಾದಿ ತೋರಿಸಿದರು. ಒಂದು ಹಂತದಲ್ಲಿ ನ್ಯೂಝಿಲ್ಯಾಂಡ್ 32.5 ಓವರ್‌ಗಳಲ್ಲಿ 189ಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಐದನೇ ವಿಕೆಟ್‌ಗೆ ಜೇಮ್ಸ್ ನಿಶಾಮ್ ಮತ್ತು ಟಾಮ್ ಲಥಾಮ್ 31 ರನ್ ಜಮೆ ಮಾಡಿದರು.

  6ನೇ ವಿಕೆಟ್‌ಗೆ ಟಾಮ್ ಲಥಾಮ್ ಮತ್ತು ಗ್ರಾಂಡ್‌ಹೋಮ್ ಮುರಿಯದ ಜೊತೆಯಾಟದಲ್ಲಿ 80 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗ್ರಾಂಡ್‌ಹೋಮ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತದ ಬೌಲಿಂಗ್ ಮತ್ತು ಫೀಲ್ಡಿಂಗ್ ವೈಫಲ್ಯದ ಪ್ರಯೋಜನ ಪಡೆದ ಕಿವೀಸ್‌ನ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ 300 ರನ್ ಸೇರಿಸಿದರು. ಕಿವೀಸ್ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಲ್ಲಿ ಭಾರತದ ಬೌಲರ್‌ಗಳು ವಿಫಲರಾದರು.

ಗ್ರಾಂಡ್‌ಹೋಮ್ ಔಟಾಗದೆ 58 ರನ್(28ಎ, 6ಬೌ,3ಸಿ) ಮತ್ತು ವಿಕೆಟ್ ಕೀಪರ್ ಟಾಮ್ ಲಥಾಮ್ ಔಟಾಗದೆ 32 ರನ್(34ಎ, 3ಬೌ) ಗಳಿಸಿದರು.

ರಾಹುಲ್ ನಾಲ್ಕನೇ ಶತಕ: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 296 ರನ್ ಗಳಿಸಿತ್ತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಾಹುಲ್ ನಾಲ್ಕನೇ ಏಕದಿನ ಶತಕ ದಾಖಲಿಸುವ ಮೂಲಕ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ 112 ರನ್(113ಎ, 9ಬೌ, 2ಸಿ) ಗಳಿಸಿದರು.

   ಭಾರತದ ಆರಂಭ ಚೆನ್ನಾಗಿರಲಿಲ್ಲ. ಮಾಯಾಂಕ್ ಅಗರ್ವಾಲ್(1) ಮತ್ತೊಮ್ಮೆ ವಿಫಲರಾದರು. ನಾಯಕ ಕೊಹ್ಲಿ(9) ಒಂದು ಸಿಕ್ಸರ್ ಸಿಡಿಸಿ ದೊಡ್ಡ ಮೊತ್ತದ ಸ್ಕೋರ್ ದಾಖಲಿಸುವ ಸೂಚನೆ ನೀಡುತ್ತಿದ್ದಂತೆ ಅವರ ಬ್ಯಾಟಿಂಗ್‌ಗೆ ಬೆನೆಟ್ ಕಡಿವಾಣ ಹಾಕಿದರು. ಆದರೆ ಭಾರತದ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ(40) ಮಿಂಚಿದರು.

12.1 ಓವರ್‌ಗಳಲ್ಲಿ 62ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಶ್ರೇಯಸ್ ಅಯ್ಯರ್ ಮತ್ತು ರಾಹುಲ್ 4ನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದರು. ಅಯ್ಯರ್ 62ರನ್(63ಎ, 9ಬೌ) ಗಳಿಸಿ ಔಟಾದರು.

ಅಯ್ಯರ್ ಸರಣಿಯಲ್ಲಿ ಸತತ ಮೂರನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಅವರ ನಿರ್ಗಮನದ ಬಳಿಕ ರಾಹುಲ್ ಮತ್ತು ಮನೀಷ್ ಪಾಂಡೆ 6ನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿದರು.

     ರಾಹುಲ್ 104 ಎಸೆತಗಳಲ್ಲಿ ನಾಲ್ಕನೇ ಶತ ಕ ಪೂರೈಸಿದರು. ಬೆನೆಟ್ ಅವರು ರಾಹುಲ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಬೆನ್ನಲ್ಲೇ ಮನೀಷ್ ಪಾಂಡೆಯನ್ನು ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಶಾರ್ದುಲ್ ಠಾಕೂರ್ 7 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜ 8ರನ್ ಮತ್ತು ನವದೀಪ್ ಸೈನಿ 8 ರನ್ ಗಳಿಸಿ ಔಟಾಗದೆ ಉಳಿದರು.

ನ್ಯೂಝಿಲ್ಯಾಂಡ್ ತಂಡದ ಹಾಮಿಶ್ ಬೆನೆಟ್ 64ಕ್ಕೆ 4 ವಿಕೆಟ್, ಕೈಲ್ ಜಮೀಸನ್ ಮತ್ತು ಜೇಮ್ಸ್ ನಿಶಾಮ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News